ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ ನಿಲ್ದಾಣಗಳಲ್ಲಿನ ಎಎಐ ಷೇರು ಹಿಂತೆಗೆತ ಸಂಬಂಧ ವಿಮಾನಯಾನ ಸಚಿವಾಲಯ ಅನುಮೋದನೆ ನೀಡುವ ನಿರೀಕ್ಷೆ| ಈ ವಿಷಯ ಸಂಪುಟದಲ್ಲೂ ಚರ್ಚೆಯಾಗುವ ಸಾಧ್ಯತೆ ಇದೆ| ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಎಐ ಮತ್ತು ಕರ್ನಾಟಕ ಸರ್ಕಾರ ಸೇರಿ ಶೇ.26ರಷ್ಟು ಷೇರು ಹೊಂದಿವೆ| 

ನವದೆಹಲಿ(ಮಾ.15): ಈಗಾಗಲೇ ಖಾಸಗೀಕರಣಕ್ಕೆ ಒಳಪಟ್ಟಿರುವ ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿನ ತನ್ನ ಉಳಿಕೆ ಪಾಲಿನ ಷೇರನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಆಸ್ತಿಗಳ ನಗದೀಕರಣದ ಮೂಲಕ 2.5 ಲಕ್ಷ ಕೋಟಿ ರು. ಸಂಗ್ರಹದ ತನ್ನ ಮಹತ್ವದ ಯೋಜನೆ ಅನ್ವಯ ಕೇಂದ್ರ ಸರ್ಕಾರ ಈ ಷೇರು ಪಾಲು ಮಾರಾಟಕ್ಕೆ ಮುಂದಾಗಿದೆ.

ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ (ಎಎಐ) ದೇಶದ ಈ 4 ವಿಮಾನ ನಿಲ್ದಾಣಗಳಲ್ಲಿ ಉಳಿಸಿಕೊಂಡಿರುವ ಷೇರು ಹಾಗೂ 2021-22ನೇ ಹಣಕಾಸು ವರ್ಷದಲ್ಲಿ ಖಾಸಗೀಕರಣಕ್ಕೆ ಗುರುತಿಸಲಾಗಿರುವ 13 ವಿಮಾನ ನಿಲ್ದಾಣಗಳ ಷೇರುಗಳ ಮಾರಾಟಕ್ಕೆ ಮಾತುಕತೆ ನಡೆಯುತ್ತಿದೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್‌ ನಿಲ್ದಾಣಗಳಲ್ಲಿನ ಎಎಐ ಷೇರು ಹಿಂತೆಗೆತ ಸಂಬಂಧ ವಿಮಾನಯಾನ ಸಚಿವಾಲಯ ಅನುಮೋದನೆ ನೀಡುವ ನಿರೀಕ್ಷೆ ಇದೆ. ಈ ವಿಷಯವು ಸಂಪುಟದಲ್ಲೂ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬೆಂಗ್ಳೂರಲ್ಲಿ ದೇಶದ ಪ್ರಥಮ ಕ್ಷಿಪ್ರ ಸರಕು ಸಾಗಣೆ ಕಾರ್ಗೊ ಟರ್ಮಿನಲ್‌ ಉದ್ಘಾಟನೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಎಐ ಮತ್ತು ಕರ್ನಾಟಕ ಸರ್ಕಾರ ಸೇರಿ ಶೇ.26ರಷ್ಟು ಷೇರನ್ನು ಹೊಂದಿವೆ. ಹಾಗೆಯೇ ದೆಹಲಿ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲೂ ಇಷ್ಟೇ ಪ್ರಮಾಣದ ಷೇರನ್ನು ಎಎಐ ಪಡೆದುಕೊಂಡಿದೆ.

ಕಳೆದ ವರ್ಷ ನಡೆದ ಮೊದಲ ಹಂತದ ಖಾಸಗೀಕರಣದಲ್ಲಿ ಮಂಗಳೂರು, ಲಖನೌ, ಅಹ್ಮದಾಬಾದ್‌, ಜೈಪುರ, ಗುವಾಹಟಿ ಮತ್ತು ತಿರುವನಂಥಪುರ ಸೇರಿ 6 ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್‌ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು. ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ದೇಶಾದ್ಯಂತ ಸುಮಾರು 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳ ಮಾಲೀಕತ್ವ ಮತ್ತು ನಿರ್ವಹಣೆ ಮಾಡುತ್ತಿದೆ.