ನವದೆಹಲಿ (ಜ. 03): ದೇಶದ ರಕ್ಷಣಾ ಘಟಕಗಳ ಮೇಲೆ ವೈರಿ ದಾಳಿಯಾಗದಂತೆ ನಿಗಾ ಇಡಲು ‘ಏರ್‌ ಡಿಫೆನ್ಸ್‌ ಕಮಾಂಡ್‌’ ಸ್ಥಾಪಿಸುವ ಚಿಂತನೆಯನ್ನು ನೂತನ ಸಶಸ್ತ್ರಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರು ಸೇನೆಯ ಮೂರೂ ಘಟಕಗಳ ಮುಂದಿಟ್ಟಿದ್ದಾರೆ. ಈ ಸಂಬಂಧ ಜೂನ್‌ 30ರೊಳಗೆ ಇದರ ಸ್ವರೂಪವನ್ನು ಒಳಗೊಂಡ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಗುರುವಾರ ವಿವಿಧ ರಕ್ಷಣಾ ಘಟಕಗಳ ಉನ್ನತ ಅಧಿಕಾರಿಗಳ ಜತೆ ಸಮಾಲೋಚನಾ ಸಭೆ ನಡೆಸಿದ ಅವರು ಈ ಸೂಚನೆಗಳನ್ನು ನೀಡಿದರು.

ಪಾಕ್ ಆಕ್ರಮಿತ ಕಾಶ್ಮೀರ ಟಾರ್ಗೆಟ್ ಮಾಡಲು ಸಿದ್ಧ: ಸೇನಾ ಮುಖ್ಯಸ್ಥ!

‘ಏರ್‌ ಡಿಫೆನ್ಸ್‌ ಕಮಾಂಡ್‌ ಸ್ಥಾಪನೆ ಅಗತ್ಯವಾಗಿದೆ. ಈ ಸಂಬಂಧ ನೌಕಾಪಡೆ, ವಾಯುಪಡೆ, ಭೂಸೇನೆ ಹಾಗೂ ಕರಾವಳಿ ಪಡೆಗಳ ಜತೆ ಚರ್ಚೆ ನಡೆಸಿ ಅಭಿಪ್ರಾಯ ಪಡೆಯಬೇಕು. ಅವರ ಅಭಿಪ್ರಾಯ ಆಲಿಸಿದ ಬಳಿಕ ಇದರ ಸ್ಥಾಪನೆ ಬಗ್ಗೆ ನಿರ್ಧರಿಸಲಾಗುವುದು ಎಂದು ರಾವತ್‌ ಹೇಳಿದರು’ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಏನಿದು ಏರ್‌ ಡಿಫೆನ್ಸ್‌ ಕಮಾಂಡ್‌?:

ದೇಶದ ವಾಯುರಕ್ಷಣಾ ವ್ಯವಸ್ಥೆಯನ್ನು ವಾಯುಪಡೆ ನೋಡಿಕೊಳ್ಳುತ್ತದೆ. ಆದರೆ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳು ತಮ್ಮ ತಮ್ಮ ಘಟಕಗಳ ಮೇಲೆ ವೈರಿಗಳು ದಾಳಿ ಮಾಡುವುದನ್ನು ತಡೆಯಲು ಪ್ರತ್ಯೇಕ ‘ಏರ್‌ ಡಿಫೆನ್ಸ್‌ ಕಮಾಂಡ್‌’ಗಳನ್ನು (ವಾಯುರಕ್ಷಣಾ ವ್ಯವಸ್ಥೆ) ಹೊಂದಿವೆ. ಆದರೆ ಈಗ ಈ ಮೂರೂ ಕಮಾಂಡ್‌ಗಳನ್ನು ಒಂದೇ ಕಮಾಂಡ್‌ ಆಗಿ ವಿಲೀನ ಮಾಡಿ ಮೂರೂ ಸೇನಾಪಡೆಗಳ ಆಸ್ತಿಪಾಸ್ತಿಗಳ ರಕ್ಷಣೆಯ ಉಸ್ತುವಾರಿಯನ್ನು ಅದಕ್ಕೆ ವಹಿಸುವುದು ರಾವತ್‌ ಅವರ ಉದ್ದೇಶ. ಅದಕ್ಕೆಂದೇ ಅವರು ಏರ್‌ ಡಿಫೆನ್ಸ್‌ ಕಮಾಂಡ್‌ ಸ್ಥಾಪಿಸಲು ಮುಂದಾಗಿದ್ದಾರೆ. ಇದೇ ವೇಳೆ, ಈ ಕಮಾಂಡ್‌, ದೇಶದ ಮೇಲೆ ಯಾವುದಾದರೂ ಕ್ಷಿಪಣಿ ದಾಳಿ ಅಥವಾ ವೈಮಾನಿಕ ದಾಳಿ ನಡೆಸುವ ಮುನ್ಸೂಚನೆಯನ್ನೂ ನೀಡಬಹುದು ಹಾಗೂ ಉಪಗ್ರಹದಂಥ ಬಾಹ್ಯಾಕಾಶ ಆಸ್ತಿಗಳ ಮೇಲೂ ಕಣ್ಣಿಡಬಹುದು ಎನ್ನುತ್ತಾರೆ ತಜ್ಞರು.