Asianet Suvarna News Asianet Suvarna News

ಪೌರತ್ವ ಪ್ರತಿಭಟನೆ : ಗಲಭೆಕೋರರಿಗೆ ಎಲೆಕ್ಟ್ರಿಕ್‌ ಶಾಕ್‌!

ದೇಶದಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು ಈ ವೇಳೆ ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಎಲೆಕ್ಟ್ರಿಕ್ ಶಾಕ್ ನೀಡುವ ಶೀಲ್ಡ್ ಗಳನ್ನು ಬಳಸಿದ್ದಾರೆ. 

CAA Protest RPF Use Electric Shock Shield
Author
Bengaluru, First Published Dec 28, 2019, 7:26 AM IST

ನವದೆಹಲಿ [ಡಿ.28]: ಪೌರತ್ವ ವಿರೋಧಿ ಪ್ರತಿಭಟನೆಗಳು ಹಿಂಸಾಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ, ಇಂಥ ಹಿಂಸಾತ್ಮಕ ಪ್ರತಿಭಟನೆ ತಡೆಯಲು ಅರೆ ಸೇನಾಪಡೆಗಳು ಇದೀಗ ಗಲಭೆ ನಿಗ್ರಹ ಶೀಲ್ಡ್‌ಗಳ ಬಳಕೆ ಆರಂಭಿಸಿವೆ. ಶುಕ್ರವಾರ ದೆಹಲಿಯಲ್ಲಿ ನಡೆದ ಪೌರತ್ವ ವಿರೋಧಿ ಪ್ರತಿಭಟನೆ ವೇಳೆ, ಭದ್ರತೆಗೆ ನಿಯೋಜನೆಗೊಂಡಿದ್ದ ಕ್ಷಿಪ್ರಕಾರ್ಯಪಡೆ (ಆರ್‌ಪಿಎಫ್‌) ಸಿಬ್ಬಂದಿ ಅತ್ಯಾಧುನಿಕ ಎಲೆಕ್ಟ್ರಿಕ್‌ ಶಾಕ್‌ ನೀಡಬಲ್ಲ ಶೀಲ್ಡ್‌ಗಳನ್ನು ಬಳಸಿದ್ದು ಕಂಡುಬಂತು.

ಇದುವರೆಗೆ ಆರ್‌ಪಿಎಫ್‌ ಸಿಬ್ಬಂದಿ ಅಥವಾ ಪೊಲೀಸರು, ಪ್ರತಿಭಟನೆ ತಡೆಯಲು ಪಾಲಿಕಾರ್ಬೋನೆಟ್‌ ಶೀಲ್ಡ್‌ಗಳನ್ನು ಬಳಸುತ್ತಿದ್ದರು. ಇದರಿಂದ ತಮ್ಮ ಮೇಲೆ ಎರಗಿ ಬರುವ ಕಲ್ಲುಗಳನ್ನು ಅವರು ತಡೆಯಬಹುದಾಗಿತ್ತು ಅಥವಾ ಇಂಥ ಶೀಲ್ಡ್‌ಗಳನ್ನು ಅಡ್ಡಹಿಡಿದು, ಪ್ರತಿಭಟನಾಕಾರರು ಮುಂದೆ ಸಾಗದಂತೆ ಅಡ್ಡಗಟ್ಟಬಹುದಿತ್ತು. ಆದರೆ ಇವು ಅತ್ಯಂತ ಪರಿಣಾಮಕಾರಿಯಾಗೇನೂ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಇದೀಗ ಎಲೆಕ್ಟ್ರಿಕ್‌ ಶಾಕ್‌ ನೀಡಬಲ್ಲ ಶೀಲ್ಡ್‌ಗಳನ್ನು ಆರ್‌ಪಿಎಫ್‌ ಸಿಬ್ಬಂದಿಗೆ ನೀಡಲಾಗಿದೆ. ಈ ಶೀಲ್ಡ್‌ಗಲ್ಲಿ ಸ್ವಿಚ್‌ ನೀಡಲಾಗಿದ್ದು, ಅದನ್ನು ಆರ್‌ಪಿಎಫ್‌ ಸಿಬ್ಬಂದಿ ಒತ್ತಿದರೆ ವಿದ್ಯುತ್‌ ಪ್ರವಹಿಸಲು ಆರಂಭವಾಗುತ್ತದೆ. ಇಂಥ ಶೀಲ್ಡ್‌ಗಳನ್ನು ಯಾವುದೇ ಪ್ರತಿಭಟನಾಕಾರ ಮುಟ್ಟಿದರೆ ಅವರಿಗೆ ವಿದ್ಯುತ್‌ ಶಾಕ್‌ ಹೊಡೆಯುತ್ತದೆ.

ಬೆಂಕಿ ಹಚ್ಚುವವರು ನಾಯಕರಲ್ಲ ಎಂಬ ಸೇನಾ ಮುಖ್ಯಸ್ಥರ ಹೇಳಿಕೆಗೆ ವಿಪಕ್ಷಗಳ ಆಕ್ಷೇಪ!...

ಆದರೆ ಇಂಥ ಶೀಲ್ಡ್‌ಗಳಲ್ಲಿ ಕೇವಲ 12 ವೋಲ್ಟ್‌ ಮಾತ್ರ ವಿದ್ಯುತ್‌ ಪ್ರವಹಿಸುವ ಕಾರಣ, ಇವು ಮಾರಣಾಂತಿಕವಲ್ಲ. ಕೇವಲ ಸಣ್ಣ ಶಾಕ್‌ ನೀಡಿ, ಪ್ರತಿಭಟನಾಕಾರರು ಹಿಂದೆ ಸರಿಯುವಂತೆ ಮಾಡುತ್ತದೆ. ಇಂಥ ಶೀಲ್ಡ್‌ಗಳ ಬೆಲೆ ಸುಮಾರು 20000 ರು. ಇದೆ.

12 ವ್ಯಾಟ್‌ ಶಾಕ್‌ ನೀಡುತ್ತೆ

ಎಲೆಕ್ಟ್ರಿಕ್‌ ಶಾಕ್‌ ಶೀಲ್ಡ್‌ ಎಂಬುದು ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಭದ್ರತಾ ಸಿಬ್ಬಂದಿ ಬಳಸುವ ಒಂದು ಉಪಕರಣ. ಈ ಉಪಕರಣದ ಒಂದು ಬದಿಯಲ್ಲಿ ಸ್ವಿಚ್‌ ಇದ್ದರೆ, ಇನ್ನೊಂದು ಬದಿಯಲ್ಲಿ ಎಲೆಕ್ಟ್ರಿಕ್‌ ಸರ್ಕಿಟ್‌ ಇರುತ್ತದೆ. ಭದ್ರತಾ ಪಡೆಗಳು ಅಗತ್ಯ ಸಂದರ್ಭದಲ್ಲಿ ಸ್ವಿಚ್‌ ಒತ್ತಿದಾಕ್ಷಣ, ಎಲೆಕ್ಟ್ರಿಕ್‌ ಸರ್ಕಿಟ್‌ನಲ್ಲಿ ವಿದ್ಯುತ್‌ ಪ್ರವಹಿಸುತ್ತದೆ. ಯಾವುದೇ ಪ್ರತಿಭಟನಾಕಾರ ಈ ಉಪಕರಣವನ್ನು ಮುಟ್ಟಿದರೆ ಶಾಕ್‌ ಹೊಡೆಯುತ್ತದೆ. 5 ಸೆಕೆಂಡ್‌ಗಿಂತ ಹೆಚ್ಚಿನ ಕಾಲ ಇದನ್ನು ಮುಟ್ಟಿಇಟ್ಟುಕೊಂಡರೆ, ವಿದ್ಯುದಾಘಾತಕ್ಕೆ ಒಳಗಾಗಿ ಅವರು ಕೆಳಗೆ ಬೀಳುವ ಸಾಧ್ಯತೆ ಇರುತ್ತದೆ. ಆದರೆ ಈ ಉಪಕರಣದಲ್ಲಿ ಕೇವಲ 12 ವ್ಯಾಟ್‌ ವಿದ್ಯುತ್‌ ಪ್ರವಹಿಸುವ ಕಾರಣ, ಇದು ಮಾರಣಾಂತಿಕವಾಗಿರುವುದಿಲ್ಲ.

ಏನು ಉಪಯೋಗ?

- ಕಡಿಮೆ ಭದ್ರತಾ ಸಿಬ್ಬಂದಿಯಿಂದ ಪರಿಸ್ಥಿತಿ ನಿರ್ವಹಣೆ ಸಾಧ್ಯ

- ವಿದ್ಯುತ್‌ ಶಾಕ್‌ನ ಭೀತಿಯಿಂದಾಗಿ ಹಿಂಸೆ ತಡೆವ ಅವಕಾಶ

- ಪ್ರತಿಭಟನಾಕಾರರು ಮುಂದುವರೆಯದಂತೆ ತಡೆಯಬಹುದು

Follow Us:
Download App:
  • android
  • ios