ನವದೆಹಲಿ[ಮಾ.20]:  ಕೊರೋನಾ ವೈರಸ್‌ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಗುರುವಾರ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಅಗತ್ಯ ಮತ್ತು ತುರ್ತು ಸೇವೆಗಳ ವ್ಯಾಪ್ತಿಗೆ ಒಳಪಡದ ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳ ಶೇ.50ರಷ್ಟುನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ವಿದೇಶದಿಂದ ಬಂದಿರುವವರಿಂದಲೇ ಹೆಚ್ಚಿನ ಸೋಂಕು ಹಬ್ಬುತ್ತಿರುವ ಕಾರಣ ಮಾಚ್‌ರ್‍ 22ರಿಂದ ಭಾರತಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಬರುವುದನ್ನು ನಿರ್ಬಂಧಿಸಲಾಗಿದೆ.

ಇದಲ್ಲದೆ 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ರೈಲು ಹಾಗೂ ವಿಮಾನಗಳಲ್ಲಿ ಅಂಗವಿಕಲರು, ವಿದ್ಯಾರ್ಥಿಗಳು ಹಾಗೂ ರೋಗಿಗಳನ್ನು ಹೊರತುಪಟಿಸಿ ಮಿಕ್ಕ ಎಲ್ಲ ರಿಯಾಯಿತಿ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ.

ವರ್ಕ್ ಫ್ರಂ ಹೋಮ್‌:  ಕೇಂದ್ರ ಸರ್ಕಾರಿ ನೌಕರರು ‘ಮನೆಯಿಂದಲೇ ಕೆಲಸ’ (ವರ್ಕ್ ಫ್ರಂ ಹೋಮ್‌) ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶೇ.50ರಷ್ಟುಗ್ರೂಪ್‌ ಬಿ ಹಾಗೂ ಗ್ರೂಪ್‌ ಸಿ ಉದ್ಯೋಗಿಗಳು ಕಚೇರಿಗೆ ಬರಬೇಕು. ಉಳಿದವರು ಮನೆಯಿಂದಲೇ ಕೆಲಸ ಮಾಡಬಹುದು ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯವು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದೆ.

‘ಎಲ್ಲ ಇಲಾಖೆಗಳ ಮುಖ್ಯಸ್ಥರು ಶೇ.50ರಷ್ಟುಸಿಬ್ಬಂದಿಗೆ ಮಾತ್ರ ಕಚೇರಿಗೆ ಬರಲು ಸೂಚಿಸಬೇಕು. ಇನ್ನುಳಿದ ಶೇ.50 ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಬೇಕು. ಇದಾದ ಒಂದು ವಾರದ ನಂತರ ಮನೆಯಲ್ಲಿ ಕೆಲಸ ಮಾಡಿದವರು 1 ವಾರದ ಮಟ್ಟಿಗೆ ಕಚೇರಿಗೆ ಬರಬೇಕು. ಕಚೇರಿಯಲ್ಲಿ ಕೆಲಸ ಮಾಡಿದವರು 1 ವಾರ ಮನೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿ ವಾರ ಇದು ಇದೇ ರೀತಿ ಬದಲಾಗುತ್ತಿರಬೇಕು’ ಎಂದು ನಿರ್ದೇಶಿಸಲಾಗಿದೆ.

ಕೊರೋನಾ ವೈರಸ್‌ನಿಂದ ದೇಶವನ್ನ ಉಳಿಸಲು ನಮೋ ಮಂತ್ರ..

ಇದೇ ವೇಳೆ, ‘ಎಲ್ಲರೂ ಒಟ್ಟಿಗೇ ಕೆಲಸ ಮಾಡುವ ಬದಲು ಕಚೇರಿಗಳು 3 ಹಂತದಲ್ಲಿ ಕೆಲಸ ಮಾಡಬೇಕು. ಬೆಳಗ್ಗೆ 9ರಿಂದ ಸಂಜೆ 5.30, ಬೆಳಗ್ಗೆ 9.30ರಿಂದ ಸಂಜೆ 6 ಹಾಗೂ ಬೆಳಗಗ್ಗೆ 10ರಿಂದ ಸಂಜೆ 6.30 ಈ ರೀತಿ ಮೂರು ಪಾಳಿಗಳಲ್ಲಿ ಕೆಲಸ ಮಾಡಬೇಕು. ವರ್ಕ್ ಫ್ರಂ ಹೋಂನಲ್ಲಿರುವ ಸಿಬ್ಬಂದಿ ಫೋನ್‌ ಹಾಗೂ ಇಂಟರ್ನೆಟ್‌ ಮೂಲಕ ಲಭ್ಯರಿರಬೇಕು. ಅಗತ್ಯ ಬಿದ್ದರೆ ಕಚೇರಿಗೆ ಬರಬೇಕು’ ಎಂದು ತಿಳಿಸಲಾಗಿದೆ.

ವಿಮಾನ ಬಂದ್‌:  ಇದೇ ವೇಳೆ ಮಾರ್ಚ್  22ರಿಂದ ಭಾರತಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಬರುವುದನ್ನು ನಿರ್ಬಂಧಿಸಲಾಗಿದೆ. ಮಾಚ್‌ರ್‍ 22ರಿಂದ 1 ವಾರದ ಮಟ್ಟಿಗೆ ಈ ಕ್ರಮ ಜರುಗಿಸಲಾಗಿದೆ. ಅಂದರೆ ಮಾ.23ರ ಮುಂಜಾನೆ 1.30ರ ಬಳಿಕ ಯಾವುದೇ ವಿದೇಶಿ ವಿಮಾನ ಭಾರತಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದಲ್ಲದೆ, 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ರೈಲು ಹಾಗೂ ವಿಮಾನಗಳಲ್ಲಿ ಅಂಗವಿಕಲರು, ವಿದ್ಯಾರ್ಥಿಗಳು ಹಾಗೂ ರೋಗಿಗಳನ್ನು ಹೊರತುಪಟಿಸಿ ಮಿಕ್ಕ ಎಲ್ಲ ರಿಯಾಯಿತಿ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ. ನೌಕರರನ್ನು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಉತ್ತೇಜಿಸಲು ಸೂಚಿಸಲಾಗಿದೆ.