ಮಧ್ಯಪ್ರದೇಶದಿಂದ 15,350 ಕೆ.ಜಿ. ಶ್ರೀಗಂಧ ಕಳ್ಳಸಾಗಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಾಜ್‌ಕುಮಾರ್ ಶರ್ಮಾನನ್ನು ಸಿಬಿಐ ಹರಿಯಾಣದ ಬಹದ್ದೂರ್‌ಗಢದಲ್ಲಿ ಬಂಧಿಸಿದೆ. ಈ ಪ್ರಕರಣದಲ್ಲಿ ಶರ್ಮಾ ಸೇರಿದಂತೆ ಒಟ್ಟು ಆರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ಹರಿಯಾಣದ ಬಹದ್ದೂರ್‌ಗಢದಿಂದ ತಲೆಮರೆಸಿಕೊಂಡಿದ್ದ ಶ್ರೀಗಂಧದ ಕಳ್ಳಸಾಗಾಣಿಕೆದಾರ ರಾಜ್‌ಕುಮಾರ್ ಶರ್ಮಾನನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಮಧ್ಯಪ್ರದೇಶದ ಧಮ್ನೋಡ್‌ನ ಅರಣ್ಯ ಪ್ರದೇಶದಿಂದ 15,350 ಕಿಲೋಗ್ರಾಂ ಶ್ರೀಗಂಧದ ಮರವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆಯಿತು.
ಪುಷ್ಪಾ 2 ಸಿನಿಮಾ ಸ್ಟೈಲ್‌ನಲ್ಲಿ ಕಳ್ಳತನ:
ಮಧ್ಯಪ್ರದೇಶ ಸರ್ಕಾರದ ದೂರಿನ ಆಧಾರದ ಮೇಲೆ ಸಿಬಿಐ ಆಗಸ್ಟ್ 20, 2024 ರಂದು ಪ್ರಕರಣ ದಾಖಲಿಸಿತು. ತನಿಖೆಯಲ್ಲಿ ಈ ದೊಡ್ಡ ಪ್ರಮಾಣದ ಶ್ರೀಗಂಧ ಕಳ್ಳಸಾಗಣೆಯಲ್ಲಿ ರಾಜ್‌ಕುಮಾರ್ ಶರ್ಮಾ ಸೇರಿದಂತೆ ಭಕ್ತವಾಚಲಂ, ಬಿ. ಬಾಲಮುರುಗನ್, ತಮೀಮ್ ಅನ್ಸಾರಿ, ಶಿವಕುಮಾರ್ ಮತ್ತು ಈಶ್ವರ್ ಚಂದರ್ ಶರ್ಮಾ ಭಾಗಿಯಾಗಿದ್ದಾರೆ ಎಂದು ಬಹಿರಂಗವಾದ ಬಳಿಕ ಡಿಸೆಂಬರ್ 20, 2024 ರಂದು ಈ ಆರು ಆರೋಪಿಗಳ ವಿರುದ್ಧ ಮಧ್ಯಪ್ರದೇಶದ ಧಾರ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು.
ಸಿಬಿಐ ಕಾರ್ಯಾಚರಣೆ
ಈ ಬಂಧನವು ಶ್ರೀಗಂಧ ಕಳ್ಳಸಾಗಣೆ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಈಗ ಎಲ್ಲಾ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲಿದ್ದು, ಈ ಅಪರಾಧದ ಹಿಂದಿನ ದೊಡ್ಡ ಜಾಲವನ್ನು ಭೇದಿಸಲು ಸಿಬಿಐ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದೆ. ಈ ಸುದ್ದಿಯು ಸಿನಿಮಾದಂತೆ ರೋಚಕವಾದರೂ, ಇದು ಸತ್ಯ ಘಟನೆಯಾಗಿದ್ದು, ಶ್ರೀಗಂಧ ಕಳ್ಳಸಾಗಣೆಯ ವಿರುದ್ಧ ದೇಶದ ಕಾನೂನು ಜಾರಿ ಸಂಸ್ಥೆಗಳ ಗಂಭೀರ ಕಾರ್ಯಾಚರಣೆಯನ್ನು ತೋರಿಸುತ್ತದೆ.
