ನವದೆಹಲಿ(ಡಿ.27): ಬೆಂಕಿ ಹಚ್ಚಿಸುವವರು ನಾಯಕರೇ ಅಲ್ಲ ಎಂಬ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ವಿಪಕ್ಷಗಳು ಕೆಂಡಾಮಂಡಲವಾಗಿವೆ. ಸೇನಾ ಮುಖ್ಯಸ್ಥರು ರಾಜಕೀಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

ವಿದ್ಯಾರ್ಥಿಗಳು ಹಾಗೂ ಜನ ಸಮೂಹಕ್ಕೆ ಬೆಂಕಿ ಹಚ್ಚಲು ಹಾಗೂ ಹಿಂಸಾಚಾರ ನಡೆಸಲು ಮಾರ್ಗದರ್ಶನ ಮಾಡುವುದು ನಾಯಕತ್ವವಲ್ಲ. ಅಂತಹವರು ನಾಯಕರಾಗಲು ಯೋಗ್ಯರೂ ಅಲ್ಲ ಎಂದು ಬಿಪಿನ್ ರಾವತ್ ಹೇಳಿಕೆ ನೀಡಿದ್ದರು. 

ಮಿಲಿಟರಿಗಾಗಿ ಹೊಸ ಇಲಾಖೆ, ಹೊಸ ಬಾಸ್!

ರಾವತ್ ಹೇಳಿಕೆಯನ್ನು ಖಂಡಿಸಿರುವ ಪ್ರತಿಪಕ್ಷಗಳು, ಇದೇ ಡಿ.31ರಂದು ನಿವೃತ್ತರಾಗಲಿರುವ ಜನರಲ್ ರಾವತ್ ರಾಜಕೀಯ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ ಎಂದು ಹರಿಹಾಯ್ದಿವೆ.  

70 ವರ್ಷಗಳ ಭಾರತೀಯ ಸೇನೆಯ ಇತಿಹಾಸದಲ್ಲಿ ಸಂಪ್ರದಾಯದಿಂದ ವಿಮುಖವಾಗಿರುವುದನ್ನು ರಾವತ್ ಅವರ ರಾಜಕೀಯ ಹೇಳಿಕೆ ಬಿಂಬಿಸುತ್ತಿದೆ ಎಂದು ಹೋರಾಟಗಾರ ಯೋಗೇಂದ್ರ ಯಾವದ್ ಹೇಳಿದ್ದಾರೆ. 

POK ಕಸಿಯಲು ನಾವು ರೆಡಿ: ರಾವತ್ ಹೇಳಿಕೆಯಿಂದ ಪಾಕ್‌ನಲ್ಲಿ ಗಡಿಬಿಡಿ!

ಸೇನಾ ಮುಖ್ಯಸ್ಥರಿಗೆ ರಾಜಕೀಯ ಬಗ್ಗೆ ಮಾತನಾಡಲು ಅನುಮಿತಿ ನೀಡಿದರೆ ಸರ್ಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಅನುಮತಿ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಟ್ವೀಟ್ ಮಾಡಿದ್ದಾರೆ. 

ಅದರಂತೆ ಬಿಪಿನ್ ರಾವತ್ ಹೇಳಿಕೆಯನ್ನು ಖಂಡಿಸಿರುವ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ, ತಮ್ಮ ಕಾರ್ಯವ್ಯಾಪ್ತಿ ತಿಳಿದುಕೊಳ್ಳುವುದು ಕೂಡ ನಾಯಕತ್ವದ ಭಾಗ ಎಂಬುದನ್ನು ಸೇನಾ ಮುಖ್ಯಸ್ಥರು ಮರೆತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.