Asianet Suvarna News Asianet Suvarna News

ಕ್ರಿಯೇಟಿವಿಟಿ ಹೆಸರಲ್ಲಿ Gang Rape ಸಂಸ್ಕೃತಿಗೆ ಕುಮ್ಮಕ್ಕು: ಜಾಹಿರಾತು ನಿಷೇಧ, ತನಿಖೆಗೆ ಆದೇಶ

Layer Shot Body Spray Ad Banned: ಕ್ರಿಯೇಟಿವಿಟಿ ಹೆಸರಲ್ಲಿ ಹೊಸ ವಿವಾದ ಸೃಷ್ಟಿಸಿದ ಬಾಡಿ ಸ್ಪ್ರೇ ಜಾಹಿರಾತನ್ನು ನಿಷೇಧಿಸಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಆದೇಶಿಸಿದೆ. ಲೇಯರ್‌ ಶಾಟ್‌ ಸುಗಂಧ ದ್ರವ್ಯದ ಜಾಹಿರಾತಿನಲ್ಲಿ ಗ್ಯಾಂಗ್‌ ರೇಪ್‌ ಸಂಸ್ಕೃತಿಯನ್ನು ಪ್ರಚೋದಿಸುವ ಅಂಶಗಳಿವೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿತ್ತು. 

Body spray ad promotes gang rape culture government bans orders probe
Author
Bengaluru, First Published Jun 4, 2022, 4:26 PM IST | Last Updated Jun 4, 2022, 4:27 PM IST

ನವದೆಹಲಿ: ಪ್ರಾಡಕ್ಟ್‌ಗಳನ್ನು ಮಾರುವ ಸಲುವಾಗಿ ಜಾಹಿರಾತುಗಳನ್ನು ಎಲ್ಲ ಹೆಸರಾಂತ ಸಂಸ್ಥೆಗಳೂ ಮಾಡುತ್ತವೆ. ಕೆಲವೊಂದು ಜಾಹಿರಾತುಗಳು ಎಂದಿಗೂ ಮರೆಯದೇ ನಮ್ಮ ಮನಸ್ಸಲ್ಲಿ ಉಳಿದು ಬಿಡುತ್ತದೆ. ಆದರೆ ಕೆಲ ಜಾಹಿರಾತುಗಳು ಪ್ರಾಡಕ್ಟ್‌ ಮಾರುವ ಸಲುವಾಗಿ ಕೀಳು ಮಟ್ಟದ ಅಭಿರುಚಿಗೆ ಪ್ರಚಾರ ಕೊಡುತ್ತವೆ. ಅಂಥದ್ದೇ ಒಂದು ಜಾಹಿರಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಲೇಯರ್‌ ಶಾಟ್‌ ಎಂಬ ಪರ್ಫ್ಯೂಮ್‌ ನಿರ್ಮಾಣ ಸಂಸ್ಥೆಯ ಜಾಹಿರಾತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ಜತೆಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್‌ ಕೂಡ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಪತ್ರ ಬರೆದಿದ್ದಾರೆ. 
 

"ಗ್ಯಾಂಗ್‌ ರೇಪ್‌ ಸಂಸ್ಕೃತಿಯನ್ನು ಬಿತ್ತುವ ಜಾಹಿರಾತನ್ನು ಪರ್ಫ್ಯೂಮ್‌ ಸಂಸ್ಥೆ ಮಾಡುತ್ತಿದೆ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಜಾಹಿರಾತನ್ನು ನಿಷೇಧಿಸಬೇಕು," ಎಂದು ಸ್ವಾತಿ ಮಳಿವಾಲ್‌ ಪತ್ರದಲ್ಲಿ ಠಾಕೂರ್‌ಗೆ ತಿಳಿಸಿದ್ದಾರೆ. ದೆಹಲಿ ಮಹಿಳಾ ಆಯೋಗ ಜಾಹಿರಾತಿನ ಸಂಬಂಧ ಸ್ವಯಂ ಪ್ರೇರಿತ ಪ್ರಕರಣವನ್ನು ಈಗಾಗಲೇ ದಾಖಲು ಮಾಡಿಕೊಂಡಿದ್ದು, ಕೇಂದ್ರ ಸರ್ಕಾರ ಜಾಹಿರಾತು ಬಿತ್ತರಿಸಿದ ಸಂಸ್ಥೆಯ ಮೇಲೆ ಸೂಕ್ತ ಕ್ರಮ ಜಾರಿಗೊಳಿಸುವಂತೆ ಕೋರಿದೆ. ದೆಹಲಿ ಪೊಲೀಸರಿಗೂ ಆಯೋಗ ನೊಟೀಸ್‌ ಜಾರಿ ಮಾಡಿದ್ದು, ಪರ್ಫ್ಯೂಮ್‌ ಮತ್ತು ಜಾಹಿರಾತು ಸಂಸ್ಥೆಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದೆ. ಜತೆಗೆ ಜಾಹಿರಾತಿನ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆಯೂ ಕೋರಿದೆ. ಜೂನ್‌ 9ರ ಒಳಗೆ ಈ ಸಂಬಂಧ ವರದಿಯನ್ನು ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಆದೇಶಿಸಲಾಗಿದೆ. 

ಜಾಹಿರಾತಲ್ಲಿ ಏನಿದೆ?:
ಜಾಹಿರಾತಿನಲ್ಲಿ, ಒಂದು ಹುಡುಗ ಮತ್ತು ಹುಡುಗಿ ರೂಮಿನ ಹಾಸಿಗೆಯ ಮೇಲೆ ಕುಳಿತಿರುತ್ತಾರೆ. ಅಲ್ಲಿಗೆ ನಾಲ್ಕು ಜನ ಹುಡುಗರು ಒಳ ಬರುತ್ತಾರೆ. ಅದರಲ್ಲಿ ಒಬ್ಬ ಒಳಗಿದ್ದ ಹುಡುಗನ ಬಳಿ "ಶಾಟ್‌ ಹೊಡೆದ್ಯಾ?" ಅಂತ ಕೇಳುತ್ತಾನೆ. ಅದಕ್ಕೆ ಹುಡುಗ, "ಹೌದು ಹೊಡೆದ್ನಲ್ಲ," ಅನ್ನುತ್ತಾನೆ. ನಾಲ್ವರು ಹುಡುಗರಲ್ಲಿ ಒಬ್ಬ ಹುಡುಗ ಇದಕ್ಕೆ ಪ್ರತಿಕ್ರಿಯೆಯಾಗಿ "ಹಾಗಾದ್ರೆ ಈಗ ನಮ್ಮ ಬಾರಿ," ಎನ್ನುತ್ತ ಹುಡುಗಿಯ ಬಳಿ ಹೋಗುತ್ತಾನೆ. ಹುಡುಗಿ ಕೊಂಚ ಗಲಿಬಿಲಿಯಾಗುತ್ತಾಳೆ. ನಂತರ ಹುಡುಗ ಮುಂದೆ ಹೋಗಿ "ಶಾಟ್‌" ಬಾಡಿ ಸ್ಪ್ರೇ ತೆಗೆದುಕೊಳ್ಳುತ್ತಾನೆ. ಹುಡುಗಿ ಆಗ ನಿರಾಳಳಾಗುತ್ತಾಳೆ. 

ಇದನ್ನೂ ಓದಿ: ಹೆಣ್ಣು ಹೆತ್ತಿದ್ದಕ್ಕೆ ಸೊಸೆಯನ್ನು ಅಮಾನವೀಯವಾಗಿ ಥಳಿಸಿದ ಕುಟುಂಬ

ಇದೇ ರೀತಿಯ ಇನ್ನೊಂದು ಜಾಹಿರಾತಿನಲ್ಲಿ ನಾಲ್ಕು ಹುಡುಗರು ಶಾಪಿಂಗ್‌ ಮಾಲಿಗೆ ಹೋಗುತ್ತಾರೆ. ಅಲ್ಲಿ ಹುಡುಗಿಯೊಬ್ಬಳು ಗ್ರಾಸರಿ ಕೊಳ್ಳುತ್ತಿರುತ್ತಾಳೆ. ಅವರ ಹಿಂದೆ ಈ ಹುಡುಗರು ಹೋಗುತ್ತಾರೆ. ಅದರಲ್ಲಿ ಒಬ್ಬ "ನಾವು ನಾಲ್ಕು ಜನ, ಆದರೆ ಇವಳು ಒಬ್ಬಳೇ. ಶಾಟ್‌ ಯಾರು ಹೊಡೆಯೋದು," ಎನ್ನುತ್ತಾನೆ. ಹುಡುಗಿ ಭಯಗೊಂಡು ಹಿಂದೆ ತಿರುಗುತ್ತಾಳೆ. ಆಗ ನಾಲ್ವರಲ್ಲಿ ಒಬ್ಬ ಹುಡುಗ ಶಾಟ್‌ ಬಾಡಿ ಸ್ಪ್ರೇ ಎತ್ತಿಕೊಳ್ಳುತ್ತಾನೆ. 

ಮಹಿಳಾ ಆಯೋಗ ಏನು ಹೇಳತ್ತೆ?:
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್‌ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಹೇಳಿರುವ ಪ್ರಕಾರ ಪ್ರತಿಯೊಂದು ಜಾಹಿರಾತು ತೆರೆಯ ಮೇಲೆ ಬರುವ ಮುನ್ನ ಸೆನ್ಸಾರ್‌ ಆಗಬೇಕು. ಆಗ ಮಾತ್ರ ಈ ರೀತಿಯ ವಿಕೃತ ಗ್ಯಾಂಗ್‌ ರೇಪ್‌ ಪ್ರವೃತ್ತಿಯ ಜಾಹಿರಾತನ್ನು ತಡೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಒಂದು ವ್ಯವಸ್ಥೆಯನ್ನು ಸೃಷ್ಟಿ ಮಾಡುವಂತೆ ಸ್ವಾತಿ ಮಳಿವಾಲ್‌ ಕೋರಿದ್ದಾರೆ. 

ಇದನ್ನೂ ಓದಿ: ನಾನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ವ್ಯಕ್ತಿ ಎಂದು ಸ್ಕೂಲ್ ಆಪರೇಟರ್ ಗೆ ಬಂತು ಬೆದರಿಕೆ ಕರೆ!

ಜಾಹಿರಾತು ಬ್ಯಾನ್‌ ಮಾಡಿದ ಕೇಂದ್ರ:
ಈ ಬಗ್ಗೆ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಜಾಹಿರಾತನ್ನು ನಿಷೇಧಿಸಿ ಆದೇಶಿಸಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದ್ದು, ವಿವಾದಕ್ಕೆ ಕಾರಣವಾಗಿರುವ ಬಾಡಿ ಸ್ಪ್ರೇ ಜಾಹಿರಾತನ್ನು ನಿಷೇಧಿಸಿದೆ, ಜತೆಗೆ ಈ ಸಂಬಂಧ ತನಿಖೆಗೂ ಆದೇಶಿಸಿದೆ.

Latest Videos
Follow Us:
Download App:
  • android
  • ios