Asianet Suvarna News Asianet Suvarna News

ಒಬಿಸಿ ಮಾನ್ಯತೆ ಅಧಿಕಾರ ಮತ್ತೆ ರಾಜ್ಯಗಳ ವ್ಯಾಪ್ತಿಗೆ!

* 2018ರಲ್ಲಿ ಹಕ್ಕು ತನ್ನ ವ್ಯಾಪ್ತಿಗೆ ಪಡೆದಿದ್ದ ಕೇಂದ್ರ

* ಒಬಿಸಿ ಮಾನ್ಯತೆ ಅಧಿಕಾರ ಮತ್ತೆ ರಾಜ್ಯಗಳ ವ್ಯಾಪ್ತಿಗೆ

* ಇದಕ್ಕಾಗಿ ಸಂವಿಧಾನ ತಿದ್ದುಪಡಿ: ಸಂಪುಟ ಅಸ್ತು

Cabinet passes Bill restoring power of states UTs to make their own OBC lists pod
Author
Bangalore, First Published Aug 5, 2021, 7:21 AM IST

ನವದೆಹಲಿ(ಆ.05): ಇತರೆ ಹಿಂದುಳಿದ ವರ್ಗ (ಒಬಿಸಿ)ಗಳ ಪಟ್ಟಿಗೆ ಯಾವುದೇ ಜಾತಿಯನ್ನು ಸೇರಿಸುವ ಅಧಿಕಾರವನ್ನು ಮರಳಿ ರಾಜ್ಯ ಸರ್ಕಾರಗಳಿಗೆ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎನ್ನಲಾಗಿದೆ. ಈ ಮಸೂದೆಯನ್ನು ಪ್ರಸಕ್ತ ಮುಂಗಾರು ಅಧಿವೇಶನದಲ್ಲೇ ಮಂಡಿಸಿ, ಅದಕ್ಕೆ ಅನುಮೋದನೆ ಪಡೆಯುವ ಇರಾದೆಯಲ್ಲಿ ಸರ್ಕಾರ ಇದೆ.

ಒಮ್ಮೆ ಈ ಮಸೂದೆ ಅಂಗೀಕಾರಗೊಂಡು ಕಾಯ್ದೆಯ ಸ್ವರೂಪ ಪಡೆದುಕೊಂಡರೆ, 2018ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ್ದ ಸಂವಿಧಾನದ 102ನೇ ತಿದ್ದುಪಡಿ ಮತ್ತು ಇತ್ತೀಚಿನ ಸುಪ್ರೀಂಕೋರ್ಟ್‌ ಆದೇಶದಿಂದ ಉಂಟಾಗಿದ್ದ ಗೊಂದಲಗಳು ನಿವಾರಣೆಯಾಗಲಿವೆ.

ಏನಿದು ಪ್ರಕರಣ?: ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರ್ಕಾರ, 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ತರುವ ಮೂಲಕ 338ಬಿ ಮತ್ತು 342ಎ ಪರಿಚ್ಛೇದವನ್ನು ಸೇರಿಸಿತ್ತು. 338ನೇ ಪರಿಚ್ಛೇದವು, ರಾಷ್ಟ್ರೀಯ ಹಿಂದುಳಿದ ಆಯೋಗದ ಚೌಕಟ್ಟು, ಕರ್ತವ್ಯ ಮತ್ತು ಅಧಿಕಾರವನ್ನು ವಿವರಿಸುವಂಥದ್ದು. ಇನ್ನು 342ಎ, ಯಾವುದೇ ಜಾತಿಯನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸುವ ರಾಷ್ಟ್ರಪತಿಗಳ ಅಧಿಕಾರ ಮತ್ತು ಅದನ್ನು ಬದಲಾಯಿಸುವ ಸಂಸತ್ತಿನ ಅಧಿಕಾರಕ್ಕೆ ಸಂಬಂಧಿಸಿದ್ದಾಗಿತ್ತು.

ಆದರೆ ಈ ಸಾಂವಿಧಾನಿಕ ತಿದ್ದುಪಡಿಯು, ಒಬಿಸಿ ಪಟ್ಟಿರಚಿಸುವ ರಾಜ್ಯ ಸರ್ಕಾರಗಳ ಹಕ್ಕನ್ನು ಕಸಿದುಕೊಂಡಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವಂಥ ನಡೆ ಎಂದು ವಿಪಕ್ಷಗಳು ಆರೋಪಿಸಿದ್ದವು.

ಅದರ ನಡುವೆಯೇ, ಮಹಾರಾಷ್ಟ್ರದ ಮರಾಠ ಮೀಸಲು ಪ್ರಕರಣದಲ್ಲಿ ಇತ್ತೀಚೆಗೆ ಬಹುಮತದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಒಂದು ಜಾತಿಯನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ ಎಂದು ಗುರುತಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ ಸ್ಪಷ್ಟಪಡಿಸಿತ್ತು. ಜೊತೆಗೆ ಇದಕ್ಕೆ ಉದಾಹರಣೆಯಾಗಿ ಅದು, ಕೇಂದ್ರ ಸರ್ಕಾರ 2018ರಲ್ಲಿ ಅಂಗೀಕರಿಸಿದ್ದ ಸಂವಿಧಾನದ 102ನೇ ತಿದ್ದುಪಡಿಯನ್ನು ಉದಾಹರಿಸಿತ್ತು. ಸುಪ್ರೀಂಕೋರ್ಟ್‌ ವ್ಯಾಖ್ಯಾನದ ಬಗ್ಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿ, ಮೇಲ್ಮನವಿ ಸಲ್ಲಿಸಿತ್ತಾದರೂ, ಅದನ್ನು 2021ರ ಮೇ 5ರಂದು ಸುಪ್ರೀಂಕೋರ್ಟ್‌ ವಜಾ ಮಾಡಿತ್ತು.

ಮತ್ತೊಂದೆಡೆ ಈ ವಿಷಯದ ಕುರಿತು ಸಂಸತ್ತಿನ ಒಳಗೂ, ಹೊರಗೂ ಸಾಕಷ್ಟುಟೀಕೆಗಳು ಕೇಳಿಬಂದಿದ್ದವು. ವಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.

ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದಿದ್ದ ಕೇಂದ್ರ ಸರ್ಕಾರ ಇದೀಗ ಒಬಿಸಿ ಪಟ್ಟಿಗೆ ಯಾವುದೇ ಜಾತಿಯನ್ನು ಸೇರಿಸುವ ಅಧಿಕಾರ ರಾಜ್ಯಗಳಿಗೆ ಸೇರಿದ್ದು ಎಂದು ಸ್ಪಷ್ಟಪಡಿಸುವ ಸಲುವಾಗಿ ಸಂವಿಧಾನಕ್ಕೆ 127ನೇ ತಿದ್ದುಪಡಿ ತರಲು ಮುಂದಾಗಿದೆ.

Follow Us:
Download App:
  • android
  • ios