Asianet Suvarna News Asianet Suvarna News

1.16 ಕೋಟಿ ವಾಪಾಸ್ ಕೇಳಿದ ವೈದ್ಯನ ಹನಿಟ್ರ್ಯಾಪ್ ಮಾಡಿ ಮತ್ತಷ್ಟು ಸುಲಿಗೆ!

* ತಮ್ಮ ಪುತ್ರನಿಗೆ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ

* ಹಣ ಮರಳಿಸುವಂತೆ ಕೇಳಿದ್ದಕ್ಕೆ ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದ ಆರೋಪಿಗಳು

* ವೈದ್ಯಕೀಯ ಸೀಟು ಕೊಡಿಸುವುದಾಗಿ .1.16 ಕೋಟಿ ವಂಚನೆ: ಐವರ ಸೆರೆ

Karnataka doctor honey trapped, robbed of 1 16 crore pod
Author
Bangalore, First Published Jul 2, 2022, 6:51 AM IST

ಬೆಂಗಳೂರು(ಜು. 02): ತಮ್ಮ ಪುತ್ರನಿಗೆ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ವಸೂಲಿ ಮಾಡಿದ್ದ .1.16 ಕೋಟಿ ಮರಳಿಸುವಂತೆ ಕೇಳಿದ ಕಲಬುರಗಿ ಜಿಲ್ಲೆಯ ವೈದ್ಯರೊಬ್ಬರನ್ನು ವೇಶ್ಯೆಯರ ಮೂಲಕ ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದ ದುಷ್ಟಕೂಟವೊಂದು ಸಿಸಿಬಿಗೆ ಸೆರೆಯಾಗಿದೆ.

ಕಲಬುರಗಿ ಜಿಲ್ಲೆಯ ನಾಗರಾಜ್‌, ಮಲ್ಲಿಕಾರ್ಜುನ್‌, ಮಧು, ಬಸವರಾಜ್‌ ಹಾಗೂ ಹಮೀದ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಕಲಬರುಗಿ ಜಿಲ್ಲೆ ಆಳಂದ ತಾಲೂಕಿನ ತಮ್ಮ ಪರಿಚಿತ ವೈದ್ಯರೊಬ್ಬರಿಗೆ ಈ ಆರೋಪಿಗಳು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮನೆಪಾಠದ ಮೇಷ್ಟೆ್ರೕ ಸಂಚುಕೋರ:

ಏಳೆಂಟು ವರ್ಷಗಳಿಂದ ಆಳಂದ ತಾಲೂಕಿನಲ್ಲಿ ಆರ್‌ಎಂಪಿ ವೈದ್ಯ ಹಾಗೂ ಆರೋಪಿ ನಾಗರಾಜು ಪರಿಚಿತರು. ಮೊದಲು ಖಾಸಗಿ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕನಾಗಿದ್ದ ನಾಗರಾಜ್‌, ತನ್ನ ಮನೆಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮನೆಪಾಠ ಸಹ ಮಾಡುತ್ತಿದ್ದ. ಆಗ ಆತನ ಬಳಿ ವೈದ್ಯನ ಪುತ್ರ ಮನೆ ಪಾಠಕ್ಕೆ ಹೋಗುತ್ತಿದ್ದ. ಹೀಗಾಗಿ ಅಂದಿನಿಂದಲೂ ವೈದ್ಯರ ಕುಟುಂಬದ ಜತೆ ನಾಗರಾಜ್‌ಗೆ ಆತ್ಮೀಯತೆ ಇತ್ತು. 2021ರಲ್ಲಿ ಪಿಯುಸಿ ಮುಗಿಸಿದ ಬಳಿಕ ಮಗನನ್ನು ಮೆಡಿಕಲ್‌ ಓದಿಸಲು ದೂರುದಾರ ವೈದ್ಯ ಪ್ರಯತ್ನಿಸಿದ್ದರು. ಈ ವಿಚಾರ ತಿಳಿದ ನಾಗರಾಜ್‌, ತಾನು ಬೆಂಗಳೂರಿನಲ್ಲಿ ನಿಮಗೆ ಮಗನಿಗೆ ಸೀಟು ಕೊಡಿಸುವುದಾಗಿ ನಂಬಿಸಿದೆ. ಕೊನೆಗೆ ಎಂ.ಎಸ್‌.ರಾಮಯ್ಯ ಕಾಲೇಜಿನಲ್ಲಿ ಆಡಳಿತ ಕೋಟಾದಡಿ ಸಿಟ್ಟು ಖಚಿತವಾಗಿತ್ತು. ಮೊದಲ ಮುಂಗಡವಾಗಿ ಕಾಲೇಜಿಗೆ 1.75 ಲಕ್ಷ ರು. ಪಾವತಿಸಿ ನೊಂದಣಿ ಮಾಡಿಸಿದ ಅವರು, ಇನ್ನುಳಿದ 66 ಲಕ್ಷ ರು. ಹಣವನ್ನು ಪಾವತಿಸಲು ಬೇಕಿತ್ತು.

ಆಗ ತಾನೇ ಡಿಡಿ ತೆಗೆದುಕೊಂಡು ಹಣ ಪಾವತಿಸುವುದಾಗಿ ನಂಬಿಸಿದ ನಾಗರಾಜ್‌, ವೈದ್ಯನಿಂದ 66 ಲಕ್ಷ ರು. ಪಡೆದು ಕಾಲೇಜಿಗೆ ಪಾವತಿಸದೆ ವಂಚಿಸಿದ್ದ. ಇದರಿಂದ ವೈದ್ಯನ ಪುತ್ರನಿಗೆ ಕಾಲೇಜಿನಲ್ಲಿ ಪ್ರವೇಶ ಸಿಗಲಿಲ್ಲ. ಇದರಿಂದ ಬೇಸರಗೊಂಡ ವೈದ್ಯ, ತಮ್ಮ ಸ್ನೇಹಿತ ನಾಗರಾಜ್‌ಗೆ ಹಣ ಮರಳಿಸುವಂತೆ ಸೂಚಿಸಿದರು. ಆಗ ಏನೇನೂ ಸಬೂಬು ಹೇಳಿದ ಆತ, ಕೊನೆಗೆ ವೈದ್ಯನನ್ನು ಮುಂಬೈನ ವೇಶ್ಯೆಯರ ಮೂಲಕ ಹನಿಟ್ರ್ಯಾಪ್‌ ಬಲೆಗೆ ಬೀಳಿಸಲು ಸಂಚು ರೂಪಿಸಿದ. ಇದಕ್ಕೆ ಇನ್ನುಳಿದವರು ಸಾಥ್‌ ಕೊಟ್ಟಿದ್ದಾರೆ ಎಂದು ಸಿಸಿಬಿ ಹೇಳಿದೆ.

ರೈಲಿನಲ್ಲೇ ವೈದ್ಯನಿಗೆ ವೇಶ್ಯೆಯರ ಗಾಳ:

ಪೂರ್ವಯೋಜಿತ ಸಂಚಿನಂತೆ 2022ರ ಜನವರಿಯಲ್ಲಿ ವೈದ್ಯನಿಗೆ ಹಣ ಕೊಡುವುದಾಗಿ ಹೇಳಿ ಬೆಂಗಳೂರಿಗೆ ಬರುವಂತೆ ನಾಗರಾಜ್‌ ತಿಳಿಸಿದ್ದ. ಈ ಮಾತಿಗೆ ಒಪ್ಪಿದ ವೈದ್ಯ, ಹಣ ಪಡೆಯಲು ರೈಲಿನಲ್ಲಿ ಕಲಬುರಗಿಯಿಂದ ರೈಲಿನಲ್ಲಿ ಹೊರಟ್ಟಿದ್ದರು. ಮುಂಬೈನಿಂದ ತನ್ನ ಸಂಪರ್ಕದಲ್ಲಿದ್ದ ಇಬ್ಬರು ವೇಶ್ಯೆಯರನ್ನು ಕರೆಸಿಕೊಂಡ ನಾಗರಾಜ್‌, ಸೊಲ್ಲಾಪುರದಲ್ಲಿ ವೈದ್ಯ ಪ್ರಯಾಣಿಸುತ್ತಿದ್ದ ರೈಲಿಗೆ ಆ ಇಬ್ಬರು ವೇಶ್ಯೆಯರನ್ನು ಹತ್ತಿಸಿದ್ದ. ಆಗ ನಾಜೂಕಿನ ಮಾತು ಮೂಲಕ ಸಹ ಪ್ರಯಾಣಿಕ ವೈದ್ಯನನ್ನು ತಮ್ಮ ಪಾಶಕ್ಕೆ ವೇಶ್ಯೆಯರು ಬೀಳಿಸಿದ್ದರು.

ಸಿಸಿಬಿ ಹೆಸರಿನಲ್ಲಿ ಲಾಡ್ಜ್‌ ಮೇಲೆ ದಾಳಿ:

ಮೊದಲೇ ವೈದ್ಯನಿಗೆ ಮೆಜೆಸ್ಟಿಕ್‌ ಸಮೀಪದ ಯು.ಟಿ.ಲಾಡ್ಜ್‌ನಲ್ಲಿ ಆರೋಪಿ ನಾಗರಾಜ್‌ ಕೊಠಡಿ ಕಾಯ್ದಿರಿಸಿದ್ದ. ಇದೇ ಕೊಠಡಿಗೆ ವೇಶ್ಯೆಯರ ಜತೆ ವೈದ್ಯ ಬಂದಿದ್ದಾನೆ. ಆಗ ಅವರ ಪಕ್ಕದ ರೂಮ್‌ನಲ್ಲೇ ತಂಗಿದ್ದ ನಾಗರಾಜ್‌, ತನ್ನ ಸಹಚರರಿಗೆ ನಕಲಿ ವಾಕಿಟಾಕಿ ಕೊಟ್ಟು ಸಿಸಿಬಿ ಪೊಲೀಸರ ಸೋಗಿನಲ್ಲಿ ವೈದ್ಯನ ತಂಗಿದ್ದ ರೂಮ್‌ಗೆ ದಾಳಿ ಮಾಡಿಸಿದ್ದ. ನೀವು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂದು ಬೆದರಿಸಿದ ಆರೋಪಿಗಳು, ಆ ಕೊಠಡಿಯಲ್ಲಿ ವೈದ್ಯನ ಅಕ್ಕಪಕ್ಕ ವೇಶ್ಯೆಯರನ್ನು ನಿಲ್ಲಿಸಿ ಪೋಟೋ ತೆಗೆಸಿದ್ದ. ಬಳಿಕ ವೈದ್ಯನಿಗೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 35 ಸಾವಿರ ರು. ಹಣ ಹಾಗೂ ಚಿನ್ನಾಭರಣ ದೋಚಿದ್ದರು. ಆ ವೇಳೆ ನೆರವು ನೀಡುವ ನೆಪದಲ್ಲಿ ಮತ್ತೊಬ್ಬ ಬಂದು, ವೈದ್ಯನಿಗೆ ಪೊಲೀಸರ ಜತೆ ಮಾತನಾಡಿ ಪ್ರಕರಣ ದಾಖಲಾಗದಂತೆ ಮಾಡುತ್ತೇನೆ ಎಂದು ಹೇಳಿ 70 ಲಕ್ಷ ರು. ನೀಡುವಂತೆ ಬೇಡಿಕೆ ಇಟ್ಟಿದ್ದರು.

ಆಸ್ತಿ ಅಡಮಾನವಿಟ್ಟು ಹಣ ಕೊಟ್ರು:

ಮರ್ಯಾದೆಗೆ ಅಂಜಿದ ವೈದ್ಯರು, ಕೊನೆಗೆ ಆರೋಪಿಗಳನ್ನು ಕಲಬುರಗಿ ಕರೆದೊಯ್ದು ಸಹಕಾರ ಬ್ಯಾಂಕ್‌ನಲ್ಲಿ ಆಸ್ತಿ ಪತ್ರ ಅಡಮಾನವಿಟ್ಟು 50 ಲಕ್ಷ ರು. ಕೊಟ್ಟಿದ್ದರು. ಇದಾದ ಬಳಿಕ ಮತ್ತೆ 20 ಲಕ್ಷ ರು. ಕೊಡುವಂತೆ ವೈದ್ಯನಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದರು. ಇದಕ್ಕೆ ಸೊಪ್ಪು ಹಾಕದೆ ಹೋದಾಗ ವೈದ್ಯನ ಮನೆಗೆ ಪೊಲೀಸರ ಸೋಗಿನಲ್ಲಿ ತೆರಳಿ ಕರೆದೊಯ್ಯಲು ಯತ್ನಿಸಿದ್ದರು. ಆಗ ವೈದ್ಯ ರಕ್ಷಣೆಗೆ ಕೂಗಿದಾಗ ನೆರೆಹೊರೆಯರು ಜಮಾಯಿಸಿದ್ದರಿಂದ ಭಯಗೊಂಡು ಆರೋಪಿಗಳು ಪರಾರಿಯಾಗಿದ್ದರು. ಆ ವೇಳೆ ಪರಾರಿಯಾದವರ ಜತೆ ನಾಗರಾಜ್‌ ಸೋದರ ಸಹ ಇರುವುದನ್ನು ನೋಡಿದ ಸಂತ್ರಸ್ತ ವೈದ್ಯರು, ತಾವು ಮೋಸ ಹೋಗಿರುವುದು ಅರಿವಾಗಿದೆ. ಕೊನೆಗೆ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದರು. ಅದರನ್ವಯ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.

Follow Us:
Download App:
  • android
  • ios