* 2019ರಲ್ಲಿ 530 ಕೋಟಿ ರು.ನಷ್ಟುಲ್ಲಾ ಪ್ಯಾರಾಸಿಟಮಲ್ ಮಾತ್ರೆಗಳ ಮಾರಾಟ* 2021ರಲ್ಲಿ ಪ್ಯಾರಾಸಿಟಮಲ್ ಮಾತ್ರೆಗಳ ವಹಿವಾಟು 921 ಕೋಟಿ ರು.ಗೆ ಜಿಗಿತ* ಕೊರೋನಾ ಎಫೆಕ್ಟ್: 350 ಕೋಟಿ
ನವದೆಹಲಿ(ಜ.24): 2020ರಲ್ಲಿ ದೇಶಾದ್ಯಂತ ಆವರಿಸುವ ಮುಖಾಂತರ ಲಕ್ಷಾಂತರ ಜನ ಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಕಾರಣವಾಗಿರುವ ಕೊರೋನಾ ವೈರಸ್, ಡೋಲೋ 650 ಮಾತ್ರೆಗಳಿಗೆ ಮಾತ್ರ ಬಂಪರ್ ಆಗಿ ಪರಿಣಮಿಸಿದೆ. ಸೋಂಕು ಆವರಿಸಿದ 2020ರ ಮಾಚ್‌ರ್‍ನಿಂದ ಹಿಡಿದು ಇಲ್ಲಿಯವರಿಗೆ 567 ಕೋಟಿ ರು. ಮೌಲ್ಯದ ದಾಖಲೆಯ 350 ಕೋಟಿ ಮಾತ್ರೆಗಳು ಮಾರಾಟವಾಗಿವೆ. ಈ ಸಾಂಕ್ರಾಮಿಕ ಅವಧಿಯಲ್ಲಿ ಜ್ವರ ಮತ್ತು ನೋವು ನಿವಾರಕವಾಗಿ ಬೆಂಗಳೂರು ಮೂಲದ ಮೈಕ್ರೋಲ್ಯಾಬ್ಸ್ ಕಂಪನಿಯ ಡೋಲೋ 650 ಮಾತ್ರೆಯನ್ನೇ ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಈ ಪ್ರಮಾಣದ ಮಾತ್ರೆಗಳು ಮಾರಾಟವಾಗಿವೆ ಎನ್ನಲಾಗಿದೆ.
ದೇಶದಲ್ಲಿ ಕೋವಿಡ್‌ನ 2ನೇ ಅಲೆ ಉತ್ತುಂಗಕ್ಕೆ ಏರಿದ 2021ರ ಏಪ್ರಿಲ್ ತಿಂಗಳೊಂದರಲ್ಲೇ 49 ಕೋಟಿ ರು. ಮೌಲ್ಯದ ಮಾತ್ರೆಗಳು ಮಾರಾಟವಾಗಿದ್ದವು. ಇದು ಒಂದು ತಿಂಗಳಲ್ಲಿ ಡೋಲೋ ಮಾರಾಟವಾದ ಸಾರ್ವಕಾಲಿಕ ದಾಖಲೆ ಎಂದು ಆರೋಗ್ಯ ಸಂಶೋಧನಾ ಸಂಸ್ಥೆ ಐಕ್ಯೂವಿಐಎ ತಿಳಿಸಿದೆ. ಅಲ್ಲದೆ ಇದನ್ನು ಭಾರತದ ಮಾತ್ರೆ ಮತ್ತು ನೆಚ್ಚಿನ ತಿಂಡಿ ಎನ್ನುವಷ್ಟರ ಮಟ್ಟಿಗೆ ಈ ಮಾತ್ರೆಯನ್ನು ಭಾರತೀಯರು ನೆಚ್ಚಿಕೊಂಡಿದ್ದರು.
2019ರಲ್ಲಿ 530 ಕೋಟಿ ರು.ನಷ್ಟುಮಾರಾಟವಾಗಿದ್ದ ಎಲ್ಲಾ ಮಾದರಿಯ ಪ್ಯಾರಾಸಿಟಮಲ್ ಮಾತ್ರೆಗಳು 2021ರಲ್ಲಿ 921 ಕೋಟಿ ರು. ವಹಿವಾಟು ನಡೆಸಿದ್ದವು.
ಸೈಡ್ ಎಫೆಕ್ಟ್ ಇಲ್ಲ:
ವೈದ್ಯರು ಡೋಲೋ 650 ಮಾತ್ರೆಗಳನ್ನು ಶಿಫಾರಸು ಮಾಡಲು ಬಹುಮುಖ್ಯ ಕಾರಣ, ಎಲ್ಲಾ ವಯೋಮಾನದವರಿಗೂ ಇದನ್ನು ನೀಡಬಹುದು ಮಾತ್ರವಲ್ಲದೆ ಅತ್ಯಂತ ಕಡಿಮೆ ಪ್ರಮಾಣದ ಸೈಡ್ ಎಫೆಕ್ಟ್ ಗಳು ಇದರಲ್ಲಿವೆ. ಜ್ವರಕ್ಕೆ ಅತ್ಯಂತ ಸರಳವಾಗಿ ಉಪಯೋಗಿಸಬಹುದಾದ ಮಾತ್ರೆ ಡೋಲೋ 650. ಹೃದಯ ಸಮಸ್ಯೆ, ಕಿಡ್ನಿ ಸಮಸ್ಯೆ ಹಾಗೂ ಮಧುಮೇಹ ಇದ್ದವರೂ ಯಾವ ಆತಂಕವಿಲ್ಲದೆ ಇದನ್ನು ಸೇವಿಸಬಹುದಾಗಿದೆ ಎನ್ನುವುದು ಪೋರ್ಟೀಸ್ ಆಸ್ಪತ್ರೆಯ ವೈದ್ಯ ಡಾ. ರಿತೇಶ್ ಗುಪ್ತಾ ಅವರ ಮಾತು.
ಬೆಂಗಳೂರು ಮೂಲದ ಕಂಪನಿ: ನೀರು ಅಂದ್ರೆ ಬಿಸ್ಲೆರಿ ನೆನಪಿಗೆ ಬರೋ ಹಾಗೆ, ಪ್ಯಾರಾಸಿಟಮಾಲ್ ಅಂದಾಗ ಡೋಲೋ ಅನ್ನೋದೆ ಒಂದು ಬ್ರ್ಯಾಂಡ್ ಆಗಿದೆ. ಡೋಲೋ 650 ಉತ್ಪಾದನೆ ಮಾಡುವುದು ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಕಂಪನಿ. 1973ರಲ್ಲಿ ಫಾರ್ಮಾ ವಿತರಕರಾಗಿದ್ದ ಜಿಸಿ ಸುರಾನಾ ಇದನ್ನು ಆರಂಭಿಸಿದ್ದರು. ಈಗ ಅವರ ಪುತ್ರ ದಿಲೀಪ್ ಸುರಾನಾ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಂಪನಿಯ ಮಾಹಿತಿಯ ಪ್ರಕಾರ, ವಾರ್ಷಿಕ ಟರ್ನ್ ಓವರ್ 2700 ಕೋಟಿ ರೂಪಾಯಿ ಆಗಿದ್ದು. ವಿದೇಶಕ್ಕೆ 920 ಕೋಟಿ ರೂಪಾಯಿ ಮೌಲ್ಯದ ಔಷಧಿಗಳನ್ನು ರಫ್ತು ಮಾಡುತ್ತದೆ.
