ಇವಿಎಂ ಮತಯಂತ್ರದ ದುರುಪಯೋಗ ಸಾಧ್ಯ ಎಂದ ಬಿಜೆಪಿ ನಾಯಕ| ಇವಿಎಂ ಮತಯಂತ್ರವನ್ನು ಹ್ಯಾಕ್ ಮಾಡಬಹುದು ಎಂದ ಕಮಲ ನಾಯಕ| ಪ.ಬಂಗಾಳದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು| ಬಿಜೆಪಿ ಸೋಲಿಗೆ ಮತಯಂತ್ರ ಹ್ಯಾಕ್ ಮಾಡಿದ್ದೇ ಕಾರಣ ಎಂದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ| ಚುನಾವಣಾ ಆಯೊಗಕ್ಕೆ ದೂರು ನೀಡುವುದಾಗಿ ಹೇಳಿದ ರಾಹುಲ್ ಸಿನ್ಹಾ|
ಕೋಲ್ಕತ್ತಾ(ನ.29): ಲೋಕಸಭೆಯೂ ಸೇರಿದಂತೆ ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆ ನಡೆದು ಬಿಜೆಪಿ ಜಯಗಳಿಸಿದರೆ, ಇವಿಎಂ ಮತಯಂತ್ರ ದುರುಪಯೋಗ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುವುದು ಸಾಮಾನ್ಯ.
ಇದೇ ಕಾರಣಕ್ಕೆ ಇವಿಎಂ ಮತಯಂತ್ರ ಹ್ಯಾಕ್ ಮಾಡಲು ಸಾಧ್ಯವೇ ಎಂಬ ಚರ್ಚೆ ದೇಶದಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ. ಚುನಾವಣಾ ಆಯೋಗದ ಸ್ಪಷ್ಟ ನಕಾರದ ಹೊರತಾಗಿಯೂ ಈ ಚರ್ಚೆಗಳಿಗೆ ಬರವಿಲ್ಲ.
ಆದರೆ ಪ.ಬಂಗಾಳದಲ್ಲಿ ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಭರ್ಜರಿ ಜಯಗಳಿಸಿದ್ದು, ಚುನಾವಣೆ ನಡೆದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಮಕಾಡೆ ಮಲಗಿದೆ.
'ಎಲ್ಲಾ ಇವಿಎಂ ಪವಾಡ, ತಾಕತ್ತಿದ್ದರೆ ಮೋದಿ ಬ್ಯಾಲೆಟ್ ಪೇಪರ್ ಬಳಸಿ ಗೆಲ್ಲಲಿ'
ಚುನಾವಣೆಯಲ್ಲಿ ಬಿಜೆಪಿಯ ಅಹಂಕಾರವನ್ನು ಮಣಿಸಿರುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಬೀಗುತ್ತಿದ್ದಾರೆ. ಆದರೆ ಟಿಎಂಸಿ ಚುನಾವಣೆ ಗೆಲ್ಲಲು ಇವಿಎಂ ಮತಯಂತ್ರ ದುರುಪಯೋಗವೇ ಕಾರಣ ಎಂದು ಬಿಜೆಪಿ ನಾಯಕರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪ.ಬಂಗಾಳದ ಬಿಜೆಪಿ ನಾಯಕ ರಾಹುಲ್ ಸಿನ್ಹಾ, ಉಪಚುನಾವಣೆಯಲ್ಲಿ ಇವಿಎಂ ಮತಯಂತ್ರದ ದುರುಪಯೋಗ ನಡೆದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಕ್ವಿಟ್ ಇಂಡಿಯಾ ವರ್ಷಾಚರಣೆಯಂದು ಇವಿಎಂ ತೊಲಗಿಸಿ ಆಂದೋಲನ!
ಇವಿಎಂ ಮತಯಂತ್ರದಲ್ಲಿ ಏನು ಬೇಕಾದರೂ ಮೋಸ ಮಾಡಬಹುದು ಎಂದು ರಾಹುಲ್ ಸಿನ್ಹಾ ಹೇಳಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.
ಇನ್ನು ರಾಹುಲ್ ಸಿನ್ಹಾ ಹೇಳಿಕೆಯನ್ನು ಸ್ವಾಗತಿಸಿರುವ ಟಿಎಂಸಿ, ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಒಪ್ಪಿಕೊಂಡ ರಾಹುಲ್ ಸಿನ್ಹಾಗೆ ಧನ್ಯವಾದ ಎಂದು ಕಿಚಾಯಿಸಿದೆ.
ಇವಿಎಂ ದೂರುವುದು ಹೊಸ ಕಾಯಿಲೆ: ವಿಪಕ್ಷಗಳ ಕಾಲೆಳೆದ ಮೋದಿ!
ರಾಹುಲ್ ಸಿನ್ಹಾ ಹೇಳಿಕೆಯಿಂದ ಪೇಚಿಗೆ ಸಿಲುಕಿರುವ ಬಿಜೆಪಿ, ವಿಪಕ್ಷಗಳನ್ನು ಟೀಕಿಸಲಾರದೇ ಒದ್ದಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಸತ್ಯವಾಗಿದೆ.
