ಧರ್ಮ, ಜಾತಿ ಇಲ್ಲದ ಪ್ರಮಾಣಪತ್ರ ನೀಡಿ: ಕೋರ್ಟ್‌ ಮೆಟ್ಟಿಲೇರಿದ ಬ್ರಾಹ್ಮಣ ಮಹಿಳೆ

  • ಧರ್ಮ ಹಾಗೂ ಧರ್ಮದ ಉಲ್ಲೇಖವಿರದ ಪ್ರಮಾಣಪತ್ರ ನೀಡಿ
  • ಗುಜರಾತ್‌ನ ಬ್ರಾಹ್ಮಣ ಮಹಿಳೆಯಿಂದ ಹೈಕೋರ್ಟ್‌ಗೆ ಮನವಿ
  • ಜಾತಿಯಿಂದಾಗಿ ಸಮಾಜದಲ್ಲಿ ತಾರತಮ್ಯವಾಗಿರುವ ಆರೋಪ
Brahmin woman moves Gujarat HC asked for no religion no caste certificate akb

ಅಹಮದಾಬಾದ್(ಏ.1): ಸೂರತ್ ನಗರದ ಬ್ರಾಹ್ಮಣ ಮಹಿಳೆಯೊಬ್ಬರು ತನಗೆ ಯಾವುದೇ ಧರ್ಮ ಹಾಗೂ ಜಾತಿಯ ಉಲ್ಲೇಖವಿಲ್ಲದ ಪ್ರಮಾಣಪತ್ರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸ್ನೇಹ ಪ್ರತಿಭಾರಾಜ್ (Sneha Prathiibaraja) ಎಂಬವರು ತನ್ನ ಧಾರ್ಮಿಕ ಗುರುತನ್ನು ತೆಗೆದು ಹಾಕುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ(Madras high court) ಸಲ್ಲಿಸಿದ  ಪ್ರಕರಣದಂತೆ ತನಗೂ ಜಾತಿ ಹಾಗೂ ಧರ್ಮದ ಉಲ್ಲೇಖವಿಲ್ಲದ ಪ್ರಮಾಣಪತ್ರವನ್ನು ನೀಡುವಂತೆ 36 ವರ್ಷದ ಕಾಜಲ್ ಗೋವಿಂದಭಾಯ್ ಮಂಜುಳಾ (Kajal Govindbhai Manjula) ಅವರು ವಕೀಲ ಧರ್ಮೇಶ್ ಗುರ್ಜರ್ (Dharmesh Gurjar)ಮೂಲಕ ಬುಧವಾರ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. 

ತಾರತಮ್ಯದ ಜಾತಿ ವ್ಯವಸ್ಥೆಯ ಸಮಾಜದಿಂದ ತಾನು ಹಾಗೂ ತನ್ನ ಕುಟುಂಬ ಸಾಕಷ್ಟು ನೋವನ್ನು ಅನುಭವಿಸಿದ್ದು ಅಂತಿಮವಾಗಿ ಆ ಗುರುತುಗಳನ್ನು ತೊಡೆದು ಹಾಕಲು ನಿರ್ಧರಿಸಿರುವುದಾಗಿ ಕಾಜಲ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ಭವಿಷ್ಯದಲ್ಲಿ ಎಲ್ಲಿಯೂ ತನ್ನ ಜಾತಿ ಮತ್ತು ಧರ್ಮದ ಪ್ರಸ್ತಾಪ ಆಗುವುದನ್ನು ಅವರು ಬಯಸುವುದಿಲ್ಲ. ನಮ್ಮ ದೇಶ ಮತ್ತು ಸಮಾಜದಲ್ಲಿನ ತಾರತಮ್ಯದ ಜಾತಿ ವ್ಯವಸ್ಥೆಯಿಂದಾಗಿ ಅರ್ಜಿದಾರರು ತಮ್ಮ ಜೀವನದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಿದ್ದಾರೆ. ಅಲ್ಲದೇ ಇಂತಹ ಜಾತಿ ವ್ಯವಸ್ಥೆಯ ಕಾರಣಕ್ಕೆ ದೇಶದಲ್ಲಿ ಅನೇಕ ಬಾರಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಅರ್ಜಿದಾರರು ಮೂಲತಃ ರಾಜ್‌ಗೋರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಇದರ ಹೊರತಾಗಿಯೂ ಅವರು ಸಮಾಜದಲ್ಲಿ ಇಂತಹ ವಿವೇಚನಾ ರಹಿತ ಜಾತಿ ವ್ಯವಸ್ಥೆಯಿಂದಾಗಿ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ ಎಂದು ಗಮನಿಸುವುದು ಸೂಕ್ತವಾಗಿದೆ ಎಂದು ಅವರ ಅರ್ಜಿಯಲ್ಲಿ ಹೇಳಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ

ಅಲ್ಲದೇ ತಮ್ಮ ಉಪನಾಮ ಶೀಲು ಅನ್ನು ತೆಗೆದು ಹಾಕಲು ತಾನು ಗುಜರಾತ್ ಸರ್ಕಾರದ ಗೆಜೆಟ್‌ಗೆ ಅರ್ಜಿ ಸಲ್ಲಿಸಿದ್ದೆ ಮತ್ತು ಆಗಸ್ಟ್ 2021 ರಲ್ಲಿ ಗೆಜೆಟ್ ಅನ್ನು ಪ್ರಕಟಿಸುವ ಮೂಲಕ ಈ ಕುರಿತು ಪ್ರಮಾಣಪತ್ರವನ್ನು ನೀಡಲಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ. ಗೆಜೆಟ್ ಆಧಾರದ ಮೇಲೆ ಗುರುತಿನ ದಾಖಲೆಗಳಲ್ಲಿ ಉಪನಾಮವನ್ನು ತೆಗೆದುಹಾಕುವ ಮೂಲಕ ಅವರು ತಮ್ಮ ಹೆಸರನ್ನು ಮಾರ್ಪಡಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿರುವ ಕಾಜಲ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಅಹಮದಾಬಾದ್‌ನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆದಾಗ್ಯೂ, ಜುನಾಗಢ್(Junagadh)  ಜಿಲ್ಲೆಯಲ್ಲಿ ನೆಲೆಸಿರುವ ಅವರ ಕುಟುಂಬದೊಂದಿಗಿನ ವಿವಾದಗಳ ನಂತರ, ಪ್ರತಿಭಟನೆಯ ಸಂಕೇತವಾಗಿ ಅವರು ಸೂರತ್‌ನಲ್ಲಿರುವ (Surat) ನಗರ ನಿರಾಶ್ರಿತರ ಆಶ್ರಯಧಾಮದಲ್ಲಿ ವಾಸಿಸುತ್ತಿದ್ದಾರೆ.

ನಕಲಿ ಜಾತಿ ಪ್ರಮಾಣ ಪತ್ರ ಕೊಟ್ಟು ಸಿಕ್ಕಿ ಬಿದ್ದ ಗ್ರಾಪಂ ಸದಸ್ಯೆ.! 

ಮುಂದಿನ ವಾರ ಆಕೆಯ ಪ್ರಕರಣವನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಜುಲೈ  2017ರಲ್ಲಿ ರಾಜ್‌ವೀರ್ ಉಪಾಧ್ಯಾಯ (Rajveer Upadhyay) ಎಂಬುವವರು ಧರ್ಮದ ಸ್ವಾತಂತ್ರ್ಯ ಕಾಯಿದೆಯಾದ ಮತಾಂತರ ವಿರೋಧಿ ಕಾನೂನುಗಳ ಅಡಿಯಲ್ಲಿ ಹಿಂದೂ ಧರ್ಮದಿಂದ ನಾಸ್ತಿಕತೆಗೆ ತನ್ನ ಧರ್ಮವನ್ನು ಬದಲಾಯಿಸಲು ಅಹಮದಾಬಾದ್ ಜಿಲ್ಲಾಧಿಕಾರಿಗೆ (Ahmedabad district collector) ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಈ ಕಾಯ್ದೆಯ ಅಡಿಯಲ್ಲಿ ನಾಗರಿಕನು ತನ್ನ ಧರ್ಮವನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಯಿಸಬಹುದು, ಆದರೆ ಧರ್ಮವನ್ನು ಜಾತ್ಯತೀತ ಅಥವಾ ನಾಸ್ತಿಕ ಎಂದು ಬದಲಾಯಿಸಲು ಅವಕಾಶವಿಲ್ಲ ಎಂಬ ಕಾರಣ ನೀಡಿ  ಅಂತಹ ಮತಾಂತರಕ್ಕೆ ಅನುಮತಿ ನಿರಾಕರಿಸಿದ್ದರು. ಇದಾದ ನಂತರ  ರಾಜ್‌ವೀರ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಉಪಾಧ್ಯಾಯ ಅವರು ಪರಿಶಿಷ್ಟ ಜಾತಿ ವರ್ಗದ ಅಡಿಯಲ್ಲಿ ಬರುವ ಗರೋಡಾ ಬ್ರಾಹ್ಮಣ ಕುಟುಂಬದಲ್ಲಿ ಹಿಂದೂ ಆಗಿ ಜನಿಸಿದ್ದರು ಮತ್ತು ಜಾತಿ ಆಧಾರಿತವಾಗಿ ತೊಂದರೆ ಎದುರಿಸುತ್ತಿರುವುದಾಗಿ ಹೇಳಿದ್ದರು. ಅವರು ತಮ್ಮ ಜೀವನದುದ್ದಕ್ಕೂ ತಾರತಮ್ಯಕ್ಕೆ ಒಳಗಾಗಿದ್ದರಿಂದ ತನ್ನ ಧರ್ಮವನ್ನು ತ್ಯಜಿಸಲು ಅವರು ನಿರ್ಧರಿಸಿದ್ದರು,  ಅವರ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

Latest Videos
Follow Us:
Download App:
  • android
  • ios