ರೋಗಿಗಳಿಗೆ ಡೋಲೋ ಮಾತ್ರೆಗಳನ್ನು ಶಿಫಾರಸು ಮಾಡಲು ಅತೀ ದೊಡ್ಡ ಪಿತೂರಿಯೊಂದು ನಡೆದಿದೆ ಅನ್ನೋ ಮಾಹಿತಿ ಬಹಿರಂಗಗೊಂಡಿದೆ. ವೈದ್ಯರಿಗೆ 1,000 ಕೋಟಿ ರೂಪಾಯಿ ಉಚಿತವಾಗಿ ವಿವಿಧ ರೂಪದಲ್ಲಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇದೀಗ ಸುಪ್ರೀಂ ಕೋರ್ಟ್ ಕೇಂದ್ರದಿಂದ ಮಾಹಿತಿ ಕೇಳಿದೆ.

ನವದೆಹಲಿ(ಆ.18): ಕೊರೋನಾ ಅವಧಿಯಲ್ಲಿ ಡೋಲೋ 650 ಕಂಪನಿ ಸಾವಿರಾರು ಕೋಟಿ ರೂಪಾಯಿ ಆದಾಯ ಮಾಡಿಕೊಂಡಿದೆ. ಐಟಿ ಇಲಾಖೆ ದಾಳಿ ಕುರಿತು ಸುದ್ದಿಗಳು ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಡೋಲೋ 650 ಮಾಫಿಯಾ ಕುರಿತ ಮಾಹಿತಿಯೊಂದು ಬಹಿರಂಗವಾಗಿದೆ. ರೋಗಿಗಳಿಗೆ ಡೋಲೋ 650 ಮಾತ್ರೆಯನ್ನು ಶಿಫಾರಸು ಮಾಡಲು ವೈದ್ಯರಿಗೆ ಕಂಪನಿ 1,000 ಕೋಟಿ ರೂಪಾಯಿ ಖರ್ಚು ಮಾಡಿದ ಮಾಹಿತಿ ಬೆಳಕಿಗೆ ಬಂದಿದೆ. ಈ ಕುರಿತು ನೇರ ತೆರಿಗೆ ಮಂಡಳಿ ಭಾರತೀಯ ವೈದ್ಯಕೀಯ ಮತ್ತು ಮಾರಾಟ ಒಕ್ಕೂಟಕ್ಕೆ ದೂರು ನೀಡಿದೆ. ಇದೀಗ ವಿಚಾರವನ್ನು ಒಕ್ಕೂಟ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದು, ಇದೀಗ ಕೋರ್ಟ್ ಕೇಂದ್ರ ಸರ್ಕಾರದಿಂದ ಈ ಕುರಿತು ಮಾಹಿತಿ ಕೇಳಿದೆ. 

ತಮ್ಮ ತಮ್ಮ ಔಷಧಿಗಳನ್ನು ರೋಗಿಗಳಿಗೆ ಶಿಫಾರಸು ಮಾಡಲು ಕಂಪನಿಗಳು ವೈದ್ಯರಿಗೆ ಉಚಿತ ಕೊಡುಗೆಗಳನ್ನು ನೀಡುತ್ತಿದೆ. ಇದು ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿದೆ. ಹೀಗಾಗಿ ಔಷಧಿ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಭಾರತೀಯ ವೈದ್ಯಕೀಯ ಮತ್ತು ಮಾರಾಟ ಒಕ್ಕೂಟ ಪರ ವಾದ ಮಂಡಿಸಿದ ವಕೀಲ ಸಂಜಯ್ ಪಾರಿಖ್ ಈ ವಿಚಾರವನ್ನು ಹೇಳಿದ್ದಾರೆ. ಜ್ವರ, ತಲೆನೋವು, ಶೀತ, ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ವೈದ್ಯರು ಡೋಲೋ 650 ಮಾತ್ರೆಯನ್ನೇ ಶಿಫಾರಸು ಮಾಡುವಂತೆ ಮಾಡಲು ವೈದ್ಯರಿಗಾಗಿ ಕಂಪನಿ 1,000 ರೂಪಾಯಿ ಉಚಿತವಾಗಿ ಖರ್ಚು ಮಾಡಿದೆ. ವಿವಿದ ರೂಪದಲ್ಲಿ ವೈದ್ಯರಿಗೆ 1,000 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಸಂಜಯ್ ಪಾರಿಖ್ ಹೇಳಿದ್ದಾರೆ.

IT Raids Micro Labs: ಡೋಲೊ 650 ಮಾತ್ರೆ ತಯಾರಕ ಸಂಸ್ಥೆ ಮೇಲೆ IT ದಾಳಿ

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ವಿಭಾಗೀಯ ಪೀಠ ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದೆ. ಇಷ್ಟೇ ಅಲ್ಲ ಕೋವಿಡ್ ಸಮಯದಲ್ಲಿ ತಮಗೂ ಡೋಲೋ 650 ಮಾತ್ರೆ ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗಿತ್ತು. ಹೀಗಾಗಿ ಈ ರೀತಿಯ ಶಿಫಾರಸ್ಸು ಆರೋಗ್ಯ ಕ್ಷೇತ್ರದಲ್ಲಿರುವ ಅತೀ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ 10 ದಿನದಲ್ಲಿ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಮಿತಿ ರಚಿಸಿದ ಕೇಂದ್ರ ಸರ್ಕಾರ
ವೈದ್ಯರಿಗೆ 1000 ಕೋಟಿ ರೂಪಾಯಿ ಖರ್ಚುು ಕುರಿತು ಸುಪ್ರೀಂ ಉತ್ತರ ಕೇಳಿದ ಬೆನ್ನಲ್ಲೇ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಅಕ್ರಮ ಮಾರ್ಗಗಳ ಮೂಲಕ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಕಂಪನಿ ನಡೆದುಕೊಂಡ ರೀತಿ ಬಗ್ಗೆ ಪ್ರತ್ಯೇಕ ಮತ್ತು ವಿಶೇಷ ತನಿಖೆ ನಡೆಸಲು ಕೇಂದ್ರ ಔಷಧ ಇಲಾಖೆಯು ಉನ್ನತ ಮಟ್ಟದ ಸಮಿತಿಯೊಂದನ್ನು ರಚನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಕಂಪನಿಯಿಂದ ವಶಪಡಿಸಿಕೊಂಡ ದಾಖಲೆಗಳಲ್ಲಿ ಇರುವ ಉಡುಗೊರೆ ಪಡೆದ ವೈದ್ಯರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡುವಂತೆಯೂ ಸೂಚಿಸಲಾಗಿದೆ. ಇತ್ತೀಚೆಗೆ 9 ರಾಜ್ಯಗಳಲ್ಲಿ ಕಂಪನಿಯಗೆ ಸೇರಿದ 36 ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ವೇಳೆ ಕಂಪನಿ ತನ್ನ ಉತ್ಪನ್ನ ಮಾರಾಟಕ್ಕೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಬಳಸಿಕೊಂಡಿದ್ದು ಪತ್ತೆಯಾಗಿತ್ತು. 

Covid Crisis: ಕೊರೋನಾ ಬಂದಾಗಿನಿಂದ ಪ್ಯಾರಾಸಿಟಮಲ್‌ ಮಾತ್ರೆಗಳ ವಹಿವಾಟು ಡಬಲ್!

ಮೈಕ್ರೋಲ್ಯಾಬ್ಸ್‌ ಕಂಪನಿಯ ಡೋಲೋ -650 ಮಾತ್ರೆಗಳು ಕೋವಿಡ್‌ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದವು. ಕಂಪನಿ 350 ಕೋಟಿಗೂ ಹೆಚ್ಚಿನ ಮಾತ್ರೆಗಳನ್ನು ಮಾರಾಟ ಮಾಡಿತ್ತು.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೈಕ್ರೋಲ್ಯಾಬ್ಸ್‌ಗೆ ಸೇರಿದ 9 ರಾಜ್ಯಗಳ 36 ಸ್ಥಳಗಳ ಮೇಲೆ ಜು.6ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ 1.20 ಕೋಟಿ ರು.ನಷ್ಟುಲೆಕ್ಕಕ್ಕೆ ತೋರಿಸದ ನಗದು ಮತ್ತು 1.40 ಕೋಟಿ ರು.ಮೌಲ್ಯದ ವಜ್ರಾಭರಣ ಪತ್ತೆಯಾಗಿತ್ತು. ಜೊತೆಗೆ ಸಾಕಷ್ಟುಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ಹೀಗೆ ವಶಪಡಿಸಿಕೊಳ್ಳಲಾದ ದಾಖಲೆಗಳ ಪರಿಶೀಲನೆ ವೇಳೆ, ‘ಮಾರಾಟ ಹಾಗೂ ಪ್ರಚಾರ’ ಎಂಬ ಶೀರ್ಷಿಕೆಯಡಿಯಲ್ಲಿ ವೈದ್ಯರು ಹಾಗೂ ವೃತ್ತಿಪರರಿಗೆ ಉಚಿತ ಉಡುಗೊರೆಗಳು, ಪ್ರಯಾಣ ವೆಚ್ಚ ಭರಿಸುವುದು, ಪ್ರಚಾರಕ್ಕಾಗಿ ಸಭೆ ಆಯೋಜಿಸುವುದು ಮೊದಲಾದವುಗಳಿಗೆ 1000 ಕೋಟಿ ರು. ವೆಚ್ಚಮಾಡಿದ್ದು ಬೆಳಕಿಗೆ ಬಂದಿದೆ’ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಬುಧವಾರ ಮಾಹಿತಿ ನೀಡಿದೆ.