Asianet Suvarna News Asianet Suvarna News

ಪಂಜಾಬ್ ಸಿಎಂ ಮನೆ ಮುಂದೆ ಬಾಂಬ್ : ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ

ಪಂಜಾಬ್‌ ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಅವರ ನಿವಾಸದ ಬಳಿ  ಬಾಂಬ್‌ ಪತ್ತೆಯಾಗಿದೆ. ಮಾನ್‌ ಮನೆ ಹಾಗೂ ಬಳಕೆ ಮಾಡುತ್ತಿದ್ದ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲೇ ಸ್ಪೋಟಕ ಕಂಡುಬಂದಿದೆ.

Bomb found in front of Punjab CM's house, again Terrorist attack in Kashmir akb
Author
First Published Jan 3, 2023, 8:28 AM IST

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಭಗವಂತ ಸಿಂಗ್‌ ಮಾನ್‌ ಅವರ ನಿವಾಸದ ಬಳಿ  ಬಾಂಬ್‌ ಪತ್ತೆಯಾಗಿದೆ. ಮಾನ್‌ ಮನೆ ಹಾಗೂ ಬಳಕೆ ಮಾಡುತ್ತಿದ್ದ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲೇ ಸ್ಪೋಟಕ ಕಂಡುಬಂದಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ಮುಖ್ಯಮಂತ್ರಿ ಮಾನ್‌ ಅವರ ನಿವಾಸದ ಬಳಿ ಮಾವಿನ ಮರದ ಕೆಳಗೆ ವಸ್ತುವೊಂದು ನಿನ್ನೆ ಸಾಯಂಕಾಲ 4.30ರ ಸುಮಾರಿಗೆ ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಬಾಂಬ್‌ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸಿತು. ಇದೊಂದು ಸಕ್ರಿಯ ಬಾಂಬ್‌ ಶೆಲ್‌ ಆಗಿದ್ದು, ಇದನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದು ಮುಖ್ಯಮಂತ್ರಿ ನಿವಾಸದ ಬಳಿ ಹೇಗೆ ತಲುಪಿತು ಎಂಬುದರ ಕುರಿತಾಗಿ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

‘ಬಾಂಬ್‌ ನಿಷ್ಕ್ರಿಯ ದಳದ (bomb disposal squad) ಸಹಾಯದಿಂದ ಇಡೀ ಪ್ರದೇಶವನ್ನು ಬಂದೋಬಸ್ತ್ ಮಾಡಿದ್ದೇವೆ. ಭಾರತೀಯ ಸೇನೆ ಆಗಮಿಸಿದ್ದು, ತನಿಖೆ ಮುಂದುವರೆದಿದೆ ಎಂದು ಚಂಡೀಗಢ ಆಡಳಿತದ (Chandigarh administration) ನೋಡಲ್‌ ಅಧಿಕಾರಿ ತಿಳಿಸಿದ್ದಾರೆ. ಬಾಂಬ್‌ ಪತ್ತೆಯಾದ ವೇಳೆಯಲ್ಲಿ ಮುಖ್ಯಮಂತ್ರಿ ಮಾನ್‌ (Chief Minister Mann) ಮನೆಯಲ್ಲಿರಲಿಲ್ಲ. ಅವರ ಮನೆಯ ಸಮೀಪವೇ ಹರ್ಯಾಣ ಸಿಎಂ (Haryana CM) ಮನೆಯೂ ಇದೆ. ಈ ಬಾಂಬ್‌ ಎಲ್ಲಿಂದ ಬಂದಿದ್ದು ಎಂಬುದನ್ನು ಸೇನೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗುಜರಿ ಅಂಗಡಿಯವರನ್ನೂ ವಿಚಾರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Mangaluru Auto Blast: ಮಂಗಳೂರು ಬ್ಲಾಸ್ಟ್ ಪ್ರಕರಣ: ಬೆಂಗಳೂರಿಗೆ ಉಗ್ರ ಶಾರೀಕ್‌ ಶಿಫ್ಟ್‌

ಜಮ್ಮುನಲ್ಲಿ ಮೊನ್ನೆ ದಾಳಿ ನಡೆದ ಸ್ಥಳದಲ್ಲೇ ಮತ್ತೆ ಬಾಂಬ್‌ ಸ್ಫೋಟ

ಇತ್ತ ಜಮ್ಮು ಕಾಶ್ಮೀರದ (Jammu and Kashmir) ರಜೌರಿ (Rajouri) ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ಸಾಯಂಕಾಲ ಉಗ್ರರು ದಾಳಿ ನಡೆಸಿದ ಸ್ಥಳದಲ್ಲೇ ಸೋಮವಾರ ಮತ್ತೊಂದು ಬಾಂಬ್‌ ಸ್ಫೋಟ ನಡೆಸಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದು ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ 14 ಗಂಟೆಗಳ ಒಳಗೆ ಉಗ್ರರು ಮತ್ತೊಮ್ಮೆ ಬಾಂಬ್‌ ಸ್ಫೋಟಿಸಿದ್ದಾರೆ. ಇದೊಂದು ಸುಧಾರಿತ ಸ್ಫೋಟಕವಾಗಿದ್ದು ಇದನ್ನು ಬ್ಯಾಗ್‌ನಲ್ಲಿಡಲಾಗಿತ್ತು. ಇದರ ದಾಳಿಗೆ 7 ವರ್ಷ ಪ್ರಾಯದ ಸಾನ್ವಿ ಶರ್ಮಾ (Sanvi Sharma) ಮತ್ತು 4 ವರ್ಷ ಪ್ರಾಯದ ವಿಹಾನ್‌ ಕುಮಾರ್‌ ಶರ್ಮಾ (Vihan Kumar Sharma) ಎಂಬ ಅಕ್ಕ-ತಮ್ಮ ಸಾವಿಗೀಡಾಗಿದ್ದಾರೆ. ಅಲ್ಲದೇ ಈ ದುರ್ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

ಪ್ರೀತಮ್‌ ಲಾಲ್‌(Pritam Lal) ಎಂಬುವವರ ಮನೆಯ ಬಳಿ ಸ್ಫೋಟ ನಡೆದಿದ್ದು, ಭಾನುವಾರ ಇವರ ಮನೆಯ ಸಮೀಪದಲ್ಲೇ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಕೃತ್ಯವನ್ನು ವಿರೋಧಿಸಿ ರಜೌರಿ ಸೇರಿದಂತೆ, ಜಮ್ಮುಕಾಶ್ಮೀರದ ಹಲವು ಭಾಗಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ. ಈ ಕೃತ್ಯದ ಹಿಂದಿರುವವರನ್ನು ಶಿಕ್ಷಿಸದೇ ಬಿಡುವುದಿಲ್ಲ ಎಂದು ಉಪರಾಜ್ಯಪಾಲ ಮನೋಜ್‌ ಸಿನ್ಹಾ (Governor Manoj Sinha) ಹೇಳಿದ್ದಾರೆ. ಅಲ್ಲದೇ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರು. ಪರಿಹಾರ ಮತ್ತು ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ಪೊಲೀಸರು ಹಾಗೂ ಸೇನೆ ವ್ಯಾಪಕ ಶೋಧ ಕಾರ್ಯವನ್ನು ಆರಂಭಿಸಿವೆ.

Kodagu: ರಾಜ್ಯದಲ್ಲಿ ಉಗ್ರರ ತರಬೇತಿ ಶಾಲೆಯಾಗುತ್ತಿದೆಯಾ ಕೊಡಗು?

ಭಾನುವಾರ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಡಂಗ್ರಿ ಗ್ರಾಮದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು. ಬಂಧೂಕು ಧರಿಸಿ ಬಂದಿದ್ದ ಉಗ್ರರು ಡಂಗ್ರಿ ಗ್ರಾಮದಲ್ಲಿನ 3 ಮನೆಗಳ ಮೇಲೆ ಗುಂಡು ಹಾರಿಸಿದ್ದಾರೆ. ಈ 3 ಮನೆಗಳು ಸುಮಾರು 50 ಮೀ. ಅಂತರದಲ್ಲಿದ್ದು, ಎಲ್ಲಾ ಮನೆಗಳ ಮೇಲೂ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಸಿಲುಕಿ ಗಾಯಗೊಂಡ ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. 4 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಶ್ಮೀರ ವಲಯದಲ್ಲಿ ಉಗ್ರರಿಗಾಗಿ ಶೋಧ ಕಾರ್ಯವನ್ನು ಸೇನಾಪಡೆಗಳು ಆರಂಭಿಸಿವೆ ಎಂದು ಎಡಿಜಿಪಿ ಮುಖೇಶ್‌ ಸಿಂಗ್‌ ಹೇಳಿದ್ದರು.

ಗ್ರೆನೇಡ್‌ ದಾಳಿಗೆ ನಾಗರಿಕನಿಗೆ ಗಾಯ

ಅದೇ ದಿನ ಸಿಆರ್‌ಪಿಎಫ್‌ ಬಂಕರ್‌ನ ಮೇಲೆ ಉಗ್ರರು ಎಸೆದ ಗ್ರೇನೆಡ್‌ ಸ್ಫೋಟಗೊಂಡು ನಾಗರಿಕನೊಬ್ಬ ಗಾಯಗೊಂಡ ಘಟನೆ ಶ್ರೀನಗರದಲ್ಲಿ ನಡೆದಿತ್ತು. ಸಿಆರ್‌ಪಿಎಫ್‌ ಕಟ್ಟಡದೊಳಗೆ ಎಸೆಯಲು ಪ್ರಯತ್ನಿಸಿದ ಗ್ರೆನೇಡ್‌ ರಸ್ತೆಬದಿಯಲ್ಲಿ ಸ್ಫೋಟಗೊಂಡ ಪರಿಣಾಮ ನಾಗರಿಕ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚೇತರಿಸಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

Follow Us:
Download App:
  • android
  • ios