ಹೊಸ ಜಾಹೀರಾತಿನಲ್ಲಿ ಹಿಂದೂ, ಮುಸ್ಲಿಂ ದಂಪತಿ: #BoycottTanishq ಈಗ ಟಾಪ್ ಟ್ರೆಂಡಿಂಗ್!
ತನಿಷ್ಕ್ ವಿರುದ್ಧ ಮತ್ತೆ ಗರಂ ಆದ ನೆಟ್ಟಿಗರು| #BoycottTanishq ಹ್ಯಾಷ್ ಟ್ಯಾಗ್ ಫುಲ್ ವೈರಲ್| ಜ್ಯುವೆಲ್ಲರಿಯ ನೂತನ ಜಾಹೀರಾತಿನಲ್ಲಿ ಹಿಂದೂ-ಮುಸ್ಲಿಂ ದಂಪತಿ| ಲವ್ ಜಿಹಾದ್, ನಕಲಿ ಜಾತ್ಯಾತೀತತೆ ಆರೋಪ
ನವದೆಹಲಿ(ಅ.12) ಸೋಶಿಯಲ್ ಮಿಡಿಯಾ ಅನ್ನೋದು ದೊಡ್ಡ ಸಾಗರದಂತೆ, ಇಲ್ಲೊಂದು ವಿಚಾರ ಮೆಚ್ಚುಗೆಗೆ ಪಾತ್ರವಾದರೆ ಭಾರೀ ಪ್ರಸಿದ್ಧಿ ತಂದು ಕೊಡುತ್ತದೆ. ಆದರೆ ಯಾವುದಾದರೊಂದು ವಿಚಾರಕ್ಕೆ ಖಂಡನೆಗೊಳಗಾದರೆ ಅದು ಮತ್ತೆ ಜನರ ಪ್ರೀತಿ ಪಡೆಯಲು ಹರ ಸಾಹಸ ಮಾಡಬೇಕಾಗುತ್ತದೆ. ಟೈಟಾನ್ ಗ್ರೂಪ್‌ನ ತನಿಷ್ಕ್ ಜ್ಯುವೆಲ್ಲರಿಯ ಜಾಹೀರಾತೊಂದು ನೆಟ್ಟಿಗರನ್ನು ಕೆರಳಿಸಿದ್ದು, #BoycottTanishq ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.
ಹೌದು ತನಿಷ್ಕ್ ಜ್ಯುವೆಲ್ಲರಿಯ ನೂತನ ಜಾಹೀರಾತಿನಲ್ಲಿ ಹಿಂದೂ-ಮುಸ್ಲಿಂ ದಂಪತಿಯನ್ನು ತೋರಿಸಲಾಗಿತ್ತು. ಆದರೆ ಇದರಲ್ಲಿ ನೀಡಲಾದ ಸನ್ನಿವೇಶ ಹಾಗೂ ವಿಚಾರ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಹೀಗಾಗಿ ಜಾಹೀರಾತಿನ ಮೂಲಕ ಲವ್ ಜಿಹಾದ್ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.17,000ಕ್ಕೂ ಅಧಿಕ ಮಂದಿ #BoycottTanishq ಹದಯಾಷ್ ಟ್ಯಾಗ್‌ನಡಿ ಟ್ವೀಟ್ ಮಾಡಿದ್ದು, ಈ ಜಾಹೀರಾತನ್ನು ಹಾಗೂ ಈ ಜ್ಯುವೆಲ್ಲರಿ ಬ್ರಾಂಡ್‌ನ್ನು ಬಹಿಷ್ಕರಿಸುವಂತೆ ಧ್ವನಿ ಎತ್ತಿದ್ದಾರೆ.
ಅಕ್ಟೋಬರ್ 9 ರಂದು ರಿಲೀಸ್ ಆದ ಈ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬವೊಂದು, ತಮ್ಮ ಹಿಂದೂ ಧರ್ಮದ ಗರ್ಭಿಣಿ ಸೊಸೆಗಾಗಿ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಸುವ ತಯಾರಿಯ ದೃಶ್ಯಗಳಿವೆ. ಅಲ್ಲದೇ ಅಂತಿಮವಾಗಿ ಇಂತಹುದ್ದೊಂದು ಅಚ್ಚರಿಯ ತಯಾರಿ ಕಂಡ ಸೊಸೆ ತನ್ನ ಅತ್ತೆ ಬಳಿ ನಿಮ್ಮ ಸಂಪ್ರದಾಯದಲ್ಲಿ ಇದೆಲ್ಲವನ್ನೂ ಮಾಡುವುದಿಲ್ಲವಲ್ಲಾ ಎಂದು ಪ್ರಶ್ನಿಸಿದಾಗ ಮಗಳನ್ನು ಖುಷಿಯಾಗಿಡುವ ಸಂಪ್ರದಾಯ ಎಲ್ಲಾ ಮನೆಯಲ್ಲೂ ಮಾಡುತ್ತಾರಲ್ಲವೇ? ಎಂದು ಅತ್ತೆ ಪ್ರಶ್ನಿಸುತ್ತಾರೆ.
ಇನ್ನು ಈ ವಿಡಿಯೋಗೆ ಆಕೆ ತನ್ನನ್ನು ಮಗಳಂತೆ ಕಾಣುವ ಕುಟುಂಬಕ್ಕೆ ಮದುವೆಯಾಗಿ ಹೋಗಿದ್ದಾಳೆ. ಆಕೆಗಾಗಿ ಅವರು ತಾವು ಅನುಸರಿಸದ ಸಂಪ್ರದಾಯವನ್ನು ಆಚರಿಸುತ್ತಿದ್ದಾರೆ. ಎರಡು ವಿಭಿನ್ನ ಧರ್ಮ, ಸಂಪ್ರದಾಯ ಹಾಗೂ ಪದ್ಧತಿಯ ಸಂಗಮವಿದು ಎಂಬ ವಿವರಣೆಯನ್ನೂ ಬರೆಯಲಾಗಿದೆ.
ಸದ್ಯ ಈ ಜಾಹೀರಾತು ಲೈಕ್ಸ್‌ಗಿಂತ ಹೆಚ್ಚು dislikes ಪಡೆದಿದೆ. ಅಲ್ಲದೇ ಇಂತಹ ಜಾಹೀರಾತಿನ ಮೂಲಕ ಲವ್ ಜಿಹಾದ್ ಹಾಗೂ ನಕಲಿ ಜಾತ್ಯಾತೀತೆಯನ್ನು ನೀವು ಪ್ರೊಮೋಟ್ ಮಾಡುತ್ತಿದ್ದೀತರೆಂದು ನೆಟ್ಟಿಗರು ಜ್ಯುವೆಲ್ಲರಿ ಬ್ರಾಂಡ್ ವಿರುದ್ಧ ಕಿಡಿ ಕಾರಿದ್ದಾರೆ.
ಈ ಹಿಂದೆಯೂ ತನಿಷ್ಕ್‌ನ ಜಾಹೀರಾತಿನ ವಿಡಿಯೋ ಒಂದು ಭಾರೀ ಟೀಕೆಗೆ ಗುರಿಯಾಗಿತ್ತು. ಆ ಜಾಹೀರಾತಿನಲ್ಲಿ ವರ್ಣಬೇಧ ನೀತಿ ನೆನಪಿಸುವ ಅಂಶಗಳಿದ್ದವು.