Asianet Suvarna News Asianet Suvarna News

Bihar: ಉದ್ಘಾಟನೆಗೂ ಮುನ್ನವೇ ಎರಡು ತುಂಡಾದ 13 ಕೋಟಿ ರೂ. ವೆಚ್ಚದ ಸೇತುವೆ

ಸೇತುವೆಯ ಮೇಲೆ ವಾಹನಗಳನ್ನು ಅನುಮತಿಸದ ಕಾರಣ ಈ ಸೇತುವೆಯನ್ನು ಸಾಮಾನ್ಯವಾಗಿ ಯಾರೂ ಬಳಸುತ್ತಿರಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ.

bridge in bihar built at 13 crore rs snaps into two before inauguration ash
Author
First Published Dec 19, 2022, 7:53 PM IST

ಗುಜರಾತ್‌ನ (Gujarat) ಮೋರ್ಬಿ ಸೇತುವೆ ದುರಂತ (Morbi Bridge Collapse) ಸಂಭವಿಸಿದ 2 ತಿಂಗಳಲ್ಲಿ ಮತ್ತೊಂದು ಸೇತುವೆ (Bridge) ತುಂಡಾಗಿ ನದಿಗೆ ಬಿದ್ದಿದೆ. ಈ ಘಟನೆ ನಡೆದಿರೋದು ಬಿಹಾರದಲ್ಲಿ (Bihar). ಹೌದು, ಬಿಹಾರದ ಬೇಗುಸರಾಯ್ (Begusarai) ಜಿಲ್ಲೆಯ 5 ವರ್ಷಗಳ ಹಳೆಯ ಸೇತುವೆಯು ಭಾನುವಾರದಂದು 2 ತುಂಡಾಗಿ ನದಿಗೆ (River) ಬಿದ್ದಿದೆ ಎಂದು ವರದಿಯಾಗಿದೆ. ಸಂಪರ್ಕ ರಸ್ತೆಯ ಕೊರತೆಯಿಂದಾಗಿ ಸೇತುವೆಯನ್ನು ಸಾರ್ವಜನಿಕರಿಗೆ ಇನ್ನೂ ಔಪಚಾರಿಕವಾಗಿ ಉದ್ಘಾಟನೆಯಾಗದ (Inauguration) ಕಾರಣ ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾವ ಸಾವು ನೋವು ಸಹ ಸಂಭವಿಸಲಿಲ್ಲ ಎಂದು ತಿಳಿದುಬಂದಿದೆ. ಬೇಗುಸರಾಯ್ ಜಿಲ್ಲೆಯ ಬುರ್ಹಿ ಗಂಡಕ್ ನದಿಗೆ ₹ 13 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಕುಸಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೇತುವೆಯ ಮೇಲೆ ವಾಹನಗಳನ್ನು ಅನುಮತಿಸದ ಕಾರಣ ಈ ಸೇತುವೆಯನ್ನು ಸಾಮಾನ್ಯವಾಗಿ ಯಾರೂ ಬಳಸುತ್ತಿರಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಇನ್ನು, ಬ್ರಿಡ್ಜ್‌ನ ಮುರಿದ ಭಾಗಗಳು ನದಿಯಲ್ಲಿ ಮುಳುಗಿರುವುದನ್ನು ಚಿತ್ರಗಳು ತೋರಿಸಿವೆ. ಹಾಗೂ, ಈ ಘಟನೆಯ ಸಮಯದಲ್ಲಿ ಸೇತುವೆಯ ಮೇಲೆ ಯಾರೂ ಇರಲಿಲ್ಲ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. ಈ ಸೇತುವೆಯನ್ನು ಮುಖ್ಯಮಂತ್ರಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಯೋಜನೆಯಡಿ ನಿರ್ಮಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದನ್ನು ಓದಿ: ತುಕ್ಕು ಹಿಡಿದ ಸೇತುವೆಗೆ ಬಣ್ಣ ಬಳಿದು ನಾಟಕ: Bridge Collapse ದೇವರಿಚ್ಛೆ ಎಂದ ಕಂಪನಿ ಮ್ಯಾನೇಜರ್

ಸೇತುವೆ ಕುಸಿತವು ಪ್ರಮುಖ ರಸ್ತೆಗಳು ಮತ್ತು ಪಟ್ಟಣಗಳಿಂದ ಸಂಪರ್ಕ ಕಡಿತಗೊಂಡ 20,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಇದು ವಿದ್ಯಾರ್ಥಿಗಳು, ರೈತರು, ವೈದ್ಯಕೀಯ ಆರೈಕೆಯ ಅಗತ್ಯವಿರುವವರ ಮೇಲೆ ಪರಿಣಾಮ ಬೀರುತ್ತದೆ ..." ಎಂದು ಅವರು ಹೇಳಿದರು.

ಇನ್ನು, ಈ ಘಟನೆ ಬಗ್ಗೆ ಮಾತನಾಡಿರುವ ಬಿಹಾರದ ಬೇಗುಸರಾಯ್‌ ಜಿಲ್ಲೆಯ ಹಿರಿಯ ಜಿಲ್ಲಾ ಅಧಿಕಾರಿ ರೋಶನ್ ಕುಶ್ವಾಹ, ಸೇತುವೆಯನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಿಲ್ಲ. ಆದರೆ ಅದು ಸಿದ್ಧವಾಗಿರುವುದರಿಂದ ಕೆಲವು ಜನರು ಅದನ್ನು ಬಳಸುತ್ತಿದ್ದರು. ಕಳೆದ 3 ದಿನಗಳಿಂದ 206 ಮೀಟರ್ ಉದ್ದದ ಸೇತುವೆ ಬಿರುಕು ಬಿಟ್ಟಿತ್ತು ಎಂದೂ ಹೇಳಿದ್ದಾರೆ. ಹಾಗೂ, ಸೇತುವೆಯನ್ನು ಬಳಕೆಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಸೇತುವೆ ಕುಸಿತದ ಹಿಂದಿನ ಕಾರಣವನ್ನು ನಾವು ತನಿಖೆ ಮಾಡುತ್ತಿದ್ದೇವೆ. ಇದು ತಾಂತ್ರಿಕ ದೋಷವೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ" ಎಂದೂ ಅವರು ಹೇಳಿದರು.

ಇದನ್ನೂ ಓದಿ: ಮೊರ್ಬಿ ತೂಗು ಸೇತುವೆ ದುರಂತ ಸ್ಥಳ ಪರಿಶೀಲಿಸಿದ ಮೋದಿ, ಅಧಿಕಾರಿಗಳ ವಿರುದ್ಧ ಗರಂ!

ಅಕ್ಟೋಬರ್‌ ತಿಂಗಳಲ್ಲಿ ಗುಜರಾತ್‌ನ ಮೊರ್ಬಿಯಲ್ಲಿ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 7 ತಿಂಗಳ ದುರಸ್ತಿ ಮತ್ತು ನವೀಕರಣದ ನಂತರ ಸಾರ್ವಜನಿಕರಿಗೆ ಪುನಃ ತೆರೆದ ಕೆಲವೇ ದಿನಗಳಲ್ಲಿ ಸೇತುವೆ ಕುಸಿದಿತ್ತು.

ಈ ಪ್ರಕರಣದ ಆರೋಪಿಗಳಲ್ಲಿ ಸೇತುವೆಯನ್ನು ದುರಸ್ತಿ ಮಾಡುವ ಗುಜರಾತ್ ನಾಗರಿಕ ಸಂಸ್ಥೆಯ ಗುತ್ತಿಗೆ ಪಡೆದ ವಾಚ್‌ಗಳನ್ನು ತಯಾರಿಸುವ ಓರೆವಾ ಮಾಲೀಕರು ಸೇರಿದ್ದಾರೆ. ಸುಮಾರು 500 ಜನರು ಒಟ್ಟಿಗೆ ಸೇತುವೆ ಮೇಲೆ ನಿಂತಿದ್ದ ಕಾರಣ ರಚನೆಯು ಮುರಿದುಹೋಗಿದೆ ಎಂದು ತನಿಖೆಗಳು ಬಹಿರಂಗಪಡಿಸಿದವು. ಹಳೆಯ ಕೇಬಲ್‌ಗಳನ್ನು ಬದಲಾಯಿಸಲಾಗಿಲ್ಲ ಮತ್ತು ಹೊಸ ಹಾಗೂ ಭಾರವಾದ ನೆಲಹಾಸನ್ನು ಅದು ಬೆಂಬಲಿಸಲು ಸಾಧ್ಯವಾಗಲಿಲ್ಲ ಎಂದೂ ಹೇಳಲಾಗಿತ್ತು. 

ಇದನ್ನೂ ಓದಿ: Gujarat Bridge Collapse: ಗೋಡೆ ಗಡಿಯಾರ ಕ್ರಾಂತಿ ಮಾಡಿದ ಅಜಂತಾ ಕಂಪನಿ ಎಡವಟ್ಟು

Follow Us:
Download App:
  • android
  • ios