ನಟ ಸಲ್ಮಾನ್ ಖಾನ್ ಮನೆ ಮುಂದೆ ನಿನ್ನೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯ ನಂತರ ಎಲ್ಲೆಡೆ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಹೆಸರೇ ಕೇಳಿ ಬರುತ್ತಿದೆ. ಆತನ ಸೋದರ ಈ ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ. ಹಾಗಿದ್ದರೆ ಈ ಗ್ಯಾಂಗ್‌ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಯಾರು ಆತನಿಗೂ ಸಲ್ಮಾನ್ ಖಾನ್‌ಗೂ ಏನು ದ್ವೇಷ, ಆತ ಬೆಳೆದು ಬಂದಿದ್ದೇಗೆ ಇಲ್ಲಿದೆ ಡಿಟೇಲ್ಡ್ ಸೋರಿ..

ಮುಂಬೈ: ನಟ ಸಲ್ಮಾನ್ ಖಾನ್ ಮನೆ ಮುಂದೆ ನಿನ್ನೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯ ನಂತರ ಎಲ್ಲೆಡೆ ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಹೆಸರೇ ಕೇಳಿ ಬರುತ್ತಿದೆ. ಆತನ ಸೋದರ ಈ ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ. ಹಾಗಿದ್ದರೆ ಈ ಗ್ಯಾಂಗ್‌ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಯಾರು ಆತನಿಗೂ ಸಲ್ಮಾನ್ ಖಾನ್‌ಗೂ ಏನು ದ್ವೇಷ, ಆತ ಬೆಳೆದು ಬಂದಿದ್ದೇಗೆ ಇಲ್ಲಿದೆ ಡಿಟೇಲ್ಡ್ ಸೋರಿ..

ಸುಮಾರು ಒಂದು ದಶಕದ ಹಿಂದೆ, ದೇಶವು ಹೊಸ ಗ್ಯಾಂಗ್‌ಸ್ಟಾರ್‌ಗಳ ಮಾಫಿಯಾ ಡಾನ್‌ಗಳ ಹುಟ್ಟಿಗೆ ಸಾಕ್ಷಿಯಾಗಿದ್ದು, ಈ ಗ್ಯಾಂಗ್‌ಸ್ಟಾರ್‌ಗಳು ತಮ್ಮ ವ್ಯಾಪ್ತಿಯನ್ನು ದೇಶದ ಗಡಿ ಮೀರಿ ವಿಸ್ತರಿಸಿಕೊಂಡವರು. ಸಾಮಾನ್ಯರಾಗಿ ಹುಟ್ಟಿ ಅಪರಾಧ ಲೋಕದಲ್ಲಿ ಹವಾ ಸೃಷ್ಟಿಸುತ್ತಿರುವ ಈ ಗ್ಯಾಂಗ್‌ಸ್ಟಾರ್‌ಗಳಲ್ಲಿ ಒಬ್ಬನೆನಿಸಿರುವ ಲಾರೆನ್ಸ್ ಬಿಷ್ಣೋಯ್ ಸ್ಟೋರಿ ಅಪರಾಧ ಜಗತ್ತಿನ ಆಕರ್ಷಣೆ ಹಾಗೂ ಅಪಾಯದ ಮೇಲೆ ಬೆಳಕು ಚೆಲ್ಲುತ್ತದೆ. ಪಂಜಾಬ್‌ನ ಫಿರೋಜ್‌ಪುರದಲ್ಲಿ ಜನಿಸಿದ ಲಾರೆನ್ಸ್ ಬಿಷ್ಣೋಯ್ ಮೂಲತಃ ಹರಿಯಾಣ ಪೊಲೀಸ್ ಪೇದೆಯೊಬ್ಬರ ಮಗ. ಪಂಜಾಬ್ ವಿವಿಯಿಂದ ಕಾನೂನು ಪದವಿ ಪಡೆದಿರುವ ಈತ ಈಗ ಪಾತಕ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದ್ದಾನೆ. 

ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ನಟ ಸಲ್ಮಾನ್​ ಖಾನೇ ಟಾರ್ಗೆಟ್​?

ಕಾಲೇಜಿನಲ್ಲಿ ಓದುತ್ತಿರುವಾಗಲೇ ವಿದ್ಯಾರ್ಥಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಈತನ ಅಪರಾಧ ಕ್ಷೇತ್ರದ ಪ್ರಯಾಣವೂ ಕಾಲೇಜು ದಿನಗಳಿಂದದಲೇ ಆರಂಭವಾಗಿದೆ ಎಂದರೆ ತಪ್ಪಾಗಲ್ಲ, ಆಗಲೇ ಆತ ಆಗ ಗ್ಯಾಂಗ್‌ಸ್ಟಾರ್ ಎನಿಸಿಕೊಂಡಿದ್ದ ಜಗ್ಗು ಭಗವಾನ್‌ಪುರಿಯೊಂದಿಗೆ ಸೇರಿಕೊಂಡಿದ್ದ ಹಾಗೂ ಅಪರಾಧ ಜಗತ್ತಿನ ಆಟಾಟೋಪದ ಬಗ್ಗೆ ಸೂಕ್ಷ್ಮವಾಗಿ ಅಳವಾಗಿ ಅಧ್ಯಯನ ಮಾಡಿದ್ದ. 2013ರಲ್ಲಿ ಈತ ಕಾಲೇಜು ಚುನಾವಣೆಯಲ್ಲಿ ಗೆದ್ದಿದ ಅಭ್ಯರ್ಥಿ ಮತ್ತು ಲುಧಿಯಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ತನ್ನ ಮೊದಲ ಪ್ರಮುಖ ಅಪರಾಧ ಕೃತ್ಯವನ್ನು ಎಸಗಿದ್ದ. ಇದಾದ ನಂತರ 2014 ರಲ್ಲಿ ಈತ ರಾಜಸ್ಥಾನ ಪೊಲೀಸರೊಂದಿಗೆ ಗುಂಡಿನ ಚಕಮಕಿಯಲ್ಲಿ ಭಾಗಿಯಾಗಿದ್ದ. ಇದು ಆತನ ಜೈಲುವಾಸಕ್ಕೆ ಕಾರಣವಾಗಿತ್ತು.

2016ರಲ್ಲಿ ಮತ್ತೆ ಬಂಧನಕ್ಕೊಳಗಾದ ಈತನಿಗೆ 2021ರವರೆಗೆ ರಾಜಸ್ಥಾನದಲ್ಲಿ ಜೈಲುವಾಸ ಮುಂದುವರೆಯಿತು. ನಂತರ ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ (MCOCA) ಆತನನ್ನು ದೆಹಲಿಯ ತಿಹಾರ್ ಜೈಲಿಗೆ ವರ್ಗಾಯಿಸಲಾಯಿತು. ಕಂಬಿಗಳ ಹಿಂದೆ ಇದ್ದೇ ಆತ ಅಪರಾಧ ಲೋಕದಲ್ಲಿ ತನ್ನ ಹವಾ ಸೃಷ್ಟಿಸುವುದನ್ನು ಮುಂದುವರೆಸಿದ್ದ. ಈತ ದೇಶದ 7 ರಾಜ್ಯಗಳಲ್ಲಿ ಅಂದಾಜು ಸುಮಾರು 700 ಶಾರ್ಪ್‌ ಶೂಟರ್‌ಗಳ ಗ್ಯಾಂಗ್‌ ಅನ್ನು ಹ್ಯಾಂಡಲ್ ಮಾಡುತ್ತಿದ್ದು, ಕೆನಡಾದವರೆಗೂ ಈತನಿಗೆ ಸಂಪರ್ಕವಿದೆ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಬೆದರಿಕೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಇದೆಲ್ಲಾ ಆರೋಪಗಳನ್ನು ಆತ ನಿರಾಕರಿಸುತ್ತಲೇ ಬಂದಿದ್ದಾನೆ. 

ಜೈಲಿನಲ್ಲಿರುವ ಬಿಷ್ಣೋಯ್‌ನನ್ನು ಪಂಜಾಬ್ ಸಿಎಂ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್!

ಆದರೆ 2018ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆಯೊಡ್ಡುವ ಮೂಲಕ ಈತನ ಅಪರಾಧ ಚಟುವಟಿಕೆ ಮತ್ತೆ ಮುನ್ನೆಲೆಗೆ ಬಂದಿತು. 1998 ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಈತ ಬೆದರಿಕೆ ಹಾಕಿದ್ದ. ಬಿಷ್ಣೋಯ್ ಸಮುದಾಯವು ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುತ್ತದೆ. ಆದರೆ ಸಲ್ಮಾನ್ ವಿರುದ್ಧ 1998ರಲ್ಲಿ ಸಿನಿಮಾ ಶೂಟಿಂಗ್ ವೇಳೆ ಈ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪವಿತ್ತು. ಹೀಗಾಗಿ ಅದೊಂದು ನೆಪವಿರಿಸಿಕೊಂಡು 2018ರಿಂದಲೂ ಈತನ ಗ್ಯಾಂಗ್ ಸಲ್ಮಾನ್ ಖಾನ್ ಮೇಲೆ ಒಂದು ಕಣ್ಣಿಟ್ಟಿದ್ದಲ್ಲದೇ ಸಲ್ಮಾನ್ ಖಾನ್‌ಗೆ ಆಗಾಗ ಬೆದರಿಕೆಯೊಡ್ಡುತ್ತಿದೆ ಎಂದು ವರದಿಯಾಗಿದೆ. ಅಲ್ಲದೇ ಸುಲಿಗೆ ಪ್ರಕರಣವೊಂದರಲ್ಲಿ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಬಿಷ್ಣೋಯ್ ನಗರದಲ್ಲಿ ಸಲ್ಮಾನ್‌ ಖಾನ್‌ರನ್ನು ಕೊಲ್ಲುವುದಾಗಿಯೂ ಬೆದರಿಕೆಯೊಡಿದ್ದ.

ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಸಲ್ಮಾನ್ ಖಾನ್ ತಂದೆ ಬರಹಗಾರ ಸಲೀಂ ಖಾನ್‌ ಅವರು ದಿನವೂ ವಾಕ್ ಹೋಗುವ ಬಾಂದ್ರಾದ ಬ್ಯಾಂಡ್‌ ಸ್ಟ್ಯಾಂಡ್‌ನಲ್ಲಿ ಬೆದರಿಕೆ ಪತ್ರವೊಂದು ಸಿಕ್ಕಿತ್ತು. ಅದರಲ್ಲಿ ಈಗಾಗಲೇ ಹತ್ಯೆಯಾದ ಗಾಯಕ ಸಿಧು ಮೂಸೆವಾಲಾ ರೀತಿಯೇ ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಲಾಗಿತ್ತು. ಇದಾದ ನಂತರ 2023ರ ಮಾರ್ಚ್‌ನಲ್ಲಿ ಸಲ್ಮಾನ್ ಖಾನ್ ಮ್ಯಾನೇಜರ್‌ಗೆ ಮಾರಣಾಂತಿಕ ಇಮೇಲ್ ಸಂದೇಶ ಬಂದಿತ್ತು. ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಬ್ರಾರ್ ಮತ್ತು ಬಿಷ್ಣೋಯ್ ಅವರ ನಿಕಟ ಸಹಚರರೊಂದಿಗೆ ನಟ ಮಾತನಾಡಿ ಈ ವಿಚಾರವನ್ನು ವೈಯಕ್ತಿಕವಾಗಿ ಪರಿಹರಿಸಿಕೊಳ್ಳಬೇಕು ಇಲ್ಲದೇ ಹೋದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. 

ಇದರ ಬೆನ್ನಲ್ಲೇ ಪೊಲೀಸರು ಬಿಷ್ಣೋಯ್, ಬ್ರಾರ್ ಮತ್ತು ಮೋಹಿತ್‌ ಗಾರ್ಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏತನ್ಮಧ್ಯೆ, ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಕೂಡ ಆತನ ಗ್ಯಾಂಗ್ ವಿರುದ್ಧ ಹಲವಾರು ಕಾರ್ಯಾಚರಣೆಗಳನ್ನು ನಡೆಸಿದೆ ಮತ್ತು ಗ್ಯಾಂಗ್‌ಗೆ ಸಂಬಂಧಿಸಿದ ಹಲವಾರು ವ್ಯಕ್ತಿಗಳನ್ನು ಬಂಧಿಸಿದೆ. ನಿನ್ನೆ ಸಲ್ಮಾನ್ ಸಲ್ಮಾನ್ ಖಾನ್ ಮನೆ ಮುಂದೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಬಿಷ್ಣೋಯ್ ಅವರ ಮಾಫಿಯಾ ಗ್ಯಾಂಗ್ ಹೊತ್ತುಕೊಂಡಿದೆ. ಲಾರೆನ್ಸ್‌ ಬಿಷ್ಣೋಯಿ ಅವರ ಕ್ರಿಮಿನಲ್ ಸಾಮ್ರಾಜ್ಯವು ಸುಲಿಗೆ, ಕಳ್ಳಸಾಗಣೆ, ಸುಪಾರಿ ಹತ್ಯೆಗಳು ಮತ್ತು ಭೂಕಬಳಿಕೆ ಮುಂತಾದ ಅಪರಾಧದ ವಿವಿಧ ಆಯಾಮದಲ್ಲಿ ಹಂಚಿಕೆಯಾಗಿದೆ. ಆದರೂ ಈತನ ಬಲವಾದ ನಾಯಕತ್ವ ಮತ್ತು ವರ್ಚಸ್ಸು ಈತನಿಗೆ ಒಳ್ಳೆಯ ನಿಷ್ಠಾವಂತ ಅನುಯಾಯಿಗಳನ್ನು ಸೃಷ್ಟಿಸಿದೆ.