ಬಸ್‌ನಲ್ಲಿ ಕಿರುಕುಳ ನೀಡಿದವನ ಕಾಲರ್ ಹಿಡಿದು ಜಗ್ಗಿ 26 ಬಾರಿ ಕಪಾಳಮೋಕ್ಷ ಮಾಡಿದ ಗಟ್ಟಿಗಿತ್ತಿ
ಪುಣೆಯ ಬಸ್ಸೊಂದರಲ್ಲಿ ಯುವತಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಯುವತಿಯೇ 26 ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಯುವತಿಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಬಸ್‌ನಲ್ಲಿ ಕಿರುಕುಳ ನೀಡಿದವನ ಕಾಲರ್ ಹಿಡಿದು ಜಗ್ಗಿ 26 ಬಾರಿ ಕಪಾಳಮೋಕ್ಷ ಮಾಡಿದ ಗಟ್ಟಿಗಿತ್ತಿ
ಜನರಿಂದ ತುಂಬಿ ತುಳುಕುವ ಚಲಿಸುವ ಬಸ್‌ನಲ್ಲಿ ಕೆಲವು ಕಾಮುಕರು ಮಹಿಳೆಯರಿಗೆ ಕಿರುಕುಳ ನೀಡುವುದು ಸಾಮಾನ್ಯವೆನಿಸಿದೆ. ಆದರೆ ಹೆಚ್ಚಿನ ಮಹಿಳೆಯರು ಅಸಹಾಯಕತೆಯಿಂದ ಸುಮ್ಮನಿದ್ದರೆ ಮತ್ತೆ ಕೆಲವರು ಧೈರ್ಯ ತೋರಿ ಕಿರುಚಾಡುತ್ತಾರೆ. ಅದೇ ರೀತಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಆತನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ. ಆತನ ಶರ್ಟ್ ಕಾಲರ್ ಹಿಡಿದು ಎಳೆದಾಡಿದ ಮಹಿಳೆ ಆತನ ಕೆನ್ನೆಗೆ 26 ಬಾರಿ ಬಾರಿಸಿದ್ದಾಳೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ಅನೇಕರು ಮೆಚ್ಚುಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಹಾಗೂ ಸಾಮಾಜಿಕ ಜವಾಬ್ದಾರಿಯ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಅಂದಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆಯ ಬಸ್ಸೊಂದರಲ್ಲಿ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಪಾನಮತ್ತನಾದ ವ್ಯಕ್ತಿಯೊಬ್ಬ ಅಸಹ್ಯವಾಗಿ ಆಕೆಯನ್ನು ಲೈಂಗಿಕ ಕಿರುಕುಳ ನೀಡಿದ್ದಾರೆ. ಕೂಡಲೇ ಸಿಟ್ಟಿಗೆದ್ದ ಆಕೆ ತೆಗೆದು ಬಾರಿಸಿದ್ದಾಳೆ. ಆತನ ಶರ್ಟ್ ಕಾಲರ್ ಹಿಡಿದು ಜಗ್ಗಿದ ಹಾಗೆ ಕೆನ್ನೆಗೆ ಒಂದೇ ಸಮನೆ 26 ಬಾರಿ ಹೊಡೆದಿದ್ದಾಳೆ. ಈ ವೇಳೆ ಆತ ಕೈ ಮುಗಿದು ಕ್ಷಮೆ ಕೇಳಿದ್ದು, ಆದರೆ ಬಸ್ ಕಂಡಕ್ಟರ್ ಮಧ್ಯ ಪ್ರವೇಶಿಸುವವರೆಗೆ ಆಕೆ ನಿರಂತರವಾಗಿ ಬಾರಿಸಿದ್ದಾಳೆ. ಅಲ್ಲದೇ ಬಸನ್ನು ಸಮೀಪದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸುವಂತೆ ಆಕೆ ಆಗ್ರಹಿಸಿದ್ದಾಳೆ.
ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಮಹಿಳೆಯ ಧೈರ್ಯಕ್ಕೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಿತಿಯನ್ನು ಎದುರಿಸುತ್ತಿರುವ ಅನೇಕ ಮಹಿಳೆಯರಿಗೆ ಈ ಮಹಿಳೆ ಸ್ಪೂರ್ತಿಯಾಗಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಮತ್ತೊಬ್ಬರು ಆತ ಕ್ಷಮೆ ಕೇಳಿದ್ದಾನೆ. ಆತ ಕ್ಷಮೆ ಕೇಳಿದ ಮೇಲೂ 26 ಬಾರಿ ಹೊಡೆದಿದ್ದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ಕೆಲವರು ಘಟನೆ ನಡೆಯುವ ವೇಳೆ ಸುಮ್ಮನೇ ನಿಂತ ಇತರ ಪ್ರಯಾಣಿಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.