Breaking; RSS ಕಚೇರಿ ಮೇಲೆ ಬಾಂಬ್ ಎಸೆದ ದುಷ್ಕರ್ಮಿಗಳು, ಕಟ್ಟಡ ಧ್ವಂಸ!
- ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ಕಚೇರಿ
- ಬಾಂಬ್ ಎಸೆದು ಪರಾರಿಯಾದ ದುಷ್ಕರ್ಮಿಗಳು
- ಸ್ಥಳಕ್ಕೆ ಪೊಲೀಸರ ದೌಡು, ಸ್ಥಳದಲ್ಲಿ ಆತಂಕದ ವಾತಾವರಣ
ಕಣ್ಣೂರು(ಜು.12): ಸಂಘರ್ಷದ ವಾತಾವರಣದಿಂದ ಕೊಂಚ ಶಾಂತವಾಗಿದ್ದ ಭಾರತದಲ್ಲಿ ಇದೀಗ ಮತ್ತೆ ಆತಂಕದ ವಾತವಾರಣ ನಿರ್ಮಾಣವಾಗಿದೆ. ಇಂದು(ಜು.12) ಬೆಳಗ್ಗೆ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿರುವ ಆರ್‌ಎಸ್ಎಸ್ ಕಚೇರಿ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಕಿಟಕಿ ಮೂಲಕ ಬಾಂಬ್ ಎಸೆಯಲಾಗಿದ್ದು, ಕಚೇರಿ ಧ್ವಂಸಗೊಂಡಿದೆ. ಇಂದು ಮುಂಜಾನೆ 1.30ರ ವೇಳೆ ಬಾಂಬ್ ಎಸೆಯಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು ಇಡೀ ಪ್ರದೇಶ ಸುತ್ತುವರೆದಿದ್ದಾರೆ. ಅದೃಷ್ಠವಶಾತ್ ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದ ಕೆಲ ಕ್ಷಣಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಫಾರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಬಾಂಬ್ ಎಸೆದ ದುಷ್ಕರ್ಮಿಗಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಪಯ್ಯನ್ನೂರು ಆರ್‌ಎಸ್ಎಸ್ ಕಚೇರಿ ಸುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪಯ್ಯನ್ನೂರು ಡಿವೈಎಸ್‌ಪಿ ಸ್ಥಳಕ್ಕೆ ಠಿಕಾಂ ಹೂಡಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಈ ಘಟನೆ ಹಿಂದೆ ಯಾರ ಕೈವಾಡವಿದೆ ಅನ್ನೋದು ಶೀಘ್ರದಲ್ಲೇ ಬಯಲಾಗಲಿದೆ ಎಂದು ಪಯ್ಯನ್ನೂರು ಪೊಲೀಸರು ಹೇಳಿದ್ದಾರೆ. ಪಯ್ಯನ್ನೂರಿನಲ್ಲಿ ಬಿಜೆಪಿ ಹಾಗೂ ಸಿಪಿಎಂ ನಡುವಿನ ವೈರತ್ವ ಇಂದು ನಿನ್ನೆಯದಲ್ಲ. ಇದೇ ಕಾರಣಕ್ಕೆ ಹಲವು ಬಾರಿ ಸಂಘರ್ಷಗಳು ನಡೆದಿದೆ. ಇತ್ತೀಚೆಗೆ ಸಿಪಿಎಂ ನಾಯಕ ಧನರಾಜ್ ಕೊಲೆ ನಡೆದಿತ್ತು. ಕಣ್ಣೂರು ಜಿಲ್ಲೆಯಲ್ಲಿ ನಡೆದ ಈ ಕೊಲೆ ಮತ್ತೆ ಬಿಜೆಪಿ ಹಾಗೂ ಸಿಪಿಎಂ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು. ಧನರಾಜ್ ಹತ್ಯೆ ಬಳಿಕ ಸಿಪಿಎಂ ಹುತಾತ್ಮ ದಿನ ಆಚರಿಸಿದ ಸಿಪಿಎಂ ಅತೀ ದೊಡ್ಡ ರ್ಯಾಲಿ ನಡೆಸಿತ್ತು. ಈ ವೇಳೆ ಬಿಜೆಪಿ ಹಾಗೂ ಆರ್‌ಎಸ್ಎಸ್ ವಿರುದ್ಧ ಘೋಷಣೆಗಳನ್ನು ಕೂಗಲಾಗಿತ್ತು.
ಉದಯಪುರ ಹತ್ಯಾಕಾಂಡ, ಮೊದಲ ಬಾರಿ ಮೌನ ಮುರಿದ RSS ಮುಖ್ಯಸ್ಥ ಮೋಹನ್ ಭಾಗವತ್!
ಸದ್ಯ ನಡೆದ ಆರ್‌ಎಸ್ಎಸ್ ಕಚೇರಿ ಮೇಲಿನ ಬಾಂಬ್ ಎಸೆದ ಪ್ರಕರಣದ ಹಿಂದಿನ ರೂವಾರಿಗಳ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಇದ ರಾಜಕೀಯ ದ್ವೇಷದಿಂದ ನಡೆದಿದೆಯಾ ಅಥವಾ ಇತರ ಯಾವುದೇ ಕಾರಣಕ್ಕೆ ನಡೆದಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಕೇರಳದ ಸಿಪಿಐ(ಎಂ) ಕಚೇರಿ ಮೇಲೂ ಬಾಂಬ್ ದಾಳಿ ನಡೆದಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಇನ್ನು ಸಿಪಿಎಂಪಿ ಕಚೇರಿ ಮೇಲಿನ ದಾಳಿ ವಿರೋಧಿಸಿ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಭಾರಿ ಪ್ರತಿಭಟನೆಗಳು ನಡೆದಿತ್ತು.
ಕೇರಳದ ಸಿಪಿಐ(ಎಂ) ಕಚೇರಿ ಮೇಲೆ ಬಾಂಬ್ ಎಸೆದವರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ)ಪಕ್ಷ ಯಾದಗಿರಿ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತ್ತು. ತಿರುವನಂತಪುರದ ಕಚೇರಿ ಮೇಲೆ ಕಚ್ಚಾ ಬಾಂಬ್ ದಾಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು, ನೋವು ಸಂಭವಿಸಿಲ್ಲ. ಬಾಂಬ್ ದಾಳಿ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಅಗ್ನಿಪಥ್ ಯೋಜನೆ ಕೈಬಿಡಬೇಕು, ಪಠ್ಯಪುಸ್ತಕ ಪರಿಷ್ಕರಣೆ ಕೈಬಿಟ್ಟು ಹಿಂದಿನ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು. ರಾಜಾಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಅವರ ಹತ್ಯೆ ಮಾಡಿದವರಿಗೆ ತ್ವರಿತವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್‌ವಾಡ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಆರೆಸ್ಸೆಸ್ ಬೈಯುವ ಸಿದ್ದು ಚಾಳಿ ಈಗ ಎಚ್‌ಡಿಕೆಗೆ: ಈಶ್ವರಪ್ಪ ಕಿಡಿ