ಕ್ಷಿಪ್ರ ಸರಕು ಸಾಗಣೆಯ ಟರ್ಮಿನಲ್‌ ಹೊಂದಿರುವ ದೇಶದ ಪ್ರಥಮ ಏರ್‌ಪೋರ್ಟ್‌| ಇದರ ಸಾಮರ್ಥ್ಯ 1.50 ಲಕ್ಷ ಟನ್‌| 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ| ಅಂತಾರಾಷ್ಟ್ರೀಯ ಕೊರಿಯರ್‌ಗಳ ಆಮದು ಮತ್ತು ರಫ್ತಿಗಾಗಿ ಪ್ರತ್ಯೇಕವಾಗಿ ಈ ಕಾರ್ಗೊ ಟರ್ಮಿನಲ್‌ ನಿರ್ಮಾಣ |  

ಬೆಂಗಳೂರು(ಮಾ.13): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಎರಡು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿರುವ ಕ್ಷಿಪ್ರ ಸರಕು ಸಾಗಣೆಯ ಕಾರ್ಗೊ ಟರ್ಮಿನಲನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು. ಈ ಮೂಲಕ ಕ್ಷಿಪ್ರ ಸರಕು ಸಾಗಣೆ ಟರ್ಮಿನಲ್‌ ಹೊಂದಿದ ದೇಶದ ಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎ ಪಾತ್ರವಾಗಿದೆ.

ಅಂತಾರಾಷ್ಟ್ರೀಯ ಕೊರಿಯರ್‌ಗಳ ಆಮದು ಮತ್ತು ರಫ್ತಿಗಾಗಿ ಪ್ರತ್ಯೇಕವಾಗಿ ಈ ಕಾರ್ಗೊ ಟರ್ಮಿನಲ್‌ ನಿರ್ಮಿಸಲಾಗಿದೆ. ಡಿಎಚ್‌ಎಲ್‌, ಎಕ್ಸ್‌ಪ್ರೆಸ್‌ ಮತ್ತು ಪೆಡ್‌ಎಕ್ಸ್‌ ಎಕ್ಸ್‌ಪ್ರೆಸ್‌ ಮೊದಲಾದ ಜಾಗತಿಕ ಎಕ್ಸ್‌ಪ್ರೆಸ್‌ ಕೊರಿಯರ್‌ ಸಂಸ್ಥೆಗಳು ಈ ಕಾರ್ಗೊ ಟರ್ಮಿನಲ್‌ನಲ್ಲಿ ಕಾರ್ಯ ನಿರ್ವಹಿಸಲಿವೆ. ಈ ಟರ್ಮಿನಲ್‌ನಲ್ಲಿ ಕಸ್ಟಮ್ಸ್‌ ಕಚೇರಿಗಳಿಗೆ ಪ್ರತ್ಯೇಕ ಸ್ಥಳ ಒದಗಿಸಲಾಗಿದೆ. ಲ್ಯಾಂಡ್‌ಸೈಡ್‌ ಮತ್ತು ಏರ್‌ಸೈಡ್‌ ಪ್ರದೇಶಗಳಿಗೆ ನೇರ ಸಂಪರ್ಕ ಹೊಂದಿದೆ.

ಬೆಂಗಳೂರಿನಿಂದ ಇನ್ನೂ 5 ನಗರಕ್ಕೆ ವಿಮಾನ ಸೇವೆ

ಈ ನೂತನ ಕಾರ್ಗೊ ಟರ್ಮಿನಲ್‌ ಕಾರ್ಯಾರಂಭದಿಂದ ಇ-ಕಾಮರ್ಸ್‌ ವ್ಯವಹಾರ ಮತ್ತಷ್ಟುವೃದ್ಧಿಸಲಿದೆ. ಜಾಗತಿಕವಾಗಿ ಕ್ಷಿಪ್ರ ಸರಕು ಸಾಗಣೆ ಮತ್ತು ಮಾರಾಟಕ್ಕೆ ಸಹಕಾರಿಯಾಗಲಿದೆ. ಸರಕು ಸಾಗಣೆದಾರರಿಗೆ ಸಮಯ ಹಾಗೂ ವೆಚ್ಚವೂ ಕಡಿಮೆಯಾಗಲಿದೆ.

ದಕ್ಷಿಣ ಭಾರತದ ವಿಮಾನ ನಿಲ್ದಾಣಗಳ ಪೈಕಿ ಅತಿ ಹೆಚ್ಚು ಸರಕು ಸಾಗಣೆ ಚಟುವಟಿಕೆ ನಡೆಯುವ ಕೆಐಎ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ವಾರ್ಷಿಕ 5.70 ಲಕ್ಷ ಮೆಟ್ರಿಕ್‌ ಟನ್‌ ಸರಕು ಸಾಗಣೆ ಸಾಮರ್ಥ್ಯವಿದೆ. ಈ ನೂತನ ಕಾರ್ಗೊ ಟರ್ಮಿನಲ್‌ ಸೌಲಭ್ಯದಿಂದ ವಾರ್ಷಿಕ ಸರಕು ಸಾಗಣೆ ಪ್ರಕ್ರಿಯೆ ಸಾಮರ್ಥ್ಯ 1.50 ಲಕ್ಷ ಮೆಟ್ರಿಕ್‌ ಟನ್‌ ಸೇರಿದಂತೆ ಒಟ್ಟು ಸಾಮರ್ಥ್ಯ 7.20 ಲಕ್ಷ ಮೆಟ್ರಿಕ್‌ ಟನ್‌ಗೆ ಏರಿಕೆಯಾಗಿದೆ ಎಂದು ಬಿಐಎಎಲ್‌ ತಿಳಿಸಿದೆ.