Buffalo Milk: ಎಮ್ಮೆಗೂ ಪೊಲೀಸರ ಭಯ, ಹಾಲು ಕೊಡುತ್ತಿಲ್ಲ ಎಂದು ರೈತನ ದೂರು, ಮರು ದಿನವೇ ಲೀಟರ್‌ಗಟ್ಟಲೆ ಹಾಲು!
- ವಿಶೇಷ ಪ್ರಕರಣ ದಾಖಲು, ಅಷ್ಟೇ ಕುತೂಹಲಕಾರಿ ಪರಿಹಾರ
- ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ದೂರು ದಾಖಲಿಸಿದ ರೈತ
- ಮರು ದಿನವೇ ಹಾಲು ಕೊಟ್ಟ ಎಮ್ಮೆ, ಪೊಲೀಸರಿಗೆ ರೈತನ ಧನ್ಯವಾದ
ಮಧ್ಯಪ್ರದೇಶ(ನ.14): ಅನ್ಯಾವಾಗಿದ್ದರೆ, ಸಮಸ್ಯೆಯಾದರೆ ತಕ್ಷಣ ನಾವು ಪೊಲೀಸ್ ಠಾಣೆ(Police station) ಮೆಟ್ಟೇಲೇರುತ್ತೇವೆ. ಹಲವು ಪ್ರಕರಣಗಳು ದೂರು ದಾಖಲಾಗುವ ಮುನ್ನವೇ ಪೊಲೀಸರ ಭಯದಿಂದ ಪ್ರಕರಣ ಇತ್ಯರ್ಥವಾಗುತ್ತದೆ. ಇದೀಗ ಇಲ್ಲೊಂದು ವಿಚಿತ್ರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ, ಅಷ್ಟೇ ಕುತೂಹಲಕಾರಿಯಾಗಿ ಬಗೆಹರಿದ ಘಟನೆ ನಡೆದಿದೆ. ರೈತನೊಬ್ಬ ತನ್ನ ಎಮ್ಮೆ(Buffalo) ಹಾಲು ಕೊಡುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ತೆರಳಿ ತನ್ನ ದೂರು ನೀಡಿದ್ದಾನೆ. ಪೊಲೀಸರ ಭಯ ಎಮ್ಮೆಗೂ ತಟ್ಟಿದೆಯೋ ಏನೋ, ಮರುದಿನವೇ ಎಮ್ಮೆ ಹಾಲು ಕೊಡಲು ಆರಂಭಿಸಿದೆ.
ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ(Madhya Pradesh) ಭಿಂಡ್ ಜಿಲ್ಲೆಯ ನಯಾಗಾಂವ್ ಹಳ್ಳಿಯಲ್ಲಿ ನಡೆದಿದೆ. 45 ವರ್ಷದ ರೈತ ಬಬೂಲ್ ಜತವ್ ಮನೆಯಲ್ಲಿ ಎಮ್ಮೆ ಕರು ಹಾಕಿ ಕೆಲ ದಿನ ಕಳೆದರೂ ಹಾಲು(Milk) ನೀಡುತ್ತಿರಲಿಲ್ಲ. ಕರುವಿಗೆ ಕೊಂಚ ಹಾಲು ನೀಡಿ ಎಮ್ಮೆ ಸುಮ್ಮನಾಗುತ್ತಿತ್ತು. ಅದೆಷ್ಟೇ ಪ್ರಯತ್ನ ಪಟ್ಟರೂ ರೈತನಿಗೆ ಎಮ್ಮೆ ಹಾಲು ಮಾತ್ರ ನೀಡಲೇ ಇಲ್ಲ. ರೈತ ತನ್ನ ಎಲ್ಲಾ ಅನುಭವ ಧಾರೆ ಎರೆದರೂ ಎಮ್ಮೆ ಹಾಲು ನೀಡಲಿಲ್ಲ.
ಇತ್ತ ಗ್ರಾಮಸ್ಥರು ಎಮ್ಮೆಗೆ ವಾಮಾಚಾರ ಮಾಡಿದ್ದಾರೆ. ಮಾಟ ಮಂತ್ರ ಮಾಡಿದ ಕಾರಣ ಎಮ್ಮೆ ಹಾಲು ನೀಡುತ್ತಿಲ್ಲ ಎಂದಿದ್ದಾರೆ. ಇದೇ ರೀತಿ ಪಕ್ಕದ ಹಳ್ಳಿಯಲ್ಲೂ ಆಗಿದೆ. ಇದು ವಾಮಾಚಾರದ ಪ್ರಭಾವ ಎಂದು ಸ್ಥಳೀಯರು ಹೇಳಿದ್ದಾರೆ. ಇದರಿಂದ ರೈತ ಬಬೂಲ್ ಜತವ್ ಚಿಂತೆ ಮತ್ತಷ್ಟು ಹೆಚ್ಚಾಗಿದೆ. ದಿಕ್ಕ ತೋಚದ ರೈತ ವಾಮಾಚಾರ ತೆಗೆಯಲು ಹಲವರನ್ನು ಸಂಪರ್ಕಿಸಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕೊನೆಯ ಆಯ್ಕೆ ಎಂದು ನೇರವಾಗಿ ನಯಾಂಗಾವ್ ಪೊಲೀಸ್ ಠಾಣೆಗೆ ತೆರಳಿದ್ದಾನೆ.
ಪ್ರಖ್ಯಾತ ಬನ್ನಿ ಎಮ್ಮೆ ತಳಿಯ ಮೊದಲ ಪ್ರನಾಳ ಕರು ಜನನ!
ಮೊದಲು ತಾನು ತೆರಳಿ ಪೊಲೀಸ್ ಠಾಣೆಯಲ್ಲಿ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ. ಯಾರೋ ವಾಮಾಚಾರ ಮಾಡಿದ್ದಾರೆ. ಎಮ್ಮೆ ಹಾಲು ಕೊಡುವಂತೆ ಮಾಡಿ ಎಂದು ದೂರು ದಾಖಲಿಸಿದ್ದಾನೆ. ಮನೆಗೆ ಹಿಂತುರುಗಿದ ರೈತನಿಗೆ ಪೊಲೀಸರಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮತ್ತೆ ಎಮ್ಮೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ತೆರಳಿದ ರೈತ, ತನಗೆ ನ್ಯಾಯಕೊಡಿಸುವಂತೆ ಕೇಳಿಕೊಂಡಿದ್ದಾನೆ. ಪೊಲೀಸರ ಮುಂದೆ ಹಾಲು ಕರೆದು ತನ್ನ ಸಮಸ್ಯೆ ತೋರಿಸಿದ್ದಾನೆ.
ಪೊಲೀಸರು ಪಶು ವೈದ್ಯರಿಗೆ ಮಾಹಿತಿ ನೀಡಿ ಎಮ್ಮೆಯ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ. ತಕ್ಷಣವೇ ಪಶು ವೈದ್ಯರು ಬಬೂಲ್ ರೈತನ ಮನಗೆ ದೌಡಾಯಿಸಿದ್ದಾರೆ. ಪರೀಕ್ಷೆ ನಡೆಸಿ ಕೆಲ ಸೂಚನೆ ಜೊತೆಗೆ ಔಷಧಿಗಳನ್ನು ನೀಡಿದ್ದಾರೆ. ಶನಿವಾರ(ನ.13) ರೈತ ದೂರು ದಾಖಲಿಸಿದ್ದ. ಮರುದಿನ ಅಂದರೆ(ನ.14)ಕ್ಕೆ ಎಮ್ಮೆ ಹಾಲು ನೀಡಲು ಆರಂಭಿಸಿದೆ.
ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ..!
ಖುಷಿಯಿಂದ ಓಡೋಡಿ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಎಮ್ಮೆ ಹಾಲು ಕೊಡುತ್ತಿದೆ. ಸಹಕರಿಸಿದ ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ. ಇದೀಗ ಈ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಹಲವರು ಎಮ್ಮೆ ಹಾಲು ಕೊಡಲು ಪೊಲೀಸರ ಭಯ ಕಾರಣ. ಹಾಲು ಕೊಡದಿದ್ದರೆ ಲಾಠಿ ಚಾರ್ಜ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಎಮ್ಮೆ ಹಾಲು ನೀಡಿದೆ ಎಂದು ಹಲವರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಹಲವು ವಿಶೇಷ ಪ್ರಕರಣಗಳನ್ನು ನೋಡಿದ್ದೇವೆ. ಕೆಲ ಪ್ರಕರಣಗಳಲ್ಲಿ ಪೊಲೀಸರ ಪಾತ್ರವೇ ಇರುವುದಿಲ್ಲ. ಆದರೂ ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ಇದು ಕೂಡ ಅದೇ ರೀತಿ. ನನ್ನ ವೃತ್ತಿ ಜೀವನದಲ್ಲಿ ದಾಖಲಾದ ವಿಶೇಷ ಪ್ರಕರಣ. ಇಲ್ಲಿ ವೈದ್ಯರ ಸಲಹೆ ಮುಖ್ಯವಾಗಿತ್ತು. ಆದರೆ ಜನರು ಪೊಲೀಸ್ ಠಾಣೆ ಮೇಲಿಟ್ಟಿರುವ ನಂಬಿಕೆ ನಮಗೆ ಕೆಲಸ ಮಾಡಲು ಮತ್ತಷ್ಟು ಪ್ರೇರಣೆ ನೀಡಿದೆ ಎಂದು ನಯಾಗಾಂವ್ ಪೊಲೀಸ್ ಠಾಣೆ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಅರವಿಂದ್ ಶಾ ಹೇಳಿದ್ದಾರೆ.