ಪಾಕ್‌ನಲ್ಲಿ ಬಂಧಿತರಾಗಿದ್ದ ಬಿಎಸ್‌ಎಫ್‌ ಯೋಧ ಪೂರ್ಣಂ ಕುಮಾರ್‌ ಶಾರಿಗೆ ಮೂರು ವಾರಗಳ ಕಾಲ ನಿದ್ದೆ, ಶೌಚಕ್ಕೂ ಅವಕಾಶ ನೀಡದೆ ಮಾನಸಿಕ ಹಿಂಸೆ ನೀಡಲಾಗಿದೆ. ಗಡಿ ಭದ್ರತೆ ಸೇರಿದಂತೆ ರಾಷ್ಟ್ರೀಯ ಭದ್ರತಾ ವಿಚಾರಗಳ ಬಗ್ಗೆ ವಿಚಾರಣೆ ನಡೆಸಲಾಗಿದೆ. ಏಪ್ರಿಲ್ ೨೨ರಂದು ಆಕಸ್ಮಿಕವಾಗಿ ಗಡಿ ದಾಟಿದ್ದ ಶಾ, ಮೇ ೧೪ರಂದು ಬಿಡುಗಡೆಯಾಗಿ ಭಾರತೀಯ ಅಧಿಕಾರಿಗಳ ತನಿಖೆ ಎದುರಿಸುತ್ತಿದ್ದಾರೆ.

ನವದೆಹಲಿ (ಮೇ.17): ಆಕಸ್ಮಿಕವಾಗಿ ಭಾರತ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ ಬಂಧಿಸಲ್ಪಟ್ಟಿದ್ದ ಬಿಎಸ್‌ಎಫ್‌ ಸಿಬ್ಬಂದಿ ಪೂರ್ಣಂ ಕುಮಾರ್‌ ಶಾ ಅವರಿಗೆ 3 ವಾರ ನಿದ್ದೆ ಮಾಡಗೊಡದೆ, ಶೌಚಕ್ಕೂ ಬಿಡದೆ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಶಾ ಅವರಿಗೆ ದೈಹಿಕ ಹಿಂಸೆ ನೀಡಿಲ್ಲವಾದರೂ, ಶೌಚ, ನಿದ್ದೆ ಮಾಡಲು ಬಿಡದೆ, ಹಲವು ಬಾರಿ ಕಣ್ಣಿಗೆ ಪಟ್ಟಿ ಕಟ್ಟಿ ಮಾನಸಿಕವಾಗಿ ಹಿಂಸಿಸಲಾಗಿದೆ. ಜತೆಗೆ, ಗಡಿ ಭದ್ರತಾ ಪಡೆ ಯೋಧರ ನಿಯೋಜನೆ ಸೇರಿದಂತೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು ಎನ್ನಲಾಗಿದೆ. ಕಾಶ್ಮೀರದಲ್ಲಿ ಪಹಲ್ಗಾಂ ದಾಳಿ ನಡೆದ ಮರುದಿನ(ಏ.22ರಂದು) ಶಾ, ನೆರಳನ್ನರಸುತ್ತ ಅಕಸ್ಮಾತಾಗಿ ಪಾಕ್‌ ಗಡಿಯೊಳಗೆ ಹೋಗಿ ಬಂಧಿತರಾಗಿದ್ದರು. ಅದಾದ 3 ವಾರಗಳ ಬಳಿಕ(ಮೇ 14)ರಂದು ಅವರ ಬಿಡುಗಡೆಯಾಗಿದ್ದು, ಸದ್ಯ ಭಾರತೀಯ ಅಧಿಕಾರಿಗಳು ಅವರ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸೈನ್ಯವನ್ನೂ ನಂಬುತ್ತಿಲ್ಲ, ಪಾಕಿಸ್ತಾನ ಧ್ವನಿಯಾಗಿ ಮಾತನಾಡುತ್ತಿದೆ: ಕೇಂದ್ರ ಸಚಿವ ಜೋಶಿ ಗರಂ

ಹೇಳಿದ್ದೇನು?

 ಬಿಎಸ್ಎಫ್ ಜವಾನ್ ಈಗ ಪಾಕಿಸ್ತಾನದಲ್ಲಿ ಕಳೆದ ಆ ಭಯಾನಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟಾಗ, ತನಗೆ ಮಲಗಲು ಸಹ ಅವಕಾಶ ನೀಡಲಿಲ್ಲ ಎಂದು ಪೂರ್ಣಂ ಕುಮಾರ್ ಶಾ ಹೇಳಿದ್ದಾರೆ. ಪಾಕಿಸ್ತಾನಿಗಳು ತಾನು ಗೂಢಚಾರನಂತೆ ನಿರಂತರವಾಗಿ ವಿಚಾರಣೆ ನಡೆಸಿದರು. ರಾತ್ರಿಯಿಡೀ ವಿಚಾರಣೆಯಿಂದಾಗಿ ತಾನು ಮಾನಸಿಕವಾಗಿ ದಣಿದಿದ್ದೆ ಪ್ರತಿ ರಾತ್ರಿಯ ವಿಚಾರಣೆಯ ನಂತರ ತನಗೆ ನಿದ್ರೆ ಬರಲಿಲ್ಲ ಮತ್ತು ತುಂಬಾ ದಣಿದಿದ್ದೆ ಎಂದಿದ್ದಾರೆ.