ನವದೆಹಲಿ(ಅ.13): ಟೈಟಾನ್‌ ಗ್ರೂಪ್‌ನ ತನಿಷ್ಕ್ ಜ್ಯುವೆಲ್ಲರಿ ಕಂಪನಿಯ ಒಂದು ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು, ಜೊತೆಗೆ ಈ ಜ್ಯವೆಲ್ಲರಿ ಬ್ರಾಂಡ್‌ ಬಹಿಷ್ಕರಿಸುವ ಕೂಗು ಕೂಡಾ ಎದ್ದಿತ್ತು. ಆದರೀಗ ಈ ಬೆಳವಣಿಗೆ ಬೆನ್ನಲ್ಲೇ ಕಂಪನಿ ತನ್ನ ಜಾಹೀರಾತನ್ನು ಹಿಂಪಡೆದಿದೆ, ಎಲ್ಲಾ ಸೋಶಿಯಲ್ ಮೀಡಿಯಾಗಳಿಂದ ತೆಗೆದು ಹಾಕಿದೆ. 

ಹೌದು ಸೋಮವಾರದಂದು  #BoycottTanishq ಟ್ವಿಟರ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿತ್ತು. ಅಂತರ್ಧರ್ಮೀಯ ವಿವಾಹವಾದ ಬಳಿಕ ನಡೆಯುವ ಸೀಮಂತ ಶಾಸ್ತ್ರ ನಡೆಸುವ ದೃಶ್ಯ ಇದರಲ್ಲಿತ್ತು. ಇದು ಕೆಲವರಲ್ಲಿ ಸಮಾಧಾನ ಮೂಡಿಸಿದ್ದು, ಇದು ಒಂದು ಬಗೆಯ ಲವ್ ಜಿಹಾದ್ ಎಂಬ ಆರೋಪವೂ ಕೇಳಿ ಬಂದಿತ್ತು. ಹೀಗಿದ್ದರೂ ಅನೇಕ ಮಂದಿ ಈ ಅಭಿಯಾನವನ್ನು ಖಂಡಿಸಿದ್ದರು. ಇಂತಹ ಆಕ್ರೋಶಭರಿತ ಟ್ವೀಟ್‌ಗಳು ಭಾರತದ ಸಂವಿಧಾನದ ಮೂಲವಾಗಿರುವ ಜಾತ್ಯಾತೀತಕ್ಕೆ ಮಾಡುವ ಅವಮಾನವೆಂದೂ ಬಣ್ಣಿಸಿದ್ದಾರೆ.

ಜಾಹೀರಾತಿನಲ್ಲೇನಿತ್ತು?

ಅಕ್ಟೋಬರ್ 9 ರಂದು ರಿಲೀಸ್ ಆದ ಈ ಜಾಹೀರಾತಿನಲ್ಲಿ ಮುಸ್ಲಿಂ ಕುಟುಂಬವೊಂದು, ತಮ್ಮ ಹಿಂದೂ ಧರ್ಮದ ಗರ್ಭಿಣಿ ಸೊಸೆಗಾಗಿ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಸುವ ತಯಾರಿಯ ದೃಶ್ಯಗಳಿವೆ. ಅಲ್ಲದೇ ಅಂತಿಮವಾಗಿ ಇಂತಹುದ್ದೊಂದು ಅಚ್ಚರಿಯ ತಯಾರಿ ಕಂಡ ಸೊಸೆ ತನ್ನ ಅತ್ತೆ ಬಳಿ ನಿಮ್ಮ ಸಂಪ್ರದಾಯದಲ್ಲಿ ಇದೆಲ್ಲವನ್ನೂ ಮಾಡುವುದಿಲ್ಲವಲ್ಲಾ ಎಂದು ಪ್ರಶ್ನಿಸಿದಾಗ ಮಗಳನ್ನು ಖುಷಿಯಾಗಿಡುವ ಸಂಪ್ರದಾಯ ಎಲ್ಲಾ ಮನೆಯಲ್ಲೂ ಮಾಡುತ್ತಾರಲ್ಲವೇ? ಎಂದು ಅತ್ತೆ ಪ್ರಶ್ನಿಸುತ್ತಾರೆ. 

ಇನ್ನು ಈ ವಿಡಿಯೋಗೆ ಆಕೆ ತನ್ನನ್ನು ಮಗಳಂತೆ ಕಾಣುವ ಕುಟುಂಬಕ್ಕೆ ಮದುವೆಯಾಗಿ ಹೋಗಿದ್ದಾಳೆ. ಆಕೆಗಾಗಿ ಅವರು ತಾವು ಅನುಸರಿಸದ ಸಂಪ್ರದಾಯವನ್ನು ಆಚರಿಸುತ್ತಿದ್ದಾರೆ. ಎರಡು ವಿಭಿನ್ನ ಧರ್ಮ, ಸಂಪ್ರದಾಯ ಹಾಗೂ ಪದ್ಧತಿಯ ಸಂಗಮವಿದು ಎಂಬ ವಿವರಣೆಯನ್ನೂ ಬರೆಯಲಾಗಿತ್ತು.

ಈ ಜಾಹೀರಾತಿನ ವಿರುದ್ಧ ಕೇಳಿ ಬಂದ ಬಹಿಷ್ಕಾರದ ಕೂಗನ್ನು ಕೇಳಿ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಟ್ವೀಟ್ ಒಂದನ್ನು ಮಾಡಿದ್ದ ಅವರು 'ಹಾಗಾದ್ರೆ ಹಿಂದೂ ಬ್ರಿಗೇಡ್ ಹಿಂದೂ ಮುಸ್ಲಿಂ ಸಾಮರಸ್ಯವನ್ನು ಇಷ್ಟೊಂದು ಸುಂದರವಾಗಿ ಬಿಂಬಿಸಿದಸ ಈ ಜಾಹೀರಾತಿನಿಂದಾಗಿ ತನಿಷ್ಕ್ ಜ್ಯುವೆಲ್ಲರಿಯನ್ನು ಬಹಿಷ್ಕರಿಸುವಂತೆ ಕೇಳಿಕೊಂಡಿದೆಯಾ? ಹಿಂದೂ ಮುಸಲ್ಮಾನರ ಸಾಮರಸ್ಯದಿಂದ ಅಷ್ಟೊಂದು ಸಮಸ್ಯೆ ಇದ್ದರೆ, ಇಡೀ ವಿಶ್ವದಲ್ಲಿರುವ ಹಿಂದೂ ಮುಸಲ್ಮಾನರ ಏಕತೆಯ ಪ್ರತೀಕವಾಗಿರುವ ಖುದ್ದು ಭಾರತವನ್ನೇ ಯಾಕೆ ಬಹಿಷ್ಕರಿಸುವುದಿಲ್ಲ?' ಎಂದು ಪ್ರಶ್ನಿಸಿದ್ದಾರೆ.

ಇನ್ನು ಅತ್ತ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಕೂಡಾ ಈ ಬಗ್ಗೆ ಟ್ವೀಟ್ ಮಾಡುತ್ತಾ ಬಹಿಷ್ಕಾರದ ಕೂಗು ಎತ್ತಿದವರನ್ನು ಟೀಕಿಸಿದ್ದಾರೆ. ಅಲ್ಲದೇ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶಮೀನಾ ಶಫೀಕ್ ಕೂಡಾ ಈ ಜಾಹೀರಾತನ್ನು ಸಮರ್ಥಿಸಿಕೊಂಡಿದ್ದು, 'ಟ್ರೋಲ್ ಮಾಡಿ ಎಲ್ಲರ ಗಮನ ಈ ಸುಂದರ ಜಾಹೀರಾತಿನೆಡೆ ಸೆಳೆದವರೆಲ್ಲರಿಗೂ ಧನ್ಯವಾದ' ಎಂದಿದ್ದಾರೆ.