ದಲಿತ ಮುಸ್ಲಿಂ, ದಲಿತ ಕ್ರೈಸ್ತರಿಗೂ ಎಸ್‌ಸಿ ಸ್ಥಾನ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಸಮಿತಿ ನೇಮಕ ಮಾಡಿದೆ. ಸಮಿತಿಗೆ ವರದಿ ನೀಡಲು 2 ವರ್ಷಗಳ ಸಮಯ ನೀಡಲಾಗಿದೆ. ಇದು ಎಸ್ಸಿ ಸ್ಥಾನಮಾನಕ್ಕೆ ಬೇಡಿಕೆ ಇಡುತ್ತಿರುವ ಕ್ರೈಸ್ತ, ಮುಸ್ಲಿಂ ದಲಿತರಲ್ಲಿ ಆಶಾಕಿರಣ ಮೂಡಿಸಿದೆ.
ನವದೆಹಲಿ: ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದು, ಕಾಲಾನುಕ್ರಮದಲ್ಲಿ ನಾನಾ ಕಾರಣಕ್ಕೆ ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವರಿಗೂ ಅಧಿಕೃತವಾಗಿ ದಲಿತ (ಪರಿಶಿಷ್ಟ ಜಾತಿ/ಎಸ್ಸಿ) ಸ್ಥಾನಮಾನ ನೀಡುವ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ತ್ರಿಸದಸ್ಯ ಆಯೋಗ ರಚನೆ ಮಾಡಿ ಘೋಷಣೆ ಮಾಡಿದೆ. ಸಮಿತಿಗೆ ವರದಿ ನೀಡಲು 2 ವರ್ಷಗಳ ಸಮಯ ನೀಡಲಾಗಿದೆ. ಇದು ಎಸ್ಸಿ ಸ್ಥಾನಮಾನಕ್ಕೆ ಬೇಡಿಕೆ ಇಡುತ್ತಿರುವ ಕ್ರೈಸ್ತ, ಮುಸ್ಲಿಂ ದಲಿತರಲ್ಲಿ ಆಶಾಕಿರಣ ಮೂಡಿಸಿದೆ.
ಬೇಡಿಕೆ ಏನು?:
ಪ್ರಸಕ್ತ, ಕಾಲಕಾಲಕ್ಕೆ ತಿದ್ದುಪಡಿ ಆಗಿರುವ ‘ಸಂವಿಧಾನದ 1950ರ ಆದೇಶ (ಪರಿಶಿಷ್ಟಜಾತಿ)’ ಪ್ರಕಾರ, ಹಿಂದೂ ಅಥವಾ ಸಿಖ್ ಅಥವಾ ಬೌದ್ಧ- ಈ ಮೂರೂ ಧರ್ಮದಲ್ಲಿನ ದಲಿತರನ್ನು ಹೊರತುಪಡಿಸಿ ಮಿಕ್ಕ ಯಾವ ಧರ್ಮದಲ್ಲಿನ ದಲಿತರಿಗೂ ಅಧಿಕೃತವಾಗಿ ‘ಎಸ್‌ಸಿ’ ಸ್ಥಾನಮಾನ ದೊರಕುವುದಿಲ್ಲ. ಎಸ್‌ಸಿ ಸ್ಥಾನಮಾನ ಸಿಗದೇ ಹೋದಲ್ಲಿ ಉದ್ಯೋಗ, ನೌಕರಿ ಸೇರಿದಂತೆ ಸರ್ಕಾರಿಂದ ಸಮುದಾಯಕ್ಕೆ ಸಿಗುವ ಸೌಲಭ್ಯಗಳೂ ಸಿಗುವುದಿಲ್ಲ.
ಇದನ್ನು ಓದಿ: ದಲಿತ ಮುಸ್ಲಿಂ ರಾಜಕಾರಣದ ಬಗ್ಗೆ ಜೋಗೇಂದ್ರ ನಾತ್ ಮಂಡಲ್ ಹಾಗೂ ಅಂಬೇಡ್ಕರ್ ನಿಲುವುಗಳು!
ಹೀಗಾಗಿ ಕಾಯ್ದೆಗೆ ತಿದ್ದುಪಡಿ ಆಗಬೇಕು. ತಮಗೂ ಎಸ್‌ಸಿ ಸ್ಥಾನಮಾನ ಸಿಗಬೇಕು ಎಂದು ದಲಿತ ಕ್ರೈಸ್ತ ಹಾಗೂ ದಲಿತ ಮುಸ್ಲಿಮರು ಆಗ್ರಹಿಸುತ್ತಿದ್ದರು. ಇದನ್ನು ಬಿಜೆಪಿ ವಿರೋಧಿಸುತ್ತಿದೆ. ಸುಪ್ರೀಂಕೋರ್ಟಿನಲ್ಲಿ ಕೂಡ ಈ ಕುರಿತು ವಿಚಾರಣೆ ನಡೆಯುತ್ತಿದ್ದು, ನಿಲುವು ಸ್ಪಷ್ಟಪಡಿಸಬೇಕು ಎಂದು ಇತ್ತೀಚೆಗೆ ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು.
ಮೂವರ ಸಮಿತಿ:
ಇದರ ನಡುವೆಯೇ ಸರ್ಕಾರವು ದೇಶದ ಮೊದಲ ದಲಿತ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ನೇತೃತ್ವದ ಆಯೋಗ ರಚನೆ ಮಾಡಿದೆ ಹಾಗೂ ಆಯೋಗದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ರವೀಂದ್ರ ಜೈನ್ ಹಾಗೂ ಯುಜಿಸಿ ಸದಸ್ಯ ಪ್ರೊ. ಸುಷ್ಮಾ ಯಾದವ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಏನು ಅಧ್ಯಯನ?
ಸಮಿತಿಯು ‘ನಾವು ಮೂಲತಃ ಪರಿಶಿಷ್ಟಜಾತಿಯವರು’ ಎಂದು ಮತಾಂತರದ ಬಳಿಕ ಹೇಳಿಕೊಳ್ಳುತ್ತಿರುವ ಕ್ರೈಸ್ತ ಹಾಗೂ ಮುಸ್ಲಿಮರ ಬೇಡಿಕೆ ಬಗ್ಗೆ ಅಧ್ಯಯನ ನಡೆಸಲಿದೆ. ಜತೆಗೆ ಈ ವರ್ಗಕ್ಕೆ ಪರಿಶಿಷ್ಟಜಾತಿ ಸ್ಥಾನಮಾನ ನೀಡಿದರೆ ಈಗ ಎಸ್ಸಿ ಮಾನ್ಯತೆ ಪಡೆದವರ ಮೇಲೆ ಏನು ಪರಿಣಾಮ ಬೀರಲಿದೆ? ಮತಾಂತರಗೊಂಡ ದಲಿತರ ಸ್ಥಾನಮಾನ ಮತಾಂತರದ ನಂತರ ಹೇಗೆ ಬದಲಾಗಿದೆ? ಅಸ್ಪೃಶ್ಯತೆ ಹೇಗಿದೆ ಎಂಬ ಬಗ್ಗೆಯೂ ಅಧ್ಯಯನ ಮಾಡಲಿದೆ.
ಇದನ್ನೂ ಓದಿ: ಯಾವ ರಾಜ್ಯದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮೀಸಲಾತಿ ಇದೆ? ಹಿಂದುಳಿದ ವರ್ಗದ ಕತೆಏನು?
