Covid-19 Vaccine:ಎರಡನೇ ಚುಚ್ಚುಮದ್ದು ಚುಚ್ಚಿಸಿಕೊಳ್ಳಿರಿ, ಬಹುಮಾನ ಗೆಲ್ರಿ !
*ಸ್ವಯಂ ಪ್ರೇರಿತ ಲಸಿಕೆ ಪಡೆದವರು ಲಸಿಕಾ ರಾಯಭಾರಿಗಳಾಗಿ ನೇಮಕ
*ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ನೀಡುವ ಕಾರ್ಯಕ್ರಮ
*ರಾಜ್ಯದಲ್ಲಿ ಕೋವಿಡ್-19 ಲಸಿಕೆಯ ಎರಡನೇ ಡೋಸ್‌ಗೆ ಜನರ ನಿರುತ್ಸಾಹ
ನವದೆಹಲಿ(ನ.22): ಕೋವಿಡ್ ಲಸಿಕಾಕರಣ (Covid19 Vaccine) ಉತ್ತೇಜಿಸಲು ಕೇಂದ್ರ ಸರ್ಕಾರ ‘ಲಕ್ಕಿ ಡ್ರಾ’ (Lucky Draw) ಯೋಜನೆ ಆರಂಭಿಸುವ ಸಿದ್ಧತೆ ನಡೆಸಿದೆ ಎಂಬ ಕುತೂಹಲದ ಮಾಹಿತಿ ಲಭಿಸಿದೆ. ಇನ್ನೂ ಮೊದಲ ಡೋಸ್ ಲಸಿಕೆ ಪಡೆಯದ ಹಾಗೂ ಗಡುವು ಮುಗಿದಿದ್ದರೂ 2ನೇ ಡೋಸ್ ಪಡೆಯದ ಜನರು ವ್ಯಾಕ್ಸಿನ್ ಪಡೆಯುವುದನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭಾನುವಾರ ಸರ್ಕಾರದ ಮೂಲಗಳು ಹೇಳಿವೆ. ಇದೇ ವೇಳೆ ಎರಡೂ ಡೋಸ್ ಪಡೆದವರಿಗೆ ‘ನಾನು ಸಂಪೂರ್ಣ ಲಸಿಕೆ ಪಡೆದಿದ್ದೇನೆ’ ಎಂಬ ಬ್ಯಾಡ್ಜ್‌ಗಳನ್ನು (badge) ವಿತರಿಸುವ ಯೋಜನೆಯನ್ನು ಆರಂಭಿಸಲು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಲಸಿಕೆ ಡ್ರಾ:
ಎರಡೂ ಡೋಸ್ ಲಸಿಕೆ ಪಡೆದವರಿಗಾಗಿ ವಾರ ಅಥವಾ ತಿಂಗಳಲ್ಲಿ ಒಂದು ಬಾರಿ ಲಕ್ಕಿ ಡ್ರಾ ಬಹುಮಾನ ನೀಡಲಾಗುತ್ತದೆ. ಈ ಲಕ್ಕಿ ಡ್ರಾನಲ್ಲಿ ಬಹುಮಾನವಾಗಿ ಅಡುಗೆ ಮನೆಯಲ್ಲಿ ಬಳಸುವ ಉಪಕರಣಗಳು, ರೇಶನ್ ಕಿಟ್ (Rationa Kit) , ಪ್ರವಾಸದ ಪಾಸ್ (Tour Pass), ನಗದು ಬಹುಮಾನ (Cash) ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ಒಂದೂ ಡೋಸ್ ಲಸಿಕೆ ಪಡೆಯದ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯಬೇಕಿರುವ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಅವರು ಕೆಲಸ ಮಾಡುವ ಸ್ಥಳದಲ್ಲೇ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
‘ಮನೆ ಬಾಗಿಲಿಗೆ ಲಸಿಕೆ’ ಕಾರ‍್ಯಕ್ರಮದ ಅಂಗವಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆವವರನ್ನು ರಾಯಭಾರಿಗಳನ್ನಾಗಿ ನೇಮಿಸಲಾಗುವುದು. ಇವರು ಉಳಿದವರು ಲಸಿಕೆ ಪಡೆಯುವಂತೆ ಮನವೊಲಿಸಲಿದ್ದಾರೆ ಎಂದು ಸರ್ಕಾರ ಹೇಳಿದೆ
ಲಕ್ಕಿ ಡ್ರಾ ಯೋಜನೆ ಏಕೆ?: ಲಸಿಕೆ ಪಡೆಯಲು ಕೆಲವು ಜನರು ಹಿಂದೇಟು ಹಾಕುತ್ತಿದ್ದಾರೆ. ಅವರನ್ನು ಉತ್ತೇಜಿಸಲು ‘ಲಕ್ಕಿ ಡ್ರಾ’ ಯೋಜನೆ.
‘ಲಕ್ಕಿ ಡ್ರಾ’ ಬಹುಮಾನ ಏನು? : ಅಡುಗೆಮನೆಯಲ್ಲಿ ಬಳಸುವ ಉಪಕರಣಗಳು, ರೇಶನ್ ಕಿಟ್, ಪ್ರವಾಸಿ ಪಾಸ್, ನಗದು ಬಹುಮಾನ
2ನೇ ಡೋಸ್ ಲಸಿಕೆ ಕಡ್ಡಾಯ ಮಾಡಿ: ತಜ್ಞರು
ರಾಜ್ಯದಲ್ಲಿ(Karnataka) ಕೋವಿಡ್-19(Covid19) ಲಸಿಕೆಯ ಎರಡನೇ ಡೋಸ್ ಪಡೆಯಲು ಜನರು ನಿರುತ್ಸಾಹ ತೋರುತ್ತಿರುವುದು ಮತ್ತು ಕೆಲ ದೇಶಗಳಲ್ಲಿ ಕೋವಿಡ್ ಮತ್ತೆ ರಣಕೇಕೆ ಹಾಕುತ್ತಿರುವುದನ್ನು ಗಮನಿಸಿ ಎರಡನೇ ಡೋಸ್ ಪಡೆಯುವುದನ್ನು ಕಡ್ಡಾಯ ಮಾಡಬೇಕು ಎಂದು ಆರೋಗ್ಯ ತಜ್ಞರು(Health Experts) ರಾಜ್ಯ ಸರ್ಕಾರಕ್ಕೆ(Government of Karnataka) ಒತ್ತಾಯ ಮಾಡಿದ್ದಾರೆ.
ಕೋವಿಡ್ ಲಸಿಕೆ(Vaccine) ಪಡೆಯಲು ಅರ್ಹರಾಗಿರುವ ವಯಸ್ಕರಲ್ಲಿ ಶೇ.88ರಷ್ಟು ಮಂದಿ ಈಗಾಗಲೇ ಮೊದಲ ಡೋಸ್ ಪಡೆದಿದ್ದಾರೆ. ಆದರೆ ಎರಡನೇ ಡೋಸ್ ಪಡೆದವರ ಸಂಖ್ಯೆ ಶೇ.50 ಮುಟ್ಟಿಲ್ಲ. ಈ ಮಧ್ಯೆ ಲಸಿಕೆಯ ಎರಡನೇ ಡೋಸ್ ಪಡೆಯುವ ಅವಧಿ ಮುಕ್ತಾಯಗೊಂಡಿದ್ದರೂ ಎಷ್ಟೋ ಮಂದಿ ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಕೆಲ ರಾಷ್ಟ್ರಗಳಲ್ಲಿ ಲಸಿಕಾಕರಣದ ಬಗ್ಗೆ ತೋರಿದ್ದ ಅಸಡ್ಡೆಗೆ ಬೆಲೆ ತೆರುವ ಸ್ಥಿತಿ ಬಂದಿದೆ. ಹೀಗಾಗಿ ಕೊರೋನಾ(Coronavirus) ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಮಾತ್ರ ಸಾಮಾಜಿಕ- ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡಬೇಕು. ತನ್ಮೂಲಕ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸರ್ಕಾರ ಅನ್‌ಲಾಕ್(Unlock) ಪ್ರಕ್ರಿಯೆ ಆರಂಭಿಸಿ ಒಂದೊಂದೇ ಚಟುವಟಿಕೆಗೆ ಅವಕಾಶ ನೀಡುವ ಸಂದರ್ಭದಲ್ಲಿ ಲಸಿಕೆಯ ಮೊದಲ ಡೋಸ್ ಅನ್ನು ಕಡ್ಡಾಯ ಮಾಡಿತ್ತು. ಆದರೆ ಇದೀಗ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದರೂ ಎರಡನೇ ಡೋಸ್ ಪಡೆದು ಪೂರ್ಣ ಲಸಿಕಾಕರಣಕ್ಕೆ ಒಳಗಾದವರು ಮಾತ್ರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂಬ ಆದೇಶ ಹೊರಡಿಸಿಲ್ಲ. ಆದ್ದರಿಂದ ಜನರು ಎರಡನೇ ಡೋಸ್ ಪಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಜ್ಞರು ಹೇಳುತ್ತಾರೆ.