ಭಾನುವಾರ ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ, ಸೋಮವಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಿಎಂ ಆಯ್ಕೆ ಅಂತಿಮವಾಗುವ ನಿರೀಕ್ಷೆ ಇದೆ.

ನವದೆಹಲಿ (ಡಿಸೆಂಬರ್ 10, 2023): ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿರುವ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಶೀಘ್ರವೇ ತೆರೆ ಬೀಳಲಿದೆ. ಭಾನುವಾರ ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ, ಸೋಮವಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಿಎಂ ಆಯ್ಕೆ ಅಂತಿಮವಾಗುವ ನಿರೀಕ್ಷೆ ಇದೆ.

ಛತ್ತೀಸ್‌ಗಢದಲ್ಲಿ ಸಿಎಂ ಆಯ್ಕೆಗೆ ಬಿಜೆಪಿ ನೇಮಿಸಿದ್ದ ಮೂವರು ವೀಕ್ಷಕರಾದ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಮತ್ತು ಸರ್ಬಾನಂದ ಸೋನೋವಾಲ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಶನಿವಾರ ಸಂಜೆ ರಾಯಪುರಕ್ಕೆ ದೌಡಾಯಿಸಿದ್ದಾರೆ. ಭಾನುವಾರ ರಾಜ್ಯದ 54 ಬಿಜೆಪಿ ಶಾಸಕರು ಹಾಗೂ ಪಕ್ಷದ ಪ್ರಮುಖರೊಂದಿಗೆ ಸಿಎಂ ಆಯ್ಕೆ ಕುರಿತು ಸಭೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಗೋಮತಿ ಸಾಯಿ, ರೇಣುಕಾ ಸಿಂಗ್‌, ರಾಜ್ಯ ಬಿಜೆಪಿ ಮುಖ್ಯಸ್ಥ ವಿಷ್ಣು ಸಾವೊ, ಒ.ಪಿ. ಚೌಧರಿ, ರಾಮವಿಚಾರ್ ನೇತಮ್ ಸೇರಿ ಹಲವರು ಸಿಎಂ ರೇಸ್‌ನಲ್ಲಿದ್ದಾರೆ.

ಇದನ್ನು ಓದಿ: ಲೋಕ ಚುನಾವಣೆ ಗೆಲ್ಲಲು ‘ಕೈ’ ಪಣ: 4 ರಾಜ್ಯಗಳಲ್ಲಿನ ಸೋಲಿನ ಪರಾಮರ್ಶೆ ನಡೆಸಿದ ಕಾಂಗ್ರೆಸ್‌ ನಾಯಕರು

ರಾಜಸ್ಥಾನದಲ್ಲೂ 3 ಕೇಂದ್ರೀಯ ಬಿಜೆಪಿ ವೀಕ್ಷಕರಾದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌, ಪಕ್ಷದ ಉಪಾಧ್ಯಕ್ಷ ಸರೋಜ್‌ ಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ 115 ಬಿಜೆಪಿ ಶಾಸಕರೊಂದಿಗೆ ಭಾನುವಾರ ಸಭೆ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಜಸ್ಥಾನದ ಯೋಗಿ ಎಂದೇ ಕರೆಯಲಾಗುತ್ತಿರುವ ಬಾಬಾ ಬಾಲಕ್‌ನಾಥ್‌, ಗಜೇಂದ್ರ ಸಿಂಗ್‌ ಶೆಖಾವತ್‌, ಅರ್ಜುನ್‌ ಮೇಘ್ವಾಲ್‌ ಮತ್ತು ದಿಯಾ ಕುಮಾರಿ ಸೇರಿ ಹಲವರು ಸಿಎಂ ರೇಸ್‌ನಲ್ಲಿದ್ದಾರೆ.

ಮಧ್ಯಪ್ರದೇಶಕ್ಕೆ ಬಿಜೆಪಿ ವೀಕ್ಷಕರಾದ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್‌ ಹಾಗೂ ಕಾರ್ಯದರ್ಶಿ ಆಶಾ ಲಕ್ರಾ ದೌಡಾಯಿಸಲಿದ್ದು, ಸೋಮವಾರ ಸಂಜೆ 163 ಬಿಜೆಪಿ ಶಾಸಕರ ಸಭೆ ನಡೆಸಲಿದ್ದಾರೆ. ಹಾಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮತ್ತು ಚುನಾವಣೆ ಗೆಲುವಿನ ಬಳಿಕ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರಹ್ಲಾದ್‌ ಪಟೇಲ್‌ ಮತ್ತು ನರೇಂದ್ರ ತೋಮರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಮತ್ತು ಬಿಜೆಪಿ ಅಧ್ಯಕ್ಷ ವಿ.ಡಿ. ವರ್ಮಾ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ.

ಚುನಾವಣೆ ಗೆಲ್ಲಲು ಜನರ ಹೃದಯ ಗೆಲ್ಲಬೇಕು: ಪ್ರಧಾನಿ ಮೋದಿ