ಲಸಿಕೆ ಉತ್ಪಾದನೆಗೆ ಬೇರೆ ಬೇರೆ ಕಂಪನಿಗಳಿಗೆ ಆಹ್ವಾನ
- ದೇಶಾದ್ಯಂತ ಲಸಿಕೆಯ ಅಭಾವ ತಣಿಸುವ ನಿಟ್ಟಿನಲ್ಲಿ ಬೇರೆ ಬೇರೆ ಕಂಪನಿಗಳಿಗೆ ಆಹ್ವಾನ
- ಭಾರತ್ ಬಯೋಟೆಕ್ ಸಂಸ್ಥೆಯಿಂದ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಇತರ ಕಂಪನಿಗಳಿಗೂ ಆಹ್ವಾನ
- ಆಗಸ್ಟ್ ಮತ್ತು ಡಿಸೆಂಬರ್ ಅವಧಿಯಲ್ಲಿ 200 ಕೋಟಿಗಿಂತ ಹೆಚ್ಚು ಡೋಸ್ ಉತ್ಪಾದನೆ ಗುರಿ
ನವದೆಹಲಿ (ಮೇ.14): ದೇಶಾದ್ಯಂತ ಲಸಿಕೆಯ ಅಭಾವ ತಣಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಇತರ ಕಂಪನಿಗಳಿಗೂ ಆಹ್ವಾನಿಸಲು ನಿರ್ಧರಿಸಿವೆ ಎಂದು ಸರ್ಕಾರದ ಹಿರಿಯ ಸಲಹೆಗಾರ ಡಾ.ವಿ.ಕೆ ಪೌಲ್ ಮಾಹಿತಿ ನೀಡಿದ್ದಾರೆ. ತನ್ಮೂಲಕ ಇದೇ ವರ್ಷದ ಆಗಸ್ಟ್ ಮತ್ತು ಡಿಸೆಂಬರ್ ಅವಧಿಯಲ್ಲಿ 200 ಕೋಟಿಗಿಂತ ಹೆಚ್ಚು ಡೋಸ್ ಉತ್ಪಾದನೆ ಗುರಿ ಮುಟ್ಟಲು ಯೋಜನೆ ಹಾಕಿಕೊಂಡಿದೆ.
ಈ ಬಗ್ಗೆ ಗುರುವಾರ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪೌಲ್ ಅವರು, ‘ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ಅವಕಾಶವನ್ನು ಭಾರತ್ ಬಯೋಟೆಕ್ ಸಂಸ್ಥೆ ಹೊರತುಪಡಿಸಿ ಇತರ ಕಂಪನಿಗಳಿಗೂ ನೀಡಬೇಕು. ತನ್ಮೂಲಕ ದೇಶದಲ್ಲಿ ಉದ್ಭವವಾಗಿರುವ ಲಸಿಕೆ ಹಾಹಾಕಾರವನ್ನು ತಪ್ಪಿಸಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಶೀಘ್ರ ಇನ್ನೂ 3 ಹೊಸ ಲಸಿಕೆ ಮಾರುಕಟ್ಟೆಗೆ : ಮುಂದಿನವಾರ ಬರಲಿದೆ ಸ್ಪುಟ್ನಿಕ್ ...
ಇಂಥ ಹೊತ್ತಿನಲ್ಲಿ ಸರ್ಕಾರದ ಇಂಥದ್ದೇ ಪ್ರಸ್ತಾಪಕ್ಕೆ ಭಾರತ್ ಬಯೋಟೆಕ್ ಸಹ ಒಪ್ಪಿಗೆ ಸೂಚಿಸಿದೆ. ಬಿಎಸ್‌ಎಲ್-3(ಜೈವಿಕ ಸುರಕ್ಷತೆಯ 3ನೇ ಹಂತ)ದ ಸುರಕ್ಷತೆಯ ಪ್ರಯೋಗಾಲಯ ಹೊಂದಿದ ಕಂಪನಿಗಳಿಂದ ಮಾತ್ರವೇ ಈ ಲಸಿಕೆ ಉತ್ಪಾದನೆ ಸಾಧ್ಯವಿದೆ. ಹೀಗಾಗಿ ಈ ವ್ಯವಸ್ಥೆ ಹೊಂದಿದ ಎಲ್ಲಾ ಕಂಪನಿಗಳಿಗೆ ಲಸಿಕೆ ಉತ್ಪಾದನೆಗೆ ಆಹ್ವಾನಿಸಲಾಗಿದ್ದು, ಆ ಕಂಪನಿಗಳಿಗೆ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಸಲಹೆಗಳನ್ನು ನೀಡಲಿದೆ’ ಎಂದು ಹೇಳಿದರು.
5 ತಿಂಗಳಲ್ಲಿ ದೇಶದ ಎಲ್ಲರಿಗೂ ಲಸಿಕೆ : 216 ಕೊಟಿ ಡೋಸ್ ಉತ್ಪಾದನೆ .
ದೇಶಾದ್ಯಂತ ಕೇಂದ್ರ ಸರ್ಕಾರ ಕೊರೋನಾ ವೈರಸ್ ನಿಯಂತ್ರಣ ಮತ್ತು ಲಸಿಕೆ ಅಭಿಯಾನದ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬ ಆಕ್ರೋಶಗಳು ವ್ಯಕ್ತವಾಗಿರುವ ಬೆನ್ನಲ್ಲೇ, ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಅವಕಾಶವನ್ನು ಇತರ ಕಂಪನಿಗಳಿಗೂ ನೀಡುವ ಹೇಳಿಕೆ ಹೊರಬಿದ್ದಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona