ನವದೆಹಲಿ (ಮೇ.14): ದೇಶಾದ್ಯಂತ ಲಸಿಕೆ ಕೊರತೆ ಎದುರಾಗಿರುವ ಹೊತ್ತಿನಲ್ಲೇ, ಈಗಿರುವ ಎರಡು ಲಸಿಕೆಗಳ ಜೊತೆಗೆ ಶೀಘ್ರವೇ ಇನ್ನೂ ಮೂರು ಲಸಿಕೆಗಳು ಜನರ ಬಳಕೆಗೆ ಲಭ್ಯವಾಗುವ ಶುಭ ಸೂಚನೆ ಬಿದ್ದಿದೆ. ಹೀಗಾಗಿ ಕೊರತೆ ಲಸಿಕೆ ನೀಗುವ ಆಶಾಭಾವನೆ ವ್ಯಕ್ತವಾಗಿದೆ.

ಸ್ಪುಟ್ನಿಕ್‌

ಕೇಂದ್ರ ಸರ್ಕಾರ ರಷ್ಯಾದ ಸ್ಪುಟ್ನಿಕ್‌ ಲಸಿಕೆಗೂ ಅನುಮೋದನೆ ನೀಡಿದೆ. ಈಗಾಗಲೇ 1.5 ಲಕ್ಷ ಡೋಸ್‌ ಸ್ಪುಟ್ನಿಕ್‌ ಲಸಿಕೆ ಮೊದಲ ಹಂತದಲ್ಲಿ ಭಾರತಕ್ಕೆ ಆಗಮಿಸಿದ್ದು, ಶುಕ್ರವಾರ ಇನ್ನೂ 3 ಲಕ್ಷ ಡೋಸ್‌ ಭಾರತಕ್ಕೆ ಆಗಮಿಸಿದೆ. ಇದನ್ನು ಮುಂದಿನ ವಾರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಸ್ಪುಟ್ನಿಕ್ ಲಸಿಕೆ ಬಳಸಿದ ರಾಜ್ಯದಲ್ಲಿ ಹೊಸ ಕೊರೋನಾ ಕೇಸ್ ಇಲ್ಲ..! ...

ಝೈಕೋವ್‌ ಡಿ

ಅಹಮದಾಬಾದ್‌ ಮೂಲದ ಝೈಡಸ್‌ ಕ್ಯಾಡಿಲಾ ಸಂಸ್ಥೆ ಉತ್ಪಾದಿಸಿರುವ ಝೈಕೋವ್‌-ಡಿ ಲಸಿಕೆ ಕೂಡಾ 2ನೇ ಹಂತದ ಪ್ರಯೋಗ ನಡೆಸುತ್ತಿದ್ದು, ಲಸಿಕೆ ಎಷ್ಟುಪರಿಣಾಮಕಾರಿ ಎಂಬ ಮಾಹಿತಿಯನ್ನು ಇದೇ ತಿಂಗಳ ಅಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದೆ. ಲಸಿಕೆ ಬಳಕೆಗೆ ತುರ್ತು ಅನುಮತಿ ಸಿಕ್ಕರೆ ಜೂನ್‌ ತಿಂಗಳಲ್ಲೇ ಲಸಿಕೆ ಬಿಡುಗಡೆ ಮಾಡಲಿದ್ದೇವೆ. ಆರಂಭದಲ್ಲಿ ಮಾಸಿಕ 1 ಕೋಟಿ ಡೋಸ್‌ ಉತ್ಪಾದನೆ ಗುರಿ ಇದೆ. ನಂತರದಲ್ಲಿ ಅದನ್ನು ದ್ವಿಗುಣಗೊಳಿಸಲಿದ್ದೇವೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಾಕ ಡಾ. ಶಾರ್ವಿಲ್‌ ಪಟೇಲ್‌ ತಿಳಿಸಿದ್ದಾರೆ.

ರಾಜ್ಯಾದ್ಯಂತ ಲಸಿಕೆಗಾಗಿ ಹಾಹಾಕಾರ, ಆರೋಗ್ಯ ಕೇಂದ್ರಗಳ ಮುಂದೆ ಕ್ಯೂ.! ...

ಬಿಇ ಲಸಿಕೆ

ಹೈದ್ರಾಬಾದ್‌ ಮೂಲದ ಬಯೋಲಾಜಿಕಲ್‌ ಇ ಲಿ. ಉತ್ಪಾದಿಸುತ್ತಿರುವ ಲಸಿಕೆ ಕೂಡಾ 2ನೇ ಹಂತದ ಪ್ರಯೋಗಕ್ಕೆ ಒಳಪಟ್ಟಿದ್ದು, ಇದೀಗ 3ನೇ ಹಂತಕ್ಕೆ ಅನುಮೋದನೆ ಪಡೆದುಕೊಂಡಿದೆ. ಈ ಸಂಸ್ಥೆ ಕೂಡಾ ತುರ್ತು ಬಳಕೆಗೆ ಅನುಮತಿ ಸಿಕ್ಕರೆ ಆಗಸ್ಟ್‌ ತಿಂಗಳಲ್ಲೇ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿವೆ. ಝೈಡಸ್‌ ಕ್ಯಾಡಿಲಾ ಮತ್ತು ಬಯೋಲಾಜಿಕಲ್‌ ಇ ಎರಡೂ ಕಂಪನಿಗಳು ಉತ್ಪಾದಿಸಿರುವುದು ದೇಶೀಯ ಲಸಿಕೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona