ತಿರುವನಂತಪುರದಲ್ಲಿ ಕಳ್ಳತನವಾದ 70 ವರ್ಷ ಹಳೆಯ ಸೈಕಲ್‌ಗೆ ಉದ್ಯಮಿ ಬಾಬಿ ಚೆಮ್ಮಣ್ಣೂರ್ 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ತಂದೆಯ ನೆನಪಿನ ಈ ಸೈಕಲ್ ಹಿಂದಿರುಗಿಸುವ ಕಳ್ಳನಿಗೆ ಗೌಪ್ಯತೆ ಹಾಗೂ ಉದ್ಯೋಗದ ಭರವಸೆಯನ್ನೂ ನೀಡಿದ್ದಾರೆ.
ತಿರುವನಂತಪುರ: ಎಡಪ್ಪಳ್ಳಿ ಟೋಲ್ ಬಳಿ ಕಳ್ಳತನವಾದ 70 ವರ್ಷ ಹಳೆಯ ಸೈಕಲ್ ವಾಪಸ್ ತಂದುಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಖ್ಯಾತ ಉದ್ಯಮಿ ಬಾಬಿ ಚೆಮ್ಮಣ್ಣೂರ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಒಂದು ವೇಳೆ ಕಳ್ಳನಿಗೆ ಮನಪರಿವರ್ತನೆಯಾಗಿ ಸೈಕಲ್ ಹಿಂದಿರುಗಿಸಿದರೆ, ಮುಂದಿನ ಜೀವನದಲ್ಲಿ ಕಳ್ಳತನ ಬಿಟ್ಟು ಗೌರವವಾಗಿ ಬದುಕಲು ಒಂದು ಒಳ್ಳೆಯ ಕೆಲಸವನ್ನೂ ಕೊಡಿಸುವುದಾಗಿ ಬಾಬಿ ಚೆಮ್ಮಣ್ಣೂರ್ ಭರವಸೆ ನೀಡಿದ್ದಾರೆ.
ಯಾಕೆ ಈ ಸೈಕಲ್‌ಗೆ ಇಷ್ಟು ಹಣ ಕೊಡ್ತಿರೋದು?
ಕಳ್ಳ ನೇರವಾಗಿ ತನ್ನ ಫೋನ್ ನಂಬರ್ 7994811116ಗೆ ಕರೆ ಮಾಡಿ ಸೈಕಲ್ ಹಿಂದಿರುಗಿಸಿದರೆ ಹಣ ನೀಡುವುದಾಗಿಯೂ, ಈ ವಿಚಾರವನ್ನು ಗೌಪ್ಯವಾಗಿ ಇಡುವುದಾಗಿಯೂ ಬಾಬಿ ಚೆಮ್ಮಣ್ಣೂರ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. "ಈ ಕಳ್ಳತನದ ಸುದ್ದಿ ಓದಿ ನನಗಾದ ಬೇಜಾರಿಗಿಂತ, ತಲೆಮಾರುಗಳಿಂದ ಬಂದ ಅಮೂಲ್ಯ ಸೈಕಲ್ ಕಳೆದುಕೊಂಡ ಮಾಲೀಕನ ನೋವು ಎಷ್ಟಿರಬೇಡ" ಎಂದು ಬಾಬಿ ಚೆಮ್ಮಣ್ಣೂರ್ ಅವರು ಬರೆದುಕೊಂಡಿದ್ದಾರೆ.
ಬಾಬಿ ಚೆಮ್ಮಣ್ಣೂರ್ ಅವರ ಈ ಘೋಷಣೆ ಬಗ್ಗೆ ಸೈಕಲ್ ಮಾಲೀಕ ಎಂ.ಬಿ. ಪ್ರಕಾಶ್ ಸಂತಸ ವ್ಯಕ್ತಪಡಿಸಿದ್ದಾರೆ. ಬುಧವಾರ ಸಂಜೆ ಎಡಪ್ಪಳ್ಳಿ ಟೋಲ್ ಬಳಿಯ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದಾಗ ಈ ಸೈಕಲ್ ಕಳ್ಳತನವಾಗಿತ್ತು. ಇದು ಪ್ರಕಾಶ್ ಅವರು 10 ವರ್ಷವಿದ್ದಾಗ ಅವರ ತಂದೆ ಎಂ.ಆರ್. ಬಾಲಕೃಷ್ಣನ್ ಅವರು ಉಡುಗೊರೆಯಾಗಿ ಕೊಟ್ಟ 70 ವರ್ಷಗಳಷ್ಟು ಹಳೆಯ ಸೈಕಲ್.
ತಂದೆ ಮಾತು ಪಾಲನೆ ಮಾಡುತ್ತಿದ್ರು!
ಪ್ರೀಮಿಯರ್ ಟಯರ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಬಾಲಕೃಷ್ಣನ್ ಅವರು ಬಳಸುತ್ತಿದ್ದ ಸೈಕಲ್ ಅನ್ನು ನಂತರ ಮಗ ಪ್ರಕಾಶ್‌ಗೆ ಕೊಟ್ಟಿದ್ದರು. ಸಾಯುವ ಮುನ್ನ ಬಾಲಕೃಷ್ಣನ್ ಮಗನ ಬಳಿ ಕೇಳಿಕೊಂಡಿದ್ದು ಒಂದೇ ಮಾತು: "ಈ ಸೈಕಲ್ ಹಾಳು ಮಾಡಬೇಡ, ಯಾರಿಗೂ ಮಾರಬೇಡ." ತಂದೆಯ ಮಾತನ್ನು ಪ್ರಕಾಶ್ ಚಾಚೂತಪ್ಪದೆ ಪಾಲಿಸಿದ್ದರು. ಅಂಗಡಿಗೆ ಹೋಗಲು, ದೇವಸ್ಥಾನಕ್ಕೆ ಹೋಗಲು ಹೀಗೆ ಎಲ್ಲ ಕಡೆಗೂ ತಮ್ಮ ದೇಹದ ಒಂದು ಭಾಗದಂತೆ ಈ ಸೈಕಲ್ ಅನ್ನು ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದರು.
70 ವರ್ಷಗಳಲ್ಲಿ ಒಮ್ಮೆ ಮಾತ್ರ ಈ ಸೈಕಲ್‌ನಿಂದ ಪ್ರಕಾಶ್ ಅಪಘಾತಕ್ಕೀಡಾಗಿದ್ದರು. ಈ ಸೈಕಲ್ ಜೊತೆಗೆ ಮೆಟ್ರೋದಲ್ಲಿಯೂ ಪ್ರಯಾಣಿಸಿದ್ದಾರೆ. ದುಃಖದ ಸಂಗತಿ ಎಂದರೆ, ಅವರ ತಂದೆಯ ಪುಣ್ಯತಿಥಿಯ ಹಿಂದಿನ ದಿನವೇ ಈ ಸೈಕಲ್ ಕಳ್ಳತನವಾಗಿದೆ. ಈ ಸೈಕಲ್ ಅನ್ನು ತನ್ನ ಮೊಮ್ಮಗನಿಗೆ ಕೊಡಬೇಕೆಂಬ ಅವರ ಆಸೆ ಸದ್ಯಕ್ಕೆ ಹಾಗೆಯೇ ಉಳಿದಿದೆ.
ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಕಳ್ಳ ಸೈಕಲ್ ಅನ್ನು ವಟ್ಟೇಕ್ಕುನ್ನಂ ಭಾಗದ ಕಡೆಗೆ ಕೊಂಡೊಯ್ದಿರುವ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.


