ಸತ್ಯಪಾಲ್ ಮಲಿಕ್ ಅವರು ರಾಜ್ಯದ ರಾಜ್ಯಪಾಲರಾಗಿದ್ದಾಗ (ಜಮ್ಮು ಮತ್ತು ಕಾಶ್ಮೀರ ಇನ್ನೂ ಕೇಂದ್ರಾಡಳಿತ ಪ್ರದೇಶವಾಗಿರಲಿಲ್ಲ) ಯೋಜನೆಗೆ ಸಂಬಂಧಿಸಿದ ಎರಡು ಕಡತಗಳನ್ನು ತೆರವುಗೊಳಿಸಲು 300 ಕೋಟಿ ರೂಪಾಯಿ ಲಂಚದ ಆಫರ್ ನೀಡಿದ್ದರು ಎಂದು ಆರೋಪಿಸಿದ್ದರು.

ನವದೆಹಲಿ (ಫೆ.22): ಜಮ್ಮು ಮತ್ತು ಕಾಶ್ಮೀರದ ಕಿರು ಹೈಡ್ರೊ ಎಲೆಕ್ಟ್ರಿಕ್ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಪ್ರಕರಣದಲ್ಲಿ ಸಿಬಿಐ ಗುರುವಾರ ಬೆಳಿಗ್ಗೆ ದೆಹಲಿಯ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರ ನಿವಾಸ ಮತ್ತು ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದೆ. ಇದಲ್ಲದೇ ಜಮ್ಮು ಮತ್ತು ಕಾಶ್ಮೀರದ 30 ಸ್ಥಳಗಳ ಮೇಲೂ ಕೇಂದ್ರ ಸಂಸ್ಥೆ ದಾಳಿ ನಡೆಸಿದೆ. ಈ ಪ್ರಕರಣವು ಕಿಶ್ತ್ವಾರ್‌ನ ಚೆನಾಬ್ ನದಿಯಲ್ಲಿ ಉದ್ದೇಶಿತ ಕಿರು ಜಲವಿದ್ಯುತ್ ಯೋಜನೆಗೆ 2019 ರಲ್ಲಿ 2200 ಕೋಟಿ ರೂಪಾಯಿ ಮೌಲ್ಯದ ಸಿವಿಲ್ ವರ್ಕ್ ಗುತ್ತಿಗೆಯನ್ನು ನೀಡುವಲ್ಲಿನ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದ್ದಾಗಿದೆ. ಸತ್ಯಪಾಲ್‌ ಮಲೀಕ್‌ 2018ರ ಆಗಸ್ಟ್‌ 23 ರಿಂದ 2019ರ ಆಕ್ಟೋಬರ್‌ 30ರವರೆಗೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು. ಸತ್ಯಪಾಲ್ ಮಲಿಕ್ ಅವರು ರಾಜ್ಯದ ರಾಜ್ಯಪಾಲರಾಗಿದ್ದಾಗ ಯೋಜನೆಗೆ ಸಂಬಂಧಿಸಿದ ಎರಡು ಕಡತಗಳನ್ನು ಅನುಮೋದಿಸಲು 300 ಕೋಟಿ ರೂಪಾಯಿ ಲಂಚದ ಆಫರ್ ನೀಡಲಾಗಿತ್ತು ಎಂದು ಆರೋಪಿಸಿದ್ದರು. ಕಳೆದ ತಿಂಗಳು ಕೂಡ ಕೇಂದ್ರೀಯ ತನಿಖಾ ದಳ (ಸಿಬಿಐ) ಈ ತನಿಖೆಯ ಭಾಗವಾಗಿದೆ ದೆಹಲಿ ಮತ್ತು ಕಾಶ್ಮೀರದ ಸುಮಾರು 8 ಸ್ಥಳಗಳ ಮೇಲೆ ದಾಳಿ ನಡೆಸಿತ್ತು. 

ಸಿಬಿಐ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಡಿಜಿಟಲ್ ಸಾಧನಗಳು, ಕಂಪ್ಯೂಟರ್‌ಗಳು, ಆಸ್ತಿ ದಾಖಲೆಗಳ ಜೊತೆಗೆ 21 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ (ಅಂದಾಜು) ನಗದು ವಶಪಡಿಸಿಕೊಂಡಿತ್ತು. ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ (ಪ್ರೈ) ಲಿಮಿಟೆಡ್‌ನ (ಸಿವಿಪಿಪಿಪಿಎಲ್) ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿ, ಮಾಜಿ ಅಧಿಕಾರಿಗಳಾದ ಎಂಎಸ್ ಬಾಬು, ಎಂಕೆ ಮಿತ್ತಲ್ ಮತ್ತು ಅರುಣ್ ಕುಮಾರ್ ಮಿಶ್ರಾ ಮತ್ತು ಪಟೇಲ್ ಇಂಜಿನಿಯರಿಂಗ್ ಲಿಮಿಟೆಡ್ ವಿರುದ್ಧ ಕೇಂದ್ರ ಸಂಸ್ಥೆ ಪ್ರಕರಣ ದಾಖಲಿಸಿದೆ. ಚೌಧರಿ ಅವರು 1994ರ ಬ್ಯಾಚ್‌ನ ಜಮ್ಮು ಮತ್ತು ಕಾಶ್ಮೀರ ಕೇಡರ್ (ಈಗ AGMUT ಕೇಡರ್) ಐಎಎಸ್ ಅಧಿಕಾರಿಯಾಗಿದ್ದಾರೆ 

ಕಿರು ಜಲವಿದ್ಯುತ್ ಯೋಜನೆಯಲ್ಲಿನ ಭ್ರಷ್ಟಾಚಾರದ ಆರೋಪಗಳೇನು?: ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಸಿವಿಲ್ ಕಾಮಗಾರಿಗಳ ಹಂಚಿಕೆಯಲ್ಲಿ ಇ-ಟೆಂಡರ್ ಮಾಡುವ ಬಗ್ಗೆ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎಂದು ಆರೋಪಿಸಲಾಗಿದೆ. ಸಿವಿಪಿಪಿಪಿಎಲ್‌ನ 47ನೇ ಆಡಳಿತ ಮಂಡಳಿ ಸಭೆಯಲ್ಲಿ ರಿವರ್ಸ್ ಹರಾಜು ಜತೆಗೆ ಇ-ಟೆಂಡರ್ ಮೂಲಕ ಗುತ್ತಿಗೆ ಮರು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಚಾಲ್ತಿಯಲ್ಲಿರುವ ಟೆಂಡರ್ ಪ್ರಕ್ರಿಯೆ ರದ್ದಾದ ನಂತರ ಅದು ಜಾರಿಯಾಗದೆ ಸಿವಿಪಿಪಿಪಿಎಲ್‌ನ 48ನೇ ಮಂಡಳಿ ಸಭೆಯಲ್ಲಿ ಹಿಂದಿನ ಸಭೆಯ ನಿರ್ಧಾರವನ್ನು ಬದಲಿಸಲಾಗಿದೆ ಎನ್ನುವ ಆರೋಪವಿದೆ.

ಸತ್ಯಪಾಲ್ ಮಲಿಕ್ ಅವರ ಮಾಜಿ ಪತ್ರಿಕಾ ಕಾರ್ಯದರ್ಶಿ ಮನೆ ಮೇಲೂ ದಾಳಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಸುನಕ್ ಬಾಲಿ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು. ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿ ಮತ್ತು ವೆಸ್ಟ್ ಎಂಡ್‌ನಲ್ಲಿರುವ ಅವರ ಆವರಣದಲ್ಲಿ ದಾಳಿ ನಡೆಸಲಾಯಿತು. ಸಿಬಿಐನ ಉನ್ನತ ಅಧಿಕಾರಿಯೊಬ್ಬರ ಪ್ರಕಾರ, ಹಣ ದುರುಪಯೋಗ ಪ್ರಕರಣದಲ್ಲಿ ಬಾಲಿ ಪ್ರಮುಖ ಶಂಕಿತ. ಆದಾಗ್ಯೂ, ಮಲಿಕ್ ತನ್ನ ಮಾಜಿ ಸಹೋದ್ಯೋಗಿಯನ್ನು ಸಮರ್ಥಿಸಿಕೊಂಡಿದ್ದರು. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, 'ಈ ಪ್ರಕರಣದಲ್ಲಿ ಭ್ರಷ್ಟಾಚಾರದ ದೂರು ನೀಡುವವರಿಗೆ ಸಿಬಿಐ ಕಿರುಕುಳ ನೀಡುತ್ತಿರುವುದು ದುರದೃಷ್ಟಕರ. ನಾನು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲನಾಗಿದ್ದಾಗ, ಅವರು ನನ್ನ ಪತ್ರಿಕಾ ಸಲಹೆಗಾರರಾಗಿದ್ದರು ಮತ್ತು ಈ ಕೆಲಸಕ್ಕೆ ಯಾವುದೇ ಸರ್ಕಾರಿ ಸಂಬಳವನ್ನು ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.

ಪುಲ್ವಾಮಾ ಲೋಪದ ಬಗ್ಗೆ ಮೋದಿ ನನ್ನನ್ನು ಮೌನವಾಗಿಸಿದರು ಎಂದ ಸತ್ಯಪಾಲ್‌ ಮಲಿಕ್: 'ಕೈ'ನಿಂದ ಪ್ರಶ್ನೆಗಳ ಸುರಿಮಳೆ

ಕಿರು ಜಲವಿದ್ಯುತ್ ಯೋಜನೆ ಎಂದರೇನು?: ಕಿರು ಜಲವಿದ್ಯುತ್ ಯೋಜನೆ (624 MW) ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿರುವ ಚೆನಾಬ್ ನದಿಯ ಮೇಲೆ ಉದ್ದೇಶಿತ ಯೋಜನೆಯಾಗಿದೆ. 2019ರ ಮಾರ್ಚ್ 7 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA), ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ (CVPPPL) ನಿಂದ ಕಿರು ಜಲವಿದ್ಯುತ್ ಯೋಜನೆ (624 MW) ನಿರ್ಮಾಣಕ್ಕೆ ಹೂಡಿಕೆಯನ್ನು ಅನುಮೋದಿಸಿತು. ಈ ಯೋಜನೆಯನ್ನು ಪೂರ್ಣಗೊಳಿಸಲು ಅಂದಾಜು ವೆಚ್ಚ 4287.59 ಕೋಟಿ ರೂಪಾಯಿ ಆಗಿದೆ. ಇದರ ನಿರ್ಮಾಣದ ಜವಾಬ್ದಾರಿಯು ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ (CVPPPL) ಹೆಸರಿನ ಕಂಪನಿಯ ಮೇಲಿದೆ, ಇದು NHPC, ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿದ್ಯುತ್ ಅಭಿವೃದ್ಧಿ ನಿಗಮ (JKSPDC) ಮತ್ತು PTC ಯ ಜಂಟಿ ಉದ್ಯಮವಾಗಿದೆ.

ಏನು ಷರತ್ತಿಲ್ಲ, ಯಾವಾಗ ಬರ್ಲಿ ಹೇಳಿ?: ರಾಹುಲ್ ಗಾಂಧಿ!