Asianet Suvarna News Asianet Suvarna News

Gambia 66 ಮಕ್ಕಳ ಸಾವಿಗೆ ಭಾರತದ ಸಿರಪ್‌ ಕಾರಣ ಶಂಕೆ: ಕೇಂದ್ರ ಸರ್ಕಾರದಿಂದ ತನಿಖೆಗೆ ಆದೇಶ

ಗಾಂಬಿಯಾದಲ್ಲಿ 66 ಮಕ್ಕಳಿಗೆ ಭಾರತದ ಸಿರಪ್‌ ಕಾರಣ ಶಂಕೆ ಹಿನ್ನೆಲೆ ಕೇಂದ್ರ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಈ ಔಷಧ ಬಗ್ಗೆ ಎಚ್ಚರ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಎಚ್ಚರಿಕೆ ನೀಡಿದೆ. 

central government will investigate on cough syrup 66 children death in gambia ash
Author
First Published Oct 7, 2022, 8:11 AM IST

ಗಾಂಬಿಯಾ ದೇಶದಲ್ಲಿ ಇತ್ತೀಚೆಗೆ ಸಂಭವಿಸಿದ 66 ಮಕ್ಕಳ ಸಾವು ಮತ್ತು ಹಲವು ಮಕ್ಕಳಲ್ಲಿ ಕಿಡ್ನಿ ವೈಫಲ್ಯದ ಸಮಸ್ಯೆಗೆ ಭಾರತದ ಕಂಪನಿಯೊಂದು ಉತ್ಪಾದಿಸಿದ 4 ಮಾದರಿಯ ಕೆಮ್ಮು ಮತ್ತು ಶೀತದ ಸಿರಪ್‌ ಕಾರಣವಿರಬಹುದು ಎಂದು ಶಂಕಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ 4 ಮಾದರಿಯ ಸಿರಪ್‌ಗಳ ವಿರುದ್ಧ ತನಿಖೆಗೆ ಆದೇಶಿಸಿದೆ. ಇದೇ ವೇಳೆ ಸದ್ಯ ಗಾಂಬಿಯಾದಲ್ಲಿ ಮಾತ್ರ ಇಂಥ ಪ್ರಕರಣ ವರದಿಯಾಗಿದೆ. ಆದರೆ ಈ ಔಷಧಿಗಳು ಬೇರೆ ದೇಶಕ್ಕೂ ಪೂರೈಕೆಯಾಗಿರಬಹುದು. ಹೀಗಾಗಿ ಕೂಡಲೇ ಈ ಔಷಧವನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುವಂತೆ ಎಲ್ಲಾ ದೇಶಗಳಿಗೂ ವಿಶ್ವ ಆರೋಗ್ಯ ಸಂಸ್ಥೆ ಸಂದೇಶ ರವಾನಿಸಿದೆ. ಈ ನಡುವೆ ಗಾಂಬಿಯಾದಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ, ಭಾರತದ ಕಂಪನಿ ಉತ್ಪಾದಿಸಿರುವ ಔಷಧದ ಬಗ್ಗೆ ತಪಾಸಣೆ ಆರಂಭಿಸಿದ್ದಾರೆ.

ಹರ್ಯಾಣ ಮೂಲದ ಮೈಡೆನ್‌ ಫಾರ್ಮಸ್ಯುಟಿಕಲ್ಸ್‌ ಲಿಮಿಟೆಡ್‌ ಕಂಪನಿಯು ‘ಪ್ರೊಮೆಥೈಝೈನ್‌ ಓರಲ್‌ ಸೊಲ್ಯೂಷನ್‌’, ‘ಕೊಫೆಕ್ಸ್‌ಮಲಿನ್‌ ಬೇಬಿ ಕಾಫ್‌ ಸಿರಪ್‌’, ‘ಮಕಾಫ್‌ ಬೇಬಿ ಕಾಫ್‌ ಸಿರಪ್‌’ ಮತ್ತು ಮಾಗ್ರಿಪ್‌ ಎನ್‌ ಕೋಲ್ಡ್‌ ಸಿರಪ್‌’ ಎಂಬ 4 ಮಾದರಿಯ ಸಿರಪ್‌ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ವಿತರಿಸುತ್ತಿದೆ. ಈ ಕಂಪನಿ ಇದುವರೆಗೂ ಔಷಧದ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ನಮಗೆ ಯಾವುದೇ ವರದಿ ನೀಡಿಲ್ಲ. 

ಇದನ್ನು ಓದಿ: ಭಾರತೀಯ ಕಂಪನಿಯ ಕೆಮ್ಮಿನ ಔಷಧಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೈ ಅಲರ್ಟ್‌, ನಿಮ್ಮಲ್ಲಿದ್ದರೆ ಎಚ್ಚರ ವಹಿಸಿ!

ಈ ನಾಲ್ಕೂ ಸಿರಪ್‌ನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಅದರಲ್ಲಿ ಡೈಈಥೈಲೀನ್‌ ಗ್ಲೈಕೋಲ್‌ ಮತ್ತು ಈಥೈಲೀನ್‌ ಗ್ಲೈಕೋಲ್‌ ಅತ್ಯಂತ ಅಪಾಯಕಾರಿ ಮಟ್ಟದಲ್ಲಿರುವುದು ಕಂಡುಬಂದಿದೆ. ಇದು ವಿಷಕಾರಿ ಮತ್ತು ಅಪಾಯಕಾರಿ ಕೂಡಾ ಹೌದು. ಇದರ ಸೇವನೆ ಹೊಟ್ಟೆನೋವು, ವಾಂತಿ, ಅತಿಸಾರ, ಮೂತ್ರ ವಿಸರ್ಜನೆಗೆ ತೊಮದರೆ , ತಲೆನೋವು, ಮಾನಸಿಕ ಸಮಸ್ಯೆ, ಕಿಡ್ನಿ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಭಾರತ ಸರ್ಕಾರಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ
ಆದರೆ ಮಕ್ಕಳ ಸಾವಿಗೆ ಇದೇ ಔಷಧಿ ಕಾರಣ ಎನ್ನುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೂ ಸೂಕ್ತ ಮಾಹಿತಿ ನೀಡಿಲ್ಲ. ಆದರೂ ಕುರಿತು ನಾವು ತನಿಖೆ ಆರಂಭಿಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಹಲವು ದೇಶಗಳಿಗೆ ಕಂಪನಿ ಉತ್ಪನ್ನ
ವಿವಾದಕ್ಕೆ ಕಾರಣವಾಗಿರುವ ಮೈಡೆನ್‌ ಕಂಪನಿ 1990ರಲ್ಲಿ ಸ್ಥಾಪನೆಯಾಗಿದ್ದು, ಆಫ್ರಿಕಾ, ದಕ್ಷಿಣ ಅಮೆರಿಕ, ಆಗ್ನೇಯ ಏಷ್ಯಾದ ಹಲವು ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದು ಐಎಸ್‌ಒ9001-2015 ಮಾನ್ಯತೆ ಹೊಂದಿರುವ ಕಂಪನಿಯಾಗಿದೆ. ಈ ಕಂಪನಿ ವಾರ್ಷಿಕ 60 ಕೋಟಿ ಕ್ಯಾಪ್ಯುಲ್‌ ಮಾತ್ರೆಗಳು, 18 ಕೋಟಿ ಚುಚ್ಚುಮದ್ದು, 3 ಲಕ್ಷ ಆಯಿಂಟ್‌ಮೆಂಟ್‌ ಟ್ಯೂಬ್‌, 22 ಲಕ್ಷ ಸಿರಪ್‌, 120 ಕೋಟಿ ಮಾತ್ರೆಗಳನ್ನು ಉತ್ಪಾದಿಸುತ್ತದೆ.

Follow Us:
Download App:
  • android
  • ios