ವಿದೇಶಿ ಮಹಿಳೆಗೆ 500 ಮೀಟರ್ ದೂರಕ್ಕೆ 18000 ರೂ ಚಾರ್ಜ್ ಮಾಡಿದ ಕ್ಯಾಬ್ ಚಾಲಕ ಅರೆಸ್ಟ್, ಎಕ್ಸ್ ಮೂಲಕ ಭಾರತದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಚಾಲಕನ ಅರೆಸ್ಟ್ ಮಾಡಿದ್ದಾರೆ. 

ಮುಂಬೈ (ಜ.30) ಭಾಷೆ ಬರದೆ ಮತ್ತೊಂದು ರಾಜ್ಯಕ್ಕೆ, ನಗರಕ್ಕೆ ತೆರಳಿದಾಗ ಬಹುತೇಕರು ಎದುರಿಸುವ ದೊಡ್ಡ ಸಮಸ್ಯೆ ಸಾರಿಗೆ. ಕ್ಯಾಬ್, ಆಟೋ ಸೇರಿದಂತೆ ಇತರ ಸಾರಿಗೆಗಳ ಮೂಲಕ ಪ್ರವಾಸಿ ತಾಣಗಳ ತಿರುಗಾಟ, ಅಥವಾ ಕೆಲಸದ ನಿಮಿತ್ತ ಸುತ್ತಾಡುವಾಗ ಹಲವರು ಹೆಚ್ಚುವರಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ. ಇನ್ನು ವಿದೇಶಿಗರು ಎಂದರೆ ಕೇಳಬೇಕಾ? ಹೀಗೆ ಅಮೆರಿಕದ ಮಹಿಳೆ ಭಾರತಕ್ಕೆ ಬಂದು ಏರ್‌ಪೋರ್ಟ್‌ನಿಂದ ಕೇವಲ 400 ಮೀಟರ್ ದೂರದಲ್ಲಿದ್ದ ಹೊಟೆಲ್ ತಲುಪಲು ಕ್ಯಾಬ್ ಚಾಲಕ್ ಚಾರ್ಜ್ ಮಾಡಿದ್ದು ಬರೋಬ್ಬರಿ 18,000 ರೂಪಾಯಿ.ಚಾಲಕನ ಜೊತೆ ವಾಗ್ವಾದ ಮಾಡದೇ ಹಣ ಪಾವತಿಸಿದ ವಿದೇಶಿ ಮಹಿಳೆ ನೇರವಾಗಿ ಎಕ್ಸ್ ಮೂಲಕ ಅಸಮಾಧಾನ ತೋಡಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕ್ಯಾಬ್ ಚಾಲಕನ ಅರೆಸ್ಟ್ ಮಾಡಿದ ಘಟನೆ ನಡೆದಿದೆ.

ಅಮೆರಿಕ ಮಹಿಳೆಗೆ ಆಘಾತ

ಅಮೆರಿಕ ಮಹಿಳೆ ಕೆಲ ವೈಯುಕ್ತಿಕ ಕಾರಣ ಸಲುವಾಗಿ ಮುಂಬೈಗೆ ಬಂದಿಳಿದಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದೇಶಿ ಮಹಿಳೆ ಹಿಲ್ಟನ್ ಹೊಟೆಲ್‌ನಲ್ಲಿ ಮೊದಲೇ ಕೊಠಡಿ ಬುಕ್ ಮಾಡಲಾಗಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ಹಿಲ್ಟನ್ ಹೊಟೆಲ್ ದೂರ ಕೇವಲ 400 ಮೀಟರ್ ಮಾತ್ರ. ಪ್ರಯಾಣಕ್ಕಾಗಿ ಕ್ಯಾಬ್ ಬುಕ್ ಮಾಡಿದ್ದಾರೆ. ಕ್ಯಾಬ್ ಬಂದ ತಕ್ಷಣವೇ ವಿದೇಶಿ ಮಹಿಳೆಗೆ ಗಾಬರಿಯಾಗಿದೆ. ಕಾರಣ ಕ್ಯಾಬ್ ಚಾಲಕನ ಜೊತೆಗೆ ಮತ್ತೊಬ್ಬ ಕೂಡ ಆಗಮಿಸಿದ್ದಾನೆ.

18,000 ರೂಪಾಯಿ ಚಾರ್ಜ್

ಆರಂಭದಲ್ಲೇ ಕ್ಯಾಬ್ ಹತ್ತಲು ಹಿಂದೇಟು ಹಾಕಿದ್ದಾರೆ. ಸಾಮಾನ್ಯವಾಗಿ ಕ್ಯಾಬ್ ಚಾಲಕ ಮಾತ್ರ ಇರುತ್ತಾನೆ. ಆದರೆ ಇಲ್ಲಿ ಇಬ್ಬರು ಇದ್ದಾರೆ. ವಿದೇಶಿಯಾಗಿರುವ ಕಾರಣ ಅನುಮಾನಗಳು ಮೂಡಿದೆ. ಅದರೂ ಧೈರ್ಯ ಮಾಡಿ ಕ್ಯಾಬ್ ಹತ್ತಿದ್ದಾರೆ. ಕೇವಲ 400 ಮೀಟರ್ ದೂರದಲ್ಲಿದ್ದ ಹೊಟೆಲ್‌ಗೆ ಎರಡು ಸುತ್ತು ಹೊಡೆಸಿದ್ದಾರೆ. ಬಳಿಕ ಅಪರಿಚಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗೆ ವಿದೇಶಿ ಮಹಿಳೆ ಗಾಬರಿಗೊಂಡಿದ್ದಾರೆ. ಅಪರಿಚಿತ ಸ್ಥಳದಲ್ಲಿ ಕ್ಯಾಬ್ ನಿಲ್ಲಿಸಿ 18,000 ರೂಪಾಯಿ ಆಗುತ್ತೆ ಎಂದಿದ್ದಾರೆ. ಪಾವತಿ ಮಾಡಿದರೆ ಹೊಟೆಲ್‌ಗೆ ಕೊಂಡೊಯ್ಯುವುದಾಗಿ ಬೆದರಿಸಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೆ ವಿದೇಶಿ ಮಹಿಳೆ 18,000 ರೂಪಾಯಿ ಪಾವತಿ ಮಾಡಿದ್ದಾರೆ. ಬಳಿಕ ಕ್ಯಾಬ್ ಹೊಟೆಲ್ ಬಳಿ ತಂದು ನಿಲ್ಲಿಸಿದ್ದಾರೆ. ಹೊಟೆಲ್ ಎಂಟ್ರಿ ಒಳಗೂ ಬರದೇ ಹೊರಗಡೆ ನಿಲ್ಲಿಸಿ ವಿದೇಶಿ ಮಹಿಳೆಯನ್ನು ಇಳಿಸಿ ತೆರಳಿದ್ದಾರೆ.

ಘಟನೆ ಕುರಿತು ಎಕ್ಸ್‌ನಲ್ಲಿ ಟ್ವೀಟ್

ಮುಂಬೈನಲ್ಲಿ ಬಂದಿಳಿದು ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿರುವ ಹೊಟೆಲ್‌ಗೆ ತೆರಳಲು 18,000 ರೂಪಾಯಿ ಚಾರ್ಜ್ ಮಾಡಿದ್ದಾರೆ. ಮುಂಬೈನಲ್ಲಿ ಲೂಟಿ ನಡೆಯುತ್ತಿದೆ. ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡುತ್ತಿದ್ದಂತೆ ಮುಂಬೈ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ತಕ್ಷಣವೇ ಸ್ವಯಂಪ್ರೇರಿತ ದೂರು ದಾಖಲಿಸಿದ ಪೊಲೀಸರು ಕ್ಯಾಬ್ ಚಾಲಕನ ಪತ್ತೆ ಹಚ್ಚಿ ಬಂಧಿಸಿದ್ದಾರೆ.

Scroll to load tweet…