ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ8 ಮಂದಿಯನ್ನು ಸಜೀವವಾಗಿ ಸುಟ್ಟು ಹಾಕಲಾಗಿತ್ತುಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್
ಕೋಲ್ಕತ್ತಾ (ಮಾ. 25): ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ(Birbhum) ಇಬ್ಬರು ಮಕ್ಕಳು ಸೇರಿ 8 ಮಂದಿಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದ ಪ್ರಕರಣವನ್ನು ಸಿಬಿಐ ತನಿಖೆ (CBI Pribe) ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ (Calcutta High Court ) ಶುಕ್ರವಾರ ಆದೇಶ ನೀಡಿದೆ. ಬಂಗಾಳದಲ್ಲಿ ಚುನಾವಣಾ ನಂತರದ ಹಿಂಸಾಚಾರ ಪ್ರಕರಣಗಳನ್ನು ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದ್ದು, ಅದರ ನಡುವೆ ಪಶ್ಚಿಮ ಬಂಗಾಳದ ಇನ್ನೊಂದು ಪ್ರಕರಣದ ತನಿಖೆಯ ಜವಾಬ್ದಾರಿ ಸಿಬಿಐ ಹೆಗಲಿಗೇರಿದೆ.
ಹಿಂಸಾಚಾರ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಟಿಎಂಸಿ ನಾಯಕ, ರಾಮಪುರಹಟ್-1 ಬ್ಲಾಕ್ ಅಧ್ಯಕ್ಷ ಅನಾರುಲ್ ಹೊಸ್ಸೈನ್ ಎಂಬಾತನನ್ನು ಗುರುವಾರ ಬಂಧಿಸಲಾಗಿತ್ತು. ಹತ್ಯೆಗೆ ಕುಮ್ಮಕ್ಕು ನೀಡಿದ ಹೊಸ್ಸೈನ್ ಬಂಧಿಸುವಂತೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚಿಸಿದ ಬೆನ್ನಲ್ಲೇ ಹೊಸ್ಸೈನ್‌ನನ್ನು ತಾರಪಿತಾ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಡುವೆ ರಾಮಪುರಹಟ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಇನ್-ಚಾಜ್‌ರ್ ತ್ರಿದಿಬ್ ಪ್ರಮಾಣಿಕ್ ಅವರನ್ನು ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲಾಗಿದೆ.
ಬಿರ್ಭೂಮ್‌ನಲ್ಲಿ ಎಂಟು ಜನರನ್ನು ಸಜೀವ ದಹನ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಲ್ಕತ್ತಾ ಹೈಕೋರ್ಟ್, ಮಮತಾ ಬ್ಯಾನರ್ಜಿ ಸರ್ಕಾರವು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸದಂತೆ ಮಾಡಿದ ಮನವಿಯನ್ನು ನಿರಾಕರಿಸಿದ ಕೇಂದ್ರೀಯ ತನಿಖಾ ದಳಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿದೆ. ಎಂಟು ಜನ ಮಹಿಳೆಯರು ಹಾಗೂ ಮಕ್ಕಳನ್ನು ಉದ್ರಿಕ್ತ ಗುಂಪೊಂದು ಹೊಡೆದು, ಬೆಂಕಿ ಹಚ್ಚಿ ಸುಟ್ಟುಹಾಕಿತ್ತು.
ಶಂಕಿತರು ಶರಣಾಗದೇ ಇದ್ದ ಪಕ್ಷದಲ್ಲಿ ಅವರನ್ನು ಪತ್ತೆ ಹಚ್ಚಿ ಬೇಟೆಯಾಡಲಿದ್ದೇವೆ ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದರು. ಇನ್ನೊಂದೆಡೆ ಪಶ್ಚಿಮ ಬಂಗಾಳದ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ, ಈ ಕುರಿತಾಗಿ ಆಡಳಿತಾರೂಢ ಟಿಎಂಸಿ ಪಕ್ಷವನ್ನು ಟೀಕೆ ಮಾಡಿದ್ದು, ರಾಜಕೀಯ ಹಿಂಸಾಚಾರ ಟಿಎಂಸಿ ನೇತೃತ್ವದಲ್ಲಿಯೇ ನಡೆದಿದೆ ಎಂದು ಆರೋಪ ಮಾಡಿದೆ. ಇನ್ನೊಂದೆಡೆ ಮಮತಾ ಬ್ಯಾನರ್ಜಿ ಈ ಘಟನೆಯ ಹಿಂದೆ ದೊಡ್ಡ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ತಮ್ಮ ಪ್ರತಿಸ್ಪರ್ಧಿಗಳು ಘಟನೆಯನ್ನು ರಾಜಕೀಯಗೊಳಿಸುವುದರ ಬಗ್ಗೆ ಎಚ್ಚರಿಕೆಯಲ್ಲಿರುವಂತೆ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕಾಗಿ ಬಿಜೆಪಿ ಹಾಗೂ ಟಿಎಂಸಿ ಹಲವು ರಂಗಗಳಲ್ಲಿ ಹೋರಾಟ ನಡೆಸುತ್ತಿದ್ದು, ಈ ಘಟನೆಯು ಮತ್ತೊಂದು ಸುತ್ತಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ.
ಟಿಎಂಸಿ ನಾಯಕನ ಹತ್ಯೆ ಬಳಿಕ ಮನೆಗೆ ಬೆಂಕಿ: 10 ಜನರ ಸಜೀವ ದಹನ
ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಭಾದು ಶೇಖ್, ಕಚ್ಚಾ ಬಾಂಬ್ ದಾಳಿಯಲ್ಲಿ ಸಾವಿಗೀಡಾದ ನಂತರ ಪ್ರತೀಕಾರದ ರೀತಿಯಲ್ಲಿ ರಾಮ್‌ಪುರಹತ್ ಪಟ್ಟಣದ ಬಳಿಯ ಬೊಗ್ಟುಯಿ ಗ್ರಾಮದಲ್ಲಿ ಮಂಗಳವಾರ ಗುಂಪೊಂದು ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಅವರ ಮನೆಗಳಿಗೆ ಬೀಗ ಹಾಕಿ ಜೀವಂತವಾಗಿ ಸುಟ್ಟು ಹಾಕಿದೆ. ಒಂದು ದಿನದ ನಂತರ ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಬಹುತೇಕ ಒಂದೇ ಕುಟುಂಬಕ್ಕೆ ಸೇರಿದ್ದವಾಗಿದೆ.
Birbhum Violence: ಬಂಗಾಳ ಹತ್ಯಾಕಾಂಡದ ಪ್ರಮುಖ ಆರೋಪಿ ಸೆರೆ
ಪ್ರಕರಣದ ಕುರಿತಾಗಿ ದಾಖಲಾದ ಸುಮೋಟೋ ಕೇಸ್ ಅನ್ನು ಬುಧವಾರ ವಿಚಾರಣೆ ನಡೆಸಲು ಆರಂಭಿಸಿದ್ದ ನ್ಯಾಯಾಲಯವು ಗುರುವಾರ ತತನ್ನ ಆದೇಶವನ್ನು ಕಾಯ್ದಿರಿಸಿತ್ತು. ಈ ನಡುವೆ ರಾಜ್ಯ ಸರ್ಕಾರ ಹಾಗೂ ಅರ್ಜಿದಾರರ ನಡುವೆ ಸಾಕಷ್ಟು ವಾದ ವಿವಾದಗಳು ನಡೆದವು. ರಾಜ್ಯ ಸರ್ಕಾರವು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ನೇಮಿಸಿದ್ದು, ಇಲ್ಲಿಯವರೆಗೆ ಎಸ್ ಐಟಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿತ್ತು. ಸಿಬಿಐಗೆ ಪ್ರಕರಣ ಹಸ್ತಾಂತರಿಸಿದ ನಂತರ ಈ ಪ್ರಕರಣದಲ್ಲಿ ಯಾವುದೇ ಹೆಚ್ಚಿನ ತನಿಖೆಯನ್ನು ನಡೆಸದಂತೆ ಎಸ್ ಐಟಿಗೆ ಆದೇಶಿಸಲಾಗಿದೆ.
