ಭೋಪಾಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮಾಡೆಲ್ ತ್ವಿಶಾ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಆಕೆಯ ಅತ್ತೆ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಭೋಪಾಲ್ (ಮೇ 28): ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೇ 12 ರಂದು ಅತ್ತೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ 33 ವರ್ಷದ ಮಾಡೆಲ್ ಮತ್ತು ನಟಿ ತ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಗುರುವಾರ ಭಾರಿ ಕ್ರಮ ಕೈಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ತ್ವಿಶಾ ಅವರ ಅತ್ತೆ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಮಧ್ಯಪ್ರದೇಶ ಹೈಕೋರ್ಟ್ ಗಿರಿಬಾಲಾ ಅವರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ನಡೆದಿದೆ.
ಗುರುವಾರ ಬೆಳಗ್ಗೆ ಸುಮಾರು 10:30 ರ ಸುಮಾರಿಗೆ ಗಿರಿಬಾಲಾ ಸಿಂಗ್ ಅವರ ನಿವಾಸಕ್ಕೆ ಧಾವಿಸಿದ ಮೂವರು ಸದಸ್ಯರ ಸಿಬಿಐ ತಂಡ, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತು. ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಇಡೀ ಮನೆಯ ‘ಡಿಜಿಟಲ್ ಮ್ಯಾಪಿಂಗ್’ (Digital Mapping) ಪ್ರಕ್ರಿಯೆಯನ್ನು ಕೂಡ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣವನ್ನು ಕೈಗೆತ್ತಿಕೊಂಡ ಬೆನ್ನಲ್ಲೇ ಸಿಬಿಐ ಭೋಪಾಲ್‌ನಲ್ಲಿ ಬೀಡುಬಿಟ್ಟಿದ್ದು, ನಗರದಲ್ಲಿ ಕ್ಯಾಂಪ್ ಆಫೀಸ್ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಕಚೇರಿ ಸ್ಥಳಾವಕಾಶ ಮತ್ತು ತನಿಖೆಯ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಸುರಕ್ಷಿತವಾಗಿಡಲು ಸೂಕ್ತ ಸೌಲಭ್ಯ ಒದಗಿಸುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸಿಬಿಐ ಪತ್ರ ಬರೆದಿದೆ.
ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಹೈಕೋರ್ಟ್; ಸಿಬಿಐ ಪರ ಸಾಲಿಸಿಟರ್ ಜನರಲ್ ವಾದ!
ಇದಕ್ಕೂ ಮುನ್ನ, ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ದೇವನಾರಾಯಣ ಮಿಶ್ರಾ ಅವರು ಗಿರಿಬಾಲಾ ಸಿಂಗ್ ಅವರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ 17 ಪುಟಗಳ ಸುದೀರ್ಘ ಆದೇಶ ಹೊರಡಿಸಿದರು. "ಪ್ರಕರಣದ ವಾಸ್ತವಿಕ ಅಂಶಗಳು ಮತ್ತು ಆರೋಪಿಗಳ ಮೇಲಿರುವ ಗಂಭೀರ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು, ಸೆಷನ್ಸ್ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ರದ್ದುಗೊಳಿಸಲಾಗುತ್ತಿದೆ" ಎಂದು ಕೋರ್ಟ್ ತಿಳಿಸಿದೆ. ಮೇ 15 ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಗಿರಿಬಾಲಾ ಅವರಿಗೆ ಜಾಮೀನು ನೀಡಿತ್ತು.
ಸಿಬಿಐ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬುಧವಾರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. "ಟ್ರಯಲ್ ಕೋರ್ಟ್ (ಕೆಳ ನ್ಯಾಯಾಲಯ)ನಿರೀಕ್ಷಣಾ ಜಾಮೀನು ನೀಡುವಾಗ ಅಗತ್ಯವಿರುವ ಪ್ರಮುಖ ಅಂಶಗಳನ್ನು ಸರಿಯಾಗಿ ಪರಿಗಣಿಸಿಲ್ಲ. ಜಾಮೀನು ಪಡೆದ ರೀತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ" ಎಂದು ಅವರು ವಾದಿಸಿದ್ದರು. ಹೈಕೋರ್ಟ್ ಆದೇಶದ ಬೆನ್ನಲ್ಲೇ ಸಂತ್ರಸ್ತೆ ತ್ವಿಶಾ ಕುಟುಂಬದ ಪರ ವಕೀಲ ಅನುರಾಗ್ ಶ್ರೀವಾಸ್ತವ ಪ್ರತಿಕ್ರಿಯಿಸಿ, "ಕೊನೆಗೂ ನ್ಯಾಯ ಸಿಕ್ಕಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
'ಸಾಕ್ಷ್ಯ ನಾಶಕ್ಕೆ ಯತ್ನ ಹಾಗೂ ನಟಿಯ ಚಾರಿತ್ರ್ಯ ವಧೆ': ಸಿಬಿಐ ಗಂಭೀರ ಆರೋಪ
ತ್ವಿಶಾ ಅವರ ಪರ ವಕೀಲರು ಹಾಗೂ ಸಿಬಿಐ ಗಿರಿಬಾಲಾ ಸಿಂಗ್ ವಿರುದ್ಧ ಹೈಕೋರ್ಟ್‌ನಲ್ಲಿ ಭೀಕರ ಆರೋಪಗಳನ್ನು ಮಾಡಿದ್ದರು.ಗಿರಿಬಾಲಾ ಸಿಂಗ್ ಅವರು ಮುಂಗಡ ಜಾಮೀನು ಪಡೆದ ನಂತರ ಮೇ 18 ರಂದು ಪತ್ರಿಕಾಗೋಷ್ಠಿ ನಡೆಸಿ, ಮೃತ ತ್ವಿಶಾ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರ ಘನತೆಗೆ ಧಕ್ಕೆ ತರಲು ಯತ್ನಿಸಿದ್ದರು. ಮಾಜಿ ಜಡ್ಜ್ ಆಗಿರುವ ಗಿರಿಬಾಲಾ ತಮ್ಮ ಪ್ರಭಾವ ಬಳಸಿ ಅಪರಾಧ ನಡೆದ ಸ್ಥಳದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ.
ಮೇ 13 ರಂದು ತನಿಖೆಯ ವೇಳೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಗಿರಿಬಾಲಾ ಸಿಂಗ್ ಅವರು ಘಟನೆಯ ಸಿಸಿಟಿವಿ ದೃಶ್ಯವನ್ನು ತಮ್ಮ ಬಳಿ ಇಟ್ಟುಕೊಂಡು, ತನಿಖೆಯ ಹಾದಿ ತಪ್ಪಿಸುವ ಹಾಗೂ ಸಾಕ್ಷ್ಯ ತಿರುಚುವ ಉದ್ದೇಶದಿಂದ ಸೋಶಿಯಲ್ ಮೀಡಿಯಾದಲ್ಲಿ ಕೇವಲ ತಮಗೆ ಬೇಕಾದ ಸಣ್ಣ ಕ್ಲಿಪ್ ಅನ್ನು ಮಾತ್ರ ಲೀಕ್ ಮಾಡಿದ್ದರು ಎಂದು ಪ್ರಾಸಿಕ್ಯೂಷನ್ ಕೋರ್ಟ್‌ಗೆ ತಿಳಿಸಿದೆ.
ಮೃತ 33 ವರ್ಷದ ನಟಿಯ ಚಾರಿತ್ರ್ಯ ವಧೆ ಮಾಡಲು ಅತ್ತೆ ಯಾವುದೇ ಕೃತ್ಯ ಬಾಕಿ ಉಳಿಸಿಲ್ಲ ಎಂದು ಸಿಬಿಐ ಹೈಕೋರ್ಟ್‌ಗೆ ತಿಳಿಸಿದೆ. ತ್ವಿಶಾ ಗರ್ಭಿಣಿಯಾಗಿದ್ದಾಗ ಆ ಮಗು ಬೇರೆಯವರದ್ದು ಎಂದು ಸಂಶಯ ವ್ಯಕ್ತಪಡಿಸಿ, ವಾಟ್ಸಾಪ್ ಚಾಟ್‌ಗಳ ಮೂಲಕ ಮಾನಸಿಕ ಕಿರುಕುಳ ನೀಡಲಾಗಿತ್ತು. ಆ ಬಳಿಕ ಆಕೆಗೆ ಬಲವಂತವಾಗಿ ಗರ್ಭಪಾತ (Abortion) ಮಾಡಿಸಲಾಗಿತ್ತು ಎಂಬ ಆಘಾತಕಾರಿ ಅಂಶವನ್ನು ಸಿಬಿಐ ಬಯಲಿಗೆಳೆದಿದೆ. ಗಿರಿಬಾಲಾ ಅವರ ಕಸ್ಟಡಿಯಲ್ ವಿಚಾರಣೆ (Custodial Interrogation) ಅತ್ಯಂತ ಅಗತ್ಯವಾಗಿದೆ ಎಂದು ಸಿಬಿಐ ಒತ್ತಿಹೇಳಿತ್ತು.
ದೇಹದ ಮೇಲಿನ ಗಾಯಗಳಿಗೆ ಸಿಗದ ಉತ್ತರ; ಪತಿ ಸಮರ್ಥ್ ಸಿಂಗ್ ಸಿಬಿಐ ಕಸ್ಟಡಿಗೆ
ತ್ವಿಶಾ ಅವರ ದೇಹದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ಮಣಿಕಟ್ಟು ಮತ್ತು ಮೊಣಕೈ ಭಾಗದಲ್ಲಿ ತೀವ್ರ ಗಾಯಗಳಾಗಿರುವುದು ಪತ್ತೆಯಾಗಿತ್ತು. ಆದರೆ ಈ ಗಾಯಗಳು ಹೇಗೆ ಸಂಭವಿಸಿದವು ಎಂಬುದಕ್ಕೆ ಅವರ ಪತಿ ಹಾಗೂ ಅತ್ತೆ ಯಾವುದೇ ಸಮರ್ಥನೆ ನೀಡಿಲ್ಲ ಎಂದು ಸಿಬಿಐ ಕೋರ್ಟ್‌ಗೆ ವಿವರಿಸಿದೆ. ತ್ವಿಶಾ ಅವರಿಗೆ ಗಂಡನ ಮನೆಯಲ್ಲಿ ನೆಮ್ಮದಿಯಿಂದ ಬದುಕಲು ಬಿಡುತ್ತಿರಲಿಲ್ಲ ಮತ್ತು ಆಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ವಕೀಲರು ಹೇಳಿದ್ದಾರೆ.
ಇದಕ್ಕೂ ಮುನ್ನ ಬುಧವಾರ, ಭೋಪಾಲ್ ನ್ಯಾಯಾಲಯವು ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿತ್ತು. ಬುಧವಾರವೇ ಸಿಬಿಐ ತಂಡವು ಸಮರ್ಥ್‌ನನ್ನು ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಗಿರಿಬಾಲಾ ಸಿಂಗ್ ನಿವಾಸಕ್ಕೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿತ್ತು. ಈ ವಾರದ ಆರಂಭದಲ್ಲಿ (ಸೋಮವಾರ) ಮಧ್ಯಪ್ರದೇಶ ಪೊಲೀಸರಿಂದ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಸಿಬಿಐ, ಸಮರ್ಥ್ ಸಿಂಗ್ ಮತ್ತು ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ, ಬಲವಂತದ ಗರ್ಭಪಾತ ಹಾಗೂ ಸಾಕ್ಷ್ಯ ನಾಶದ ಅಡಿಯಲ್ಲಿ ಮರು ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದೆ.


