ಇಲ್ಲೊಂದು ಕಡೆ ಚಿಟ್ಟೆಗಳ ದೊಡ್ಡ ಗುಂಪೊಂದು ಏನು ತಮ್ಮ ಕಾಯಕದಲ್ಲಿ ತೊಡಗಿದ್ದು, ಅವುಗಳ ಈ ಚಟುವಟಿಕೆ ನೋಡುಗರಿಗೆ ವಿಸ್ಮಯ ಮೂಡಿಸಿದೆ.
ಚಿಟ್ಟೆಗಳ ಪ್ರಪಂಚ ಒಂದು ವಿಸ್ಮಯ ಲೋಕ, ಮುಟ್ಟಿದರೆ ಮೈಯೆಲ್ಲಾ ತುರಿಸುವ ಜುಂಗು ಜುಂಗುಗಳಿಂದ ಕೂಡಿದ ಕಂಬಳಿ ಹುಳ ಚಿಟ್ಟೆಯಾಗಿ ಬದಲಾಗುವ ವಿಸ್ಮಯ ಒಂದು ಅದ್ಭುತವೇ ಸರಿ. ಹಲವು ಬಣ್ಣಗಳಲ್ಲಿ ಹಲವು ವೈವಿಧ್ಯಗಳಲ್ಲಿ ಕಂಡು ಬರುವ ಚಿಟ್ಟೆಗಳ ಬಗ್ಗೆ ನಮ್ಮ ವರಕವಿ ದ.ರಾ ಬೇಂದ್ರೆಯವರು ದೊಡ್ಡ ಕವಿತೆಯನ್ನೇ ಬರೆದಿದ್ದಾರೆ. ಪಾತರಗಿತ್ತಿ ಪಕ್ಕಾ ಎಂಬ ಹಾಡಿನ ಮೂಲಕ ಅವರು ಚಿಟ್ಟೆಗಳ ಲೋಕವನ್ನು ಅವುಗಳ ವೈವಿಧ್ಯತೆಯನ್ನು ಬಹಳ ಅದ್ಭುತವಾಗಿ ವರ್ಣಿಸಿದ್ದಾರೆ. ಹಾಗೆಯೇ ಇಲ್ಲೊಂದು ಕಡೆ ಚಿಟ್ಟೆಗಳ ದೊಡ್ಡ ಗುಂಪೊಂದು ಏನು ತಮ್ಮ ಕಾಯಕದಲ್ಲಿ ತೊಡಗಿದ್ದು, ಅವುಗಳ ಈ ಚಟುವಟಿಕೆ ನೋಡುಗರಿಗೆ ವಿಸ್ಮಯ ಮೂಡಿಸಿದೆ.
ಭಾರತೀಯ ಅರಣ್ಯ ಸೇವೆಯ (IFS) ಅಧಿಕಾರಿ ಪ್ರವೀಣ್ ಕಾಸ್ವಾನ್ (Parveen Kaswan)ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಚಿಟ್ಟೆಗಳು ಹೀಗೆ ಗುಂಪಾಗಿ ಏನು ಮಾಡುತ್ತಿವೆ ಎಂಬುದನ್ನು ಅವರು ವಿವರಿಸಿದ್ದಾರೆ. 'ಇದನ್ನು ಮಡ್ ಪಡ್ಲಿಂಗ್ ಎಂದು ಕರೆಯುತ್ತಾರೆ. ಇಲ್ಲಿ ಚಿಟ್ಟೆಗಳು (Butterflies) ಮಣ್ಣಿನಿಂದ ಲವಣಾಂಶವನ್ನು ಹೀರಲು ಒಟ್ಟಿಗೆ ಸೇರುತ್ತವೆ' ಎಂದು ಅವರು ವಿವರಿಸಿದ್ದಾರೆ. ಕೇವಲ 8 ಸೆಕೆಂಡ್‌ಗಳ ಈ ವಿಡಿಯೋವನ್ನು 77 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನೀಲಾಕಾಶದಲ್ಲಿ ಚಿತ್ತಾರ ಮೂಡಿಸಿದ ಬಣ್ಣ ಬಣ್ಣದ ಚಿಟ್ಟೆಗಳು: ವೈರಲ್ ವಿಡಿಯೋ
ಅಲ್ಲದೇ ಮತ್ತೊಂದು ಟ್ವಿಟ್‌ನಲ್ಲಿ ಅವರು ಈ ಬಗ್ಗೆ ಇನ್ನಷ್ಟು ವಿವರಿಸಿದ್ದು, ಇವು ಬಹುತೇಕ ಗಂಡು ಚಿಟ್ಟೆಗಳಾಗಿದ್ದು, ಹೆಣ್ಣು ಚೆಟ್ಟೆಗಳನ್ನು ಆಕರ್ಷಿಸುವ ಸಲುವಾಗಿ ಅವರು ಉಪ್ಪು ಮುಂತಾದ ಲವಣಾಂಶ ಹಾಗೂ ಸುಗಂಧಗಳನ್ನು ಸಂಗ್ರಹಿಸುತ್ತವೆ. ಸಣ್ಣದಾದ ನೀರಿನ ಮೂಲಗಳು, ಸೆಗಣಿ, ಮಣ್ಣು ಮುಂತಾದ ಸ್ಥಳಗಳಿಂದ ಅವು ಈ ಸುಗಂಧವನ್ನು ಸಂಗ್ರಹಿಸುತ್ತವೆ ಎಂದು ಅವರು ಬರೆದಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಈ ಪ್ರಕ್ರಿಯೆಯನ್ನು ಹಿಂದೆಂದೂ ನೋಡಿರಲಿಲ್ಲ, ನೀವು ಹಾಕುವ ಪ್ರತಿಯೊಂದು ವಿಡಿಯೋಗಳು ಕೂಡ ಅಚ್ಚರಿಯಿಂದ ಕೂಡಿರುತ್ತವೆ ಈ ದೃಶ್ಯ ತುಂಬಾ ಚೆನ್ನಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಕೆಲವೊಮ್ಮ ನನಗೆ ಅಚ್ಚರಿ ಆಗುತ್ತದೆ. ಹೇಗೆ ಭೂಮಿ ತಾಯಿ ತನ್ನ ಮಡಿಲಲ್ಲಿ ಎಂಥಹಾ ಸುಂದರ ಭಾಗಗಳನ್ನು ಸೃಷ್ಟಿಸಿದೆ ಎಂದು' ಎಂದು ಮತ್ತೊಬ್ಬ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ಇಂತಹ ದೃಶ್ಯಗಳಿದ್ದರೆ ನಾನು ಗಂಟೆಗಳವರೆಗೂ ಅವುಗಳನ್ನೇ ನೋಡುತ್ತಾ ಕಾಲ ಕಳೆಯುವೆ, ಪೃಕೃತಿಯ ಸೌಂದರ್ಯವನ್ನು ಜನರು ಹೇಗೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ನನಗೆ ಅಚ್ಚರಿ ಮೂಡಿಸಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಚಿಟ್ಟೆಗಳು ನಮ್ಮ ಪ್ರಕೃತಿಯ ಒಂದು ಅವಿಭಾಜ್ಯ ಅಂಗ, ಅವುಗಳ ವಿಭಿನ್ನ ಬಣ್ಣದ ಸಂಯೋಜನೆಯಿಂದ (colour combination) ಅವು ಸದಾ ಎಲ್ಲರನ್ನೂ ಆಕರ್ಷಿಸುತ್ತವೆ. ಜೊತೆಗೆ ಪೃಕೃತಿಯಲ್ಲಿ ಹೂಗಳ ಪರಾಗಸ್ಪರ್ಶಕ್ಕೂ ಚಿಟ್ಟೆ ಮುಂತಾದ ಕೀಟಗಳು ಬೇಕೆ ಬೇಕು. ಸೂಕ್ಷ್ಮವಾದ ಅವುಗಳು ರೆಕ್ಕೆಗಳು ಪ್ರಕೃತಿಯ ಅದ್ಭುತ ಮಾತ್ರವಲ್ಲ, ಪರಾಗಸ್ಪರ್ಶದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಇದು ಪರಿಸರ ವ್ಯವಸ್ಥೆಗೆ ಪ್ರಮುಖ ಕೊಡುಗೆ ನೀಡುತ್ತದೆ. ಇದೇ ಕಾರಣಕ್ಕೆ ವರಕವಿ ಅವುಗಳ ಆಟೋಟೋಪವನ್ನು ಬಹಳ ಅದ್ಭುತವಾಗಿ ತಮ್ಮ ಕವನದಲ್ಲಿ ವರ್ಣಿಸಿದ್ದಾರೆ.
ಸಿಗಲಾರೆ ಸಿಗಲಾರೆ... ಚಿಟ್ಟೆಯ ಬೆನ್ನಟ್ಟುವ ಪೆಂಗ್ವಿನ್‌ಗಳು : ವಿಡಿಯೋ ನೋಡಿ
ಪಾತರಗಿತ್ತೀ ಪಕ್ಕಾ ನೋಡೀದೇನ ಅಕ್ಕಾ
ಹಸಿರು ಹಚ್ಚಿ ಚುಚ್ಚಿಮೇಲಕರಿಸಿಣ ಹಚ್ಚಿ
ಪಾತರಗಿತ್ತೀ ಪಕ್ಕಾ ನೋಡೀದೇನ ಅಕ್ಕಾ!
ಹೊನ್ನ ಚಿಕ್ಕಿ ಚಿಕ್ಕಿ ಇಟ್ಟು ಬೆಳ್ಳೀ ಅಕ್ಕಿ
ಸುತ್ತೂ ಕುಂಕುಮದೆಳಿ ಎಳೆದು ಕಾಡಿಗೆ ಸುಳಿ
ಗಾಳೀ ಕೆನೀಲೇನ ಮಾಡಿದ್ದಾರ ತಾನ
ನೂರು ಆರು ಪಾರು ಯಾರು ಮಾಡಿದ್ದಾರು
ಏನು ಬಣ್ಣ ಬಣ್ಣ ನಡುವೆ ನವಿಲಗಣ್ಣ
ರೇಶಿಮೆ ಪಕ್ಕ ನಯ ಮುಟ್ಟಲಾರೆ ಭಯ
ಹೂವಿನ ಪಕಳಿಗಿಂತ ತಿಳಿವು ತಿಳಿವು ಅಂತ
ಹೂವಿಗೆ ಹೋಗಿ ತಾವ ಗಲ್ಲಾ ತಿವಿತಾವ
ಬನ ಬನದಾಗ ಆಡಿ ಪಕ್ಕಾ ಹುಡಿ ಹುಡಿ
ಹುಲ್ಲುಗಾವುಲದಾಗ ಹಳ್ಳೀಹುಡುಗೀ ಹಾಂಗ
ಹುಡದೀ ಹುಡದೀ ಭಾಳ ಆಟಕ್ಕಿಲ್ಲ ತಾಳ
ಕಿರೇ ಸೂರೇ ಪಾನದಲ್ಲಿ ಧೂಳಿಸ್ನಾನ
ತುರುಬಿ ತುಂಬಿ ತೋಟದಲ್ಲಿ ದಿನದ ಊಟ
ಕಳ್ಳಿ ಹೂವ ಕಡಿದು ಹೂತುಟಿನೀರ ಕುಡಿದು
ಹೀಗೆ ಚಿಟ್ಟೆಗಳ ಒಂದೊಂದು ಗುಣ ವಿಶೇಷ ಚಟುವಟಿಕೆಯನ್ನು ವರ್ಣಿಸಿ ವರ್ಣಿಸಿ ಬರೆದಿದ್ದಾರೆ ಅಂಬಿಕಾತನಯದತ್ತರು.