ಕೋಲ್ಕತಾ/ನವದೆಹಲಿ [ಡಿ.15]: ಕೇಂದ್ರ ಸರ್ಕಾರದ ಮಹತ್ವದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ(ಕ್ಯಾಬ್‌) ವಿರೋಧಿಸಿ ಕಳೆದ ಕೆಲವು ದಿನಗಳಿಂದ ಈಶಾನ್ಯ ಭಾರತದಲ್ಲಿ ನಡೆಯುತ್ತಿರುವ ಹಿಂಸಾರೂಪದ ಪ್ರತಿಭಟನೆ ಇದೀಗ ಪಶ್ಚಿಮ ಬಂಗಾಳಕ್ಕೂ ವ್ಯಾಪಿಸಿದೆ. ಉದ್ರಿಕ್ತ ಪ್ರತಿಭಟನಾಕಾರರು 25 ಬಸ್‌ಗಳು, 20 ಅಂಗಡಿಗಳು, ಮೂರು ರೈಲು ನಿಲ್ದಾಣ, 5 ಖಾಲಿ ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಅಸ್ಸಾಂನಲ್ಲಿ ಖಾಲಿ ತೈಲ ಟ್ಯಾಂಕರ್‌ಗೆ ಬೆಂಕಿ ಹಚ್ಚಲಾಗಿದ್ದು, ಅದರ ಚಾಲಕ ಬಲಿಯಾಗಿದ್ದಾನೆ.

ಈ ನಡುವೆ, ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಅಸ್ಸಾಂನ 30ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿವೆ. ಡಿ.18ರಿಂದ ಕರ್ತವ್ಯ ಬಹಿಷ್ಕರಿಸುವುದಾಗಿ ಅಸ್ಸಾಂ ಸರ್ಕಾರಿ ನೌಕರರು ಘೋಷಿಸಿದ್ದಾರೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಭಾರೀ ಸಂಖ್ಯೆಯ ಜನರು ಭಾಗವಹಿಸಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಬಂಗಾಳದಲ್ಲಿ ಹಿಂಸೆ:  ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌, ಉತ್ತರ 24 ಪರಗಣ ಜಿಲ್ಲೆಗಳು ಹಾಗೂ ಹೌರಾದ ಗ್ರಾಮೀಣ ಪ್ರದೇಶಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭಾರೀ ಪ್ರಮಾಣದ ಹಿಂಸಾಚಾರಗಳು ನಡೆದಿವೆ. ನೂರಾರು ಸಂಖ್ಯೆಯ ಉದ್ರಿಕ್ತ ಪ್ರತಿಭಟನಾಕಾರರು ಕೋಲ್ಕತಾದ ರಾಷ್ಟ್ರೀಯ ಹೆದ್ದಾರಿಯಲ್ಲಿ 25ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ. ಮುರ್ಷಿದಾಬಾದ್‌ನಲ್ಲಿ ನಿಂತಿದ್ದ ಖಾಲಿ 5 ರೈಲುಗಳು, ಹೌರಾದಲ್ಲಿ 20ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು ಹಾಗೂ ಹೌರಾ, ಮುರ್ಷಿದಾಬಾದ್‌, ಮಾಲ್ಡಾ ಜಿಲ್ಲೆಯಲ್ಲಿ 3 ರೈಲ್ವೆ ನಿಲ್ದಾಣಕ್ಕೆ ಬೆಂಕಿ ಇಟ್ಟಿದ್ದಾರೆ. ಈ ವೇಳೆ ಹೌರಾ ಜಿಲ್ಲೆಯ ರೈಲು ನಿಲ್ದಾಣದ ಟಿಕೆಟ್‌ ಕೌಂಟರ್‌ ಸುಟ್ಟು ಕರಕಲಾಗಿದೆ. ಇದನ್ನು ತಡೆಯಲು ಬಂದ ರೈಲ್ವೆ ಸಿಬ್ಬಂದಿಗೆ ಪ್ರತಿಭಟನಾಕಾರರು ಥಳಿಸಿದ್ದಾರೆ. ಕೆಲವೆಡೆ ಪೊಲೀಸರ ಮೇಲೆಯೂ ಕಲ್ಲು ತೂರಾಟ ಸೇರಿದಂತೆ ಇನ್ನಿತರ ಹಿಂಸಾಕೃತ್ಯ ಎಸಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಲಾಠಿಚಾಜ್‌ರ್‍ ನಡೆಸಿದ್ದಾರೆ. ರಸ್ತೆ, ರೈಲು ತಡೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ. 78 ರೈಲುಗಳ ಸಂಚಾರ ರದ್ದಾಗಿದೆ.

ಪೌರತ್ವ ಕಾಯ್ದೆ ಕಿಡಿ: ಶಿಲ್ಲಾಂಗ್ ಭೇಟಿ ರದ್ದುಗೊಳಿಸಿದ ಅಮಿತ್ ಶಾ!..

ಏತನ್ಮಧ್ಯೆ, ಪ್ರತಿಭಟನೆ ವೇಳೆ ಹಿಂಸಾಪ್ರವೃತ್ತಿಯಲ್ಲಿ ತೊಡಗುವ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ರಿಕ್ತರಿಗೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದರೆ, ಈ ಕಠಿಣ ಎಚ್ಚರಿಕೆಗೂ ಬಗ್ಗದ ಪ್ರತಿಭಟನಾಕಾರರು, ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.

ಜಾಮಿಯಾ ವಿವಿ ರಜೆ ಘೋಷಣೆ:

ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಹೀಗಾಗಿ, ಜ.5ರವರೆಗೂ ಅಂದರೆ 21 ದಿನಗಳ ಕಾಲ ದೀರ್ಘಕಾಲೀನ ರಜೆ ಘೋಷಿಸಲಾಗಿದ್ದು, ನಿಗದಿಯಾಗಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಶನಿವಾರ ವಿವಿ ಹೇಳಿದೆ. ಕ್ಯಾಬ್‌ ವಿರುದ್ಧ ಶುಕ್ರವಾರ ವಿವಿ ಆವರಣದಿಂದ ಸಂಸತ್ತಿನೆಡೆಗೆ ರಾರ‍ಯಲಿ ನಡೆಸಲು ಉದ್ದೇಶಿಸಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾಜ್‌ರ್‍ ಮಾಡಿದ್ದರು. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಏರ್ಪಟ್ಟಮಾರಾಮಾರಿಯಿಂದ ವಿವಿ ಆವರಣ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು.