Patna Court Blast: ಪ್ರಕರಣವೊಂದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಸಲುವಾಗಿ, ಸಾಕ್ಷಿಗೆಂದು ವಶಕ್ಕೆ ಪಡೆದಿದ್ದ ಬಾಂಬುಗಳನ್ನು ಪೊಲೀಸರು ಕೋರ್ಟ್‌ಗೆ ತಂದಿದ್ದಾರೆ. ಅದೃಷ್ಟ ಯಾವಾಗ ಬೇಕಾದರೂ ಕೈಕೊಡಬಹುದು ನೋಡಿ, ವರ್ಷದಿಂದ ಠಾಣೆಯಲ್ಲಿ ಕೊಳೆಯುತ್ತಿದ್ದ ಬಾಂಬ್ ಕೋರ್ಟ್ ಒಳಗೆ ಬಂದ ತಕ್ಷಣ ಸ್ಫೋಟಗೊಂಡಿದೆ!
ಪಾಟ್ನಾ: ಪಾಟ್ನಾ ನ್ಯಾಯಾಲಯಕ್ಕೆ (Patna Court) ಸಾಕ್ಷಿಗೆಂದು ಪೊಲೀಸರು ತಂದಿದ್ದ ಬಾಂಬ್ ಸ್ಫೋಟಗೊಂಡಿದ್ದು, ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಶುಕ್ರವಾರ ಈ ಘಟನೆ ನಡೆದಿದ್ದು, ಮಾಧ್ಯಮಗಳಲ್ಲಿ ವರದಿಯಾಗಿದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಪ್ರಕರಣವೊಂದರ ಆರೋಪಿಗಳಿಂದ ವಶಕ್ಕೆ ಪಡೆದ ಬಾಂಬನ್ನು ಕೋರ್ಟ್‌ಗೆ ಸಾಕ್ಷಿಗಾಗಿ ಬಾಕ್ಸ್‌ನಲ್ಲಿ ತಂದಿದ್ದರು. ನಂತರ ಸರ್ಕಾರಿ ವಕೀಲರ (Public Prosecutor) ಮುಂದೆ ಇದ್ದ ಟೇಬಲ್ ಮೇಲೆ ಬಾಂಬನ್ನು ಇರಿಸಲಾಗಿತ್ತು. ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾರೂ ಮೃತಪಟ್ಟಿಲ್ಲ.
ನ್ಯಾಯಾಲಯಕ್ಕೆ ಒಟ್ಟೂ ಎರಡು ಬಾಂಬ್‌ಗಳನ್ನು ಪೊಲೀಸರು ತಂದಿದ್ದರು. ಇನ್ನೊಂದು ಬಾಂಬ್ ಸ್ಫೋಟಗೊಂಡರೆ ಎಂಬ ಭಯ ಕೋರ್ಟ್‌ನಲ್ಲಿದ್ದ ಪ್ರತಿಯೊಬ್ಬರಿಗೂ ಕಾಡಿತ್ತು. ತಕ್ಷಣ ಅಗ್ನಿಶಾಮಕ ದಳ (Fire and Emergency Services) ಮತ್ತು ಬಾಂಬ್ ನಿಷ್ಕ್ರಿಯ ದಳ (Bomb Deffusal Squad) ಸ್ಥಳಕ್ಕೆ ಬಂದಿದೆ. ಆದರೆ ಜೀವಂತ ಬಾಂಬನ್ನು ನಿಷ್ಕ್ರಿಯಗೊಳಿಸಲು ಅವರಿಗೂ ಸಾಧ್ಯವಾಗಿಲ್ಲ. ಕೇವಲ ಭಯೋತ್ಪಾದನಾ ನಿಗ್ರಹ ದಳ (Anti Terrorist Squad) ಮಾತ್ರ ಬಾಂಬನ್ನು ನಿಷ್ಕ್ರಿಯಗೊಳಿಸಲು ಸಾಧ್ಯ ಎಂದು ಬಾಂಬ್ ಸ್ಕ್ವಾಡ್ ತಂಡ ತಿಳಿಸಿದೆ. ಇದಾದ ನಂತರ ಭಯೋತ್ಪಾದನಾ ನಿಗ್ರಹ ದಳದ ತಂಡ ಸ್ಥಳಕ್ಕೆ ಬಂದು, ಬಾಂಬ್ ನಿಷ್ಕ್ರಿಯಗೊಳಿಸಿದ್ದಾರೆ.
ಇದನ್ನೂ ಓದಿ: 1.16 ಕೋಟಿ ವಾಪಾಸ್ ಕೇಳಿದ ವೈದ್ಯನ ಹನಿಟ್ರ್ಯಾಪ್ ಮಾಡಿ ಮತ್ತಷ್ಟು ಸುಲಿಗೆ!
ಸುಮಾರು ಎರಡು ಗಂಟೆಯವರೆಗೂ ಕೋರ್ಟ್‌ನಲ್ಲಿದ್ದ ಜನ ಮತ್ತು ಸಿಬ್ಬಂದಿಯನ್ನು ಆಚೆ ಕಳಿಸಲಾಯಿತು. ಭಯೋತ್ಪಾದನಾ ನಿಗ್ರಹದಳ ಸ್ಥಳಕ್ಕೆ ತಲುಪಲು ಎರಡು ಗಂಟೆ ಸಮಯಾವಕಾಶ ಬೇಕಾಗಿತ್ತು. ಬಾಂಬ್ ನಿಷ್ಕ್ರಿಯಗೊಳಿಸುವವರೆಗೂ ಇಡೀ ಕೋರ್ಟ್ ಆವರಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ನಂತರ ಆಂಟಿ ಟೆರರಿಸ್ಟ್ ಸ್ಕ್ವಾಡ್ ತಂಡ ಬಾಂಬನ್ನು ನಿಷ್ಕ್ರಿಯಗೊಳಿಸಿದೆ.
ಪೊಲೀಸರು ತಂದಿದ್ದ ಬಾಂಬ್ ಸರಿಯಾಗಿ ನಿಷ್ಕ್ರಿಯಗೊಳಿಸಿರಲಿಲ್ಲವಾ, ಜೀವಂತ ಬಾಂಬನ್ನು (Live Bombs) ಕೋರ್ಟ್‌ಗೆ ಹೇಗೆ ತಂದರು ಎಂಬ ಬಗ್ಗೆ ಇದೀಗ ತನಿಖೆ ಆರಂಭವಾಗಿದೆ. ಸಾಮಾನ್ಯವಾಗಿ ಬಾಂಬ್ ನಿಷ್ಕ್ರಿಯಗೊಂಡಿದ್ದರೆ ಮಾತ್ರ ಸಾಕ್ಷಿಗಾಗಿ ಕೋರ್ಟ್‌ಗೆ ತರಬೇಕು. ಯಾಕೆಂದರೆ ಇದೇ ರೀತಿ ಅವಗಢವಾದರೆ ಎಂಬ ಭಯವಿರುತ್ತದೆ. ಈ ಘಟನೆಯಲ್ಲಿ ಪೊಲೀಸರಿಗೂ ಬಾಂಬ್ ನಿಷ್ಕ್ರಿಯಗೊಂಡಿದೆಯಾ ಇಲ್ಲವಾ ಎಂಬುದು ತಿಳಿದಿರಲಿಲ್ಲವೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bengaluru; ಸಾಲ ಕಟ್ಟದ್ದಕ್ಕೆ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ, ಮೂವರ ಬಂಧನ
ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಬಾಂಬ್ ಏನಾದರೂ ಸ್ಫೋಟಗೊಂಡಿದ್ದರೆ ಇನ್ನಷ್ಟು ಹಾನಿಯಾಗುವ ಸಾಧ್ಯತೆಯಿತ್ತು ಎನ್ನಲಾಗಿದೆ.
