ನವದೆಹಲಿ(ನ.22): ಭಾರತದಲ್ಲಿ ಭಾನುವಾರದಂದು ಆನ್‌ಲೈನ್ ಸ್ಟ್ರೀಮಿಂಗ್ ವೆಬ್‌ಸೈಟ್ Netflix ವಿರುದ್ಧ ಬಹಿಷ್ಕಾರದ ಕೂಗು ಜೋರಾಗಿದ್ದು, ಟ್ವಿಟರ್‌ನಲ್ಲಿ ಅಇಯಾನವೇ ಆರಂಭವಾಗಿದೆ. ಟ್ವಿಟರ್‌ನಲ್ಲಿ ಸದ್ಯ #BoycottNetflix ಟಾಪ್ ಟ್ರೆಂಡ್ ಆಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಇದರಲ್ಲಿ ಪ್ರಸಾರವಾಗುವ ಸೀರೀಸ್‌ 'A Suitable Boy'ನಲ್ಲಿರುವ ಕೆಲ ದೃಶ್ಯಗಳು. ಇವುಗಳ ಬಗ್ಗೆ ಸದ್ಯ ಭಾರೀ ವಿರೋಧ ವ್ಯಕ್ತವಾಗಿದೆ.

#BoycottTanishq, ಟ್ರೋಲ್ ಆದ ಬೆನ್ನಲ್ಲೇ ತನಿಷ್ಕ್ ಜಾಹೀರಾತು ಮಾಯ!

ಈ ಸೀರೀಸ್‌ನ ಒಂದು ದೃಶ್ಯದಲ್ಲಿ ಓರ್ವ ಯುವಕ ಹಾಗೂ ಯುವತಿ ಮಂದಿರದ ಆವರಣದಲ್ಲಿ ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದ್ದು, ಹಿಂಬದಿಯಲ್ಲಿ ಭಜನ ನಡೆಯುತ್ತಿರುವ ಸೀನ್ ಇದೆ ಎನ್ನಲಾಗಿದೆ. ಅಲ್ಲದೇ ಈ ಸೀರೀಸ್‌ನಲ್ಲಿ ಹಿಂದೂ ಮುಸ್ಲಿಂ ಓರ್ವ ಮುಸ್ಲಿಂ ಯುವಕನ ಪ್ರೀತಿಯಲ್ಲಿ ಬೀಳುವ ಕತೆ ಇದೆ ಎನ್ನಲಾಗಿದ್ದು, ಈ ಬಗ್ಗೆಯೂ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ನಿಟ್ಟಿನಲ್ಲಿ ಇದು ಲವ್‌ ಜಿಹಾದ್ ಪ್ರೇರೇಪಿಸುತ್ತದೆ ಎಂದು ಹಲವರು ಆರೋಪಿಸಿದ್ದಾರೆ. ಇನ್ನು ಮಧ್ಯಪ್ರದೇಶದ ಬಿಜೆಪಿ ನಾಯಕ ಗೌರವ್ ತಿವಾರಿ ಈ ಸೀರೀಸ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಯಲ್ಲಿ ನೆಟ್‌ಫ್ಲಿಕ್ಸ್ ವಿರುದ್ಧ ದೂರು ದಾಖಲಿಸಿದ್ದಾರೆ. ನೆಟ್‌ಫ್ಲಿಕ್ಸ್ ಈ ಸೀರೀಸ್ ಮೂಲಕ ಲವ್‌ ಜಿಹಾದ್‌ಗೆ ಪ್ರೇರಣೆ ನೀಡುತ್ತಿದೆ ಹಾಗೂ ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಟ್ವೀಟ್ ಮಾಡಿ ಜನ ಸಾಮಾನ್ಯರ ಬಳಿಯೂ ನೆಟ್‌ಫ್ಲಿಕ್ಸ್ ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ.

ಟ್ವಿಟರ್‌ನಲ್ಲೂ  #BoycottNetflix ಭಾರೀ ಸದ್ದು ಮಾಡುತ್ತಿದ್ದು, ಈ ಸುದ್ದಿ ಬರೆಯುವವರೆಗೆ ಸುಮಾರು 80 ಸಾವಿರಕ್ಕೂ ಅಧಿಕ ಮಂದಿ ಈ ಹ್ಯಾಷ್‌ ಟ್ಯಾಗ್‌ನಡಿ ಟ್ವೀಟ್ ಹಾಗೂ ರೀಟ್ವೀಟ್ ಮಾಡಿದ್ದಾರೆ.

ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!

ಇನ್ನು ಅನೇಕ ಮಂದಿ ಇದನ್ನು ಬೆಂಬಲಿಸಿದ್ದಾರೆ. ಸಂಸ್ಕೃತಿ ನೆಪದಲ್ಲಿ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆಂದು ದೂರಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ತನಿಷ್ಕ್ ಜ್ಯುವೆಲ್ಲರಿ ಹಿಂದೂ ಮುಸ್ಲಿಂ ಸಾಮರಸ್ಯದ ಬಗ್ಗೆ ಜಾಹೀರಾತೊಂದನ್ನು ಪ್ರಸಾರ ಮಾಡಿತ್ತು. ಈ ವೇಳೆಯೂ ಲವ್ ಜಿಹಾದ್ ಮಾತುಗಳು ಕೇಳಿ ಬಂದಿದ್ದವು. ಅಲ್ಲದೇ ತನಿಷ್ಕ್ ಜ್ಯುವೆಲ್ಲರಿಯನ್ನು ಬಹಿಷ್ಕರಿಸುವ ಕೂಗೆದ್ದಿತ್ತು. ಅಷ್ಟರಲ್ಲಾಗಲೇ ಕಂಪನಿ ತನ್ನ ಈ ಜಾಹೀರಾತನ್ನು ತಡೆ ಹಿಡಿದಿತ್ತು. ಹೀಗಿದ್ದರೂ ಧರ್ಮ ಸಾಮರಸ್ಯ ಸಾರುವ ಆ ಜಾಹೀರಾತಿಗೆ ಸಿನಿಮಾ ನಟರು ಸೇರಿ ಅನೇಕ ಮಂದಿ ಬೆಂಬಲ ಸೂಚಿಸಿದ್ದರು.