Asianet Suvarna News Asianet Suvarna News

ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ..!

*  ಧಾರವಾಡ ಎಮ್ಮೆ ತಳಿಗೆ ಇಂಡಿಯಾ ಬಫೆಲೊ 0800 ಧಾರವಾಡಿ 01018 ನೋಂದಣಿ
*  ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಎಮ್ಮೆ ತಳಿ
*  ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ ಸಿಕ್ಕಿದ್ದು ಸ್ಥಳೀಯರಲ್ಲಿ ಸಂತಸ 

Dharwad Buffalo Got Desi Breed Exposure in India grg
Author
Bengaluru, First Published Sep 10, 2021, 12:20 PM IST

ಧಾರವಾಡ(ಸೆ.10): ಧಾರವಾಡ ಎಮ್ಮಿ ಎಂಬ ಶಬ್ದವನ್ನು ಬೈಗುಳಕ್ಕೆ ಅಂಟಿಸಿಕೊಂಡಿದ್ದು ಜಾಸ್ತಿ. ಆದರೆ, ಇದೀಗ ಆ ಧಾರವಾಡದ ಎಮ್ಮೆಗೆ ರಾಷ್ಟ್ರಮಟ್ಟದಲ್ಲಿ ದೇಸಿ ತಳಿಯ ಸ್ಥಾನಮಾನ ದೊರೆತಿದ್ದು ಧಾರವಾಡಿ ಎಮ್ಮೆ ದೇಶದ 18ನೇ ತಳಿಯಾಗಿ ಘೋಷಣೆಯಾಗಿದೆ.

"

ಸಾಮಾನ್ಯವಾಗಿ ಧಾರವಾಡ ಎಂದಾಗ ಒಮ್ಮೆಲೇ ಪೇಢಾ ನೆನಪಿಗೆ ಬರುತ್ತದೆ. ಧಾರವಾಡದ ಪೇಢಾ ತಿಂದು ಅದರ ಸ್ವಾದಿಷ್ಟ ಇಷ್ಟಪಟ್ಟವರೇ ಜಾಸ್ತಿ. ಧಾರವಾಡ ಪೇಢೆಗೆ ಅಷ್ಟೊಂದು ರುಚಿ ಬರಲು ಇದೇ ಎಮ್ಮೆಯ ಹಾಲು ಕಾರಣ. ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ರಾಷ್ಟ್ರಮಟ್ಟದಲ್ಲಿ ದೇಸೀ ತಳಿಯ ಸ್ಥಾನಮಾನ ನೀಡಲಾಗಿದೆ.

ದೇಶದಲ್ಲಿ ಈವರೆಗೆ 17 ದೇಸಿ ಎಮ್ಮೆ ತಳಿಗಳನ್ನು ಗುರುತಿಸಲಾಗಿತ್ತು. ಇವೆಲ್ಲವೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ, ವಿಶ್ವ ಮಟ್ಟದಲ್ಲಿಯೂ ಹೆಸರು ಮಾಡಿದ್ದವು. ಇವುಗಳ ಪೈಕಿ ಕರ್ನಾಟಕದ ಒಂದೂ ತಳಿ ಇರಲಿಲ್ಲ. ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಸೂಚನೆ ಮೇರೆಗೆ ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಸಾಧನ ಬ್ಯೂರೋ ಕಳೆದ ಸೆ. 3ರಂದು ಧಾರವಾಡ ಎಮ್ಮೆ ತಳಿಗೆ ಇಂಡಿಯಾ ಬಫೆಲೊ 0800 ಧಾರವಾಡಿ 01018 (INDIA BUFFALO-0800DHARWADI-01018) ಎಂಬ ನೋಂದಣಿ ಸಂಖ್ಯೆ ನೀಡಿದೆ. ಈ ನೋಂದಣಿ ಸಂಖ್ಯೆಯ ಮೂಲಕ ಇನ್ನು ಮುಂದೆ ಧಾರವಾಡದ ಎಮ್ಮೆ ರಾಷ್ಟ್ರಮಟ್ಟದಲ್ಲಷ್ಟೇ ಅಲ್ಲ ವಿಶ್ವಮಟ್ಟದಲ್ಲಿಯೂ ಗುರುತಿಸಿಕೊಳ್ಳುವಂತಾಗಿದೆ. ಇದು ಧಾರವಾಡ ಎಮ್ಮೆ ತಳಿಯ ಅಭಿವೃದ್ಧಿ ಹಾಗೂ ಗುಣಮಟ್ಟಹೆಚ್ಚಳಕ್ಕೆ ನಾಂದಿ ಆಗಲಿದೆ ಎಂದು ಪಶುವೈದ್ಯ ತಜ್ಞರು ಅಭಿಪ್ರಾಯಿಸುತ್ತಾರೆ.

ಎಮ್ಮೆ ಹಾಲು ಕುಡಿದರೆ ಬುದ್ಧಿ ಮಂದ ಆಗೋಲ್ಲ, ರೋಗಗಳೆಲ್ಲ ಹುಷಾರಾಗುತ್ತೆ!

ಧಾರವಾಡ ಎಮ್ಮೆ ವಿಶೇಷವೇನು?

ಧಾರವಾಡದ ಎಮ್ಮೆಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ. ಅವು ನೀಡುವ ಹಾಲಿನ ಪ್ರಮಾಣ ಮತ್ತು ಗುಣಮಟ್ಟಸಾಕಷ್ಟುಹೆಸರುವಾಸಿ. ಇದೇ ಕಾರಣಕ್ಕೆ ಧಾರವಾಡ ವಿಶ್ವವಿದ್ಯಾಲಯ 2014ರಿಂದ ಧಾರವಾಡ ಎಮ್ಮೆ ಬಗ್ಗೆ ಅಧ್ಯಯನ ಆರಂಭಿಸಿತು. ಕೃಷಿ ವಿವಿಯ ಪಶು ವಿಜ್ಞಾನ ವಿಭಾಗವು 2017ರ ಡಿಸೆಂಬರ್‌ ವರೆಗೆ ಅಧ್ಯಯನ ನಡೆಸಿತು. ‘ಧಾರವಾಡ ಎಮ್ಮೆ ತಳಿಯ ಗುಣಲಕ್ಷಣಗಳ ಸಂಶೋಧನಾ ಯೋಜನೆ’ ಅಡಿ ಸಂಶೋಧನೆ ಕೈಗೊಳ್ಳಲಾಯಿತು. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಈ ಎಮ್ಮೆ ತಳಿಗಳಿದ್ದು, ಈ ಪೈಕಿ ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಆಯ್ದ ಒಟ್ಟು 64 ಹಳ್ಳಿಗಳಲ್ಲಿ ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ವಿ.ಎಸ್‌.ಕುಲಕರ್ಣಿ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿತ್ತು. ಒಟ್ಟು 3937 ಜನ ರೈತರಲ್ಲಿನ 10,650 ಧಾರವಾಡ ಎಮ್ಮೆಗಳ ಬಗ್ಗೆ ಸತತ ಮೂರು ವರ್ಷಗಳ ಕಾಲ ಅಧ್ಯಯನ ಕೈಗೊಂಡು, ಅಂತಿಮ ವರದಿ ಸಿದ್ಧಪಡಿಸಲಾಗಿತ್ತು. ಬಳಿಕ 2020ರಲ್ಲಿ ತಳಿಯ ನೋಂದಣಿಯಾಗಿ ಕೃಷಿ ವಿವಿಯಿಂದ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಅಧ್ಯಯನದ ವರದಿ ಆಧರಿಸಿ ಧಾರವಾಡ ಎಮ್ಮೆಯ ತಳಿ ನೋಂದಣಿ ಆಗಿರುವ ಬಗ್ಗೆ ಅ​ಧಿಕೃತವಾಗಿ ಘೋಷಿಸಲಾಗಿದೆ.

ಧಾರವಾಡ ಎಮ್ಮೆಗಳನ್ನು ಜವಾರಿ ಎಮ್ಮೆ ಅಂತಲೂ ಕರೆಯುತ್ತಾರೆ. ಇವುಗಳಿಗೆ ವಿವಿಧ ಕಡೆಗಳಲ್ಲಿ ಮುಂಡರಗಿ ಎಮ್ಮೆ, ಹೊಯ್ಸಳ ಎಮ್ಮೆ, ಬಾದಾಮಿ ಎಮ್ಮೆ ಎನ್ನುತ್ತಾರೆ. ಧಾರವಾಡ ಪೇಢಾ, ಬೆಳಗಾವಿಯ ಕುಂದಾ ಪ್ರಸಿದ್ಧಿಯಾಗಲು ಮೂಲ ಕಾರಣ ಈ ಎಮ್ಮೆಗಳ ಹಾಲು. ಸುಮಾರು 150 ವರ್ಷಗಳಿಂದಲೂ ಈ ಎಮ್ಮೆಗಳ ಹಾಲನ್ನೇ ಬಳಸಿಕೊಂಡು ಧಾರವಾಡ ಪೇಢಾ, ಬೆಳಗಾವಿ ಕುಂದಾ ಸೇರಿದಂತೆ ಅನೇಕ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇತ್ತೀಚಿಗಷ್ಟೇ ಧಾರವಾಡದ ಪೇಢಾಕ್ಕೆ ಜಿಯೋಗ್ರಾಫಿಕಲ್‌ ಇಂಡಿಕೇಶನ್‌ ಸಹ ಸಿಕ್ಕಿತ್ತು. ಅದರ ಬೆನ್ನಲ್ಲೇ ಇದೀಗ ರಾಷ್ಟ್ರಮಟ್ಟದಲ್ಲಿ ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ ಸಿಕ್ಕಿದ್ದು ಸ್ಥಳೀಯರಿಗೆ ಅದರಲ್ಲೂ ಗೌಳಿ ಮಂದಿಗೆ ಅತೀವ ಸಂತಸ ತಂದಿದೆ.

ಅಂತಿಂಥವನಲ್ಲ ಈ ಗಜೇಂದ್ರ: ಈತನ ಮೈಮಾಟಕ್ಕೆ ಫಿದಾ ಆಗದವರೇ ಇಲ್ಲ..!

ನಮ್ಮ ಗೌಳಿ ಸಮುದಾಯದವರು ಅನೇಕ ವರ್ಷಗಳಿಂದ ಈ ತಳಿಯ ಎಮ್ಮೆಯನ್ನು ಸಾಕಿಕೊಂಡು ಬಂದಿದ್ದಾರೆ. ಈಗಲೂ ಅನೇಕರು ಇದೇ ಎಮ್ಮೆಗಳ ಮೇಲೆ ಅವಲಂಬಿತರಾಗಿದ್ದಾರೆ. ಧಾರವಾಡದಲ್ಲಿ ಗೌಳಿ ಗಲ್ಲಿಯೂ ಇದೆ. ದಡ್ಡಿ ಕಮಲಾಪುರ, ಹುಣಸೀಕುಮರಿ ಇಡೀ ಊರೇ ಗೌಳಿಗರು. ಈ ತಳಿಯ ಎಮ್ಮೆಗಳನ್ನು ಸಾಕಲು ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇಲ್ಲ. ಆದರೆ ಅವುಗಳು ನಮಗೆ ಮಾಡುವ ಉಪಕಾರ ಮಾತ್ರ ದೊಡ್ಡದು. ಇಂಥ ನಮ್ಮೂರಿನ ಎಮ್ಮೆಗಳಿಗೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದ್ದು ಸಂತಸದ ಸಂಗತಿ ಎನ್ನುತ್ತಾರೆ ಗೌಳಿ ಗಲ್ಲಿಯ ವಿಶಾಲ ಗೌಳಿ.

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಎಮ್ಮೆಗಳಿವೆ. ಆದರೆ, ಇದುವರೆಗೂ ಯಾವುದೇ ತಳಿಗೆ ಈ ಸ್ಥಾನಮಾನ ಸಿಕ್ಕಿರಲಿಲ್ಲ. ಇದೀಗ ದೇಶದ 18ನೇ ಎಮ್ಮೆ ತಳಿಯಾಗಿ ಧಾರವಾಡ ಎಮ್ಮೆ ಘೋಷಣೆಯಾಗಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಎಮ್ಮೆ ತಳಿಯಾಗಿದೆ. ಇದೊಂದು ಐತಿಹಾಸಿಕ ಸಾಧನೆ ಆಗಿದ್ದು, ಈ ತಳಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ ಎಂದು ಕೃಷಿ ವಿವಿ ಪಶು ವಿಜ್ಞಾನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ವಿಶ್ವನಾಥ ಕುಲಕರ್ಣಿ ತಿಳಿಸಿದ್ದಾರೆ. 
 

Follow Us:
Download App:
  • android
  • ios