ನವದೆಹಲಿ[ಜ.23]: ಮರಣದಂಡನೆ ಪ್ರಕರಣಗಳ ಮಾರ್ಗದರ್ಶಿ ನಿಯಮಗಳು ‘ಸಂತ್ರಸ್ತ ಕೇಂದ್ರಿತ’ ಆಗಿರಬೇಕು. ದೋಷಿಗಳು ಮರಣದಂಡನೆ ವಿರುದ್ಧ ಹೋರಾಡಲು ಬಳಕೆಯಾಗುವ ಕಾನೂನು ಅವಕಾಶಗಳಿಗೆ ಕಾಲಮಿತಿ ನಿಗದಿಪಡಿಸಬೇಕು. ಡೆತ್‌ ವಾರಂಟ್‌ ಜಾರಿಯಾದ 7 ದಿನದೊಳಗೆ ದೋಷಿ ನೇಣುಗಂಬಕ್ಕೇರುವಂತಾಗಬೇಕು. ಈ ಸಂಬಂಧ ಹೊಸ ಮಾರ್ಗದರ್ಶಿ ನಿಯಮಗಳನ್ನು ರಚಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ.

ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!

ಇತ್ತೀಚಿನ ‘ನಿರ್ಭಯಾ ಗ್ಯಾಂಗ್‌ರೇಪ್‌’ ಪ್ರಕರಣದ ದೋಷಿಗಳು ಗಲ್ಲು ಶಿಕ್ಷೆಯಿಂದ ಬಚಾವಾಗಲು ಅಥವಾ ಶಿಕ್ಷೆ ಮುಂದೂಡಿಕೆಯಾಗುವಂತಾಗಲು ನಾನಾ ರೀತಿಯ ಅರ್ಜಿಗಳನ್ನು ಸಲ್ಲಿಸುತ್ತ ಮರಣದಂಡನೆ ಶಿಕ್ಷೆಯ ಜಾರಿ ಮುಂದೂಡುವಂತೆ ಮಾಡುತ್ತಿದ್ದಾರೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಗ ಸುಪ್ರೀಂ ಕೋರ್ಟ್‌ ಮೊರೆ ಹೋಗಿ, ಕಾಲಮಿತಿಯಲ್ಲಿ ಗಲ್ಲುಶಿಕ್ಷೆ ಜಾರಿಗೊಳಿಸುವ ನಿಯಮ ರೂಪುಗೊಳ್ಳಬೇಕು ಎಂದು ಕೋರಿರುವುದು ಮಹತ್ವ ಪಡೆದಿದೆ.

‘ಮರಣದಂಡನೆ ಶಿಕ್ಷೆಯ ಮರುಪರಿಶೀಲನಾ ಅರ್ಜಿ ವಜಾ ಆದ ಇಂತಿಷ್ಟುದಿನಗಳ ಒಳಗಾಗಿ ಕ್ಯುರೇಟಿವ್‌ ಅರ್ಜಿ ಹಾಕುವ ಕಾಲಮಿತಿ ಇರಬೇಕು. ಡೆತ್‌ ವಾರಂಟ್‌ ಹೊರಡಿಸಿದ 7 ದಿನಗಳಲ್ಲಿ ಕೇವಲ ಕ್ಷಮಾದಾನ ಅರ್ಜಿ ಸಲ್ಲಿಕೆಗೆ ಮಾತ್ರ ಗಲ್ಲುಶಿಕ್ಷೆ ದೋಷಿಗೆ ಅವಕಾಶ ಇರಬೇಕು. ಒಂದು ವೇಳೆ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡರೆ 7 ದಿನಗಳೊಳಗೆ ರಾಜ್ಯ ಸರ್ಕಾರಗಳು ಹಾಗೂ ಜೈಲಧಿಕಾರಿಗಳು ಪುನಃ ಡೆತ್‌ ವಾರಂಟ್‌ ಹೊರಡಿಸಬೇಕು. ಡೆತ್‌ ವಾರಂಟ್‌ ಹೊರಡಿಸಿದ 7 ದಿನದೊಳಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು’ ಎಂದು ಕೇಂದ್ರ ಗೃಹ ಸಚಿವಾಲಯ ಕೋರಿದೆ.

ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್‌ಗಳ ಶತ ಪ್ರಯತ್ನ!

ಈಗಿನ ನಿಯಮಗಳ ಪ್ರಕಾರ, ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡ ನಂತರ ದೋಷಿಗೆ ನೇಣಿಗೇರಲು 14 ದಿನ ಕಾಲಾವಕಾಶ ನೀಡಬೇಕು. ಆದರೆ ಇದಕ್ಕೆ ಸಾರ್ವಜನಿಕರ ತೀವ್ರ ಆಕ್ಷೇಪವಿದೆ.