ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಧರಿಸಿದ್ದ ಉದ್ಯಮಿಯೊಬ್ಬರು ತಮ್ಮನ್ನೂ ಭೇಟಿಯಾಗಿದ್ದರು ಎಂದು ಕೇರಳ ಸಿಎಂ ವಿ.ಡಿ. ಸತೀಶನ್ ಹೇಳಿದ್ದಾರೆ. ಈ ಭೇಟಿಯ ಫೋಟೋಗಳು ತಮ್ಮ ಬಳಿ ಇವೆ ಎಂದಿರುವ ಅವರು, ಬಿಜೆಪಿ ನಾಯಕರ ಭೇಟಿಯಲ್ಲಿ ಸ್ಮಾರ್ಟ್ ಗ್ಲಾಸ್ ಧರಿಸದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರು ನಡೆಸುತ್ತಿದ್ದಾರೆ.

ತಿರುವನಂತಪುರಂ: ‘ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿಯ ವೇಳೆ ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಧರಿಸಿದ್ದರು ಎಂದು ಹೇಳಲಾದ ಉದ್ಯಮಿಯೊಬ್ಬರು, ಅದೇ ಸಾಧನವನ್ನು ಧರಿಸಿ ನನ್ನನ್ನೂ ಭೇಟಿಯಾಗಿದ್ದರು. ಈ ಕುರಿತ ಫೋಟೋ ನನ್ನಲ್ಲಿವೆ’ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಿಗೆ, ‘ಕೇರಳ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಕಾರ್ಯಾಚರಣೆ ನಡೆಸಲು ಯತ್ನಿಸಲಾಗಿದೆ’ ಎಂದು ಕರ್ನಾಟಕ ಸಿಎಂ ನೀಡಿದ್ದ ಹೇಳಿಕೆ ಬಗ್ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಸತೀಶನ್, ‘ಹೌದು, ಅವರು ನನ್ನನ್ನು ಭೇಟಿಯಾಗಿದ್ದರು. ಸಭೆಯ ಛಾಯಾಚಿತ್ರಗಳನ್ನು ಸಹ ನನಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿರುವುದರಿಂದ, ನಾನು ವಿವರಗಳನ್ನು ಬಹಿರಂಗಪಡಿಸಲು ಆಗದು’ ಎಂದರು.

ಬಿಜೆಪಿಗರ ಸಭೆಯಲ್ಲಿ ಏಕೆ ಧರಿಸಿಲ್ಲ?

ಬರೀ ಇಬ್ಬರು ಕಾಂಗ್ರೆಸ್ನ ಸಿಎಂಗಳ ಸಭೆಗಳಲ್ಲಿ ಉದ್ಯಮಿಯು ಸ್ಮಾರ್ಟ್ ಗ್ಲಾಸ್ ಧರಿಸಿದ್ದರ ಬಗ್ಗೆ ಹಾಗೂ ಬಿಜೆಪಿ ಸಿಎಂಗಳನ್ನು ಭೇಟಿಯಾದಾಗ ಅದನ್ನು ಧರಿಸದೇ ಇದ್ದ ಬಗ್ಗೆ ಸತೀಶನ್ ಪ್ರಶ್ನೆ ಎತ್ತಿದರು.

‘ಮೊದಲಿಗೆ ಅವರು ಆ ಕನ್ನಡಕವನ್ನು ಏಕೆ ಧರಿಸುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಅವರು ಡಿ.ಕೆ. ಶಿವಕುಮಾರ್ ಮತ್ತು ನನ್ನನ್ನು ಭೇಟಿಯಾದಾಗ ಮಾತ್ರ ಅವರು ಆ ಕನ್ನಡಕವನ್ನು ಧರಿಸಿದ್ದರು. ಅವರು ಬಿಜೆಪಿ ನಾಯಕರು ಮತ್ತು ಇತರ ಸಚಿವರನ್ನು ಭೇಟಿಯಾದಾಗ, ಅವುಗಳನ್ನು ಧರಿಸಿರಲಿಲ್ಲ. ಈ ವ್ಯತ್ಯಾಸವನ್ನು ತೋರಿಸುವ 2 ವಿಭಿನ್ನ ಛಾಯಾಚಿತ್ರಗಳು ನನ್ನಲ್ಲಿವೆ’ ಎಂದು ಅವರು ಹೇಳಿದರು.

ಶಿವಕುಮಾರ್ ಇತ್ತೀಚೆಗೆ ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಧರಿಸಿದ ಉದ್ಯಮಿಯೊಬ್ಬರು ಸಭೆಯ ಸಮಯದಲ್ಲಿ ತಮ್ಮ ಮೇಲೆ ರೆಕಾರ್ಡ್ ಮಾಡಲು ಅಥವಾ ಕಣ್ಣಿಡಲು ಪ್ರಯತ್ನಿಸಿದ್ದರು. ಸತೀಶನ್‌ ಮೇಲೂ ಇದೇ ಪ್ರಯೋಗ ನಡೆಸಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದರು. ತಮ್ಮ ಕೆಲವು ಸಂಪುಟ ಸಹೋದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಕುಟುಕು ಕಾರ್ಯಾಚರಣೆ ನಡೆಸಲು ಪ್ರಯತ್ನಗಳು ನಡೆದಿವೆ ಎಂದೂ ಶಿವಕುಮಾರ್ ಆರೋಪಿಸಿದ್ದರು.

ಕೇರಳ ಸರ್ಕಾರದ ತನಿಖೆ ಇಲ್ಲ:

ಈ ವಿಷಯವನ್ನು ಈಗಾಗಲೇ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇರಳ ಸರ್ಕಾರದಿಂದ ಪ್ರತ್ಯೇಕ ತನಿಖೆ ನಡೆಯಲ್ಲ. ಹೇಗಾದರೂ ಕರ್ನಾಟಕ ತನಿಖೆ ನಡೆಸುತ್ತಿದೆಯಲ್ಲ’ ಎಂದರು ಸತೀಶನ್‌ ಸ್ಪಷ್ಟಪಡಿಸಿದರು.

ಶಿವಕುಮಾರ್ ಇತ್ತೀಚೆಗೆ ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಧರಿಸಿದ ಉದ್ಯಮಿಯೊಬ್ಬರು ಸಭೆಯ ಸಮಯದಲ್ಲಿ ತಮ್ಮ ಮೇಲೆ ರೆಕಾರ್ಡ್ ಮಾಡಲು ಅಥವಾ ಕಣ್ಣಿಡಲು ಪ್ರಯತ್ನಿಸಿದ್ದರು. ಸತೀಶನ್‌ ಮೇಲೂ ಇದೇ ಪ್ರಯೋಗ ನಡೆಸಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ತಮ್ಮ ಕೆಲವು ಸಂಪುಟ ಸಹೋದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಕುಟುಕು ಕಾರ್ಯಾಚರಣೆ ನಡೆಸಲು ಪ್ರಯತ್ನಗಳು ನಡೆದಿವೆ ಎಂದೂ ಶಿವಕುಮಾರ್ ಆರೋಪಿಸಿದ್ದರು.