ಬೆಂಗಳೂರು[ನ.18]: ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸಿಕೊಂಡಿದ್ದೇ ಪ್ರಧಾನಿ ನರೇಂದ್ರ ಮೋದಿ ಪವಾಡ. ಮೋದಿಗೆ ದಮ್‌ ಹಾಗೂ ತಾಕತ್ತು ಇದರೆ ರಾಜೀನಾಮೆ ಕೊಟ್ಟು ಬ್ಯಾಲೆಟ್‌ ಪೇಪರ್‌ ಮೇಲೆ ಚುನಾವಣೆ ಗೆಲ್ಲಲಿ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಕಡೆಯಲ್ಲೂ ನರೇಂದ್ರ ಮೋದಿ ಸರ್ಕಾರದಿಂದ ವಿದ್ಯುನ್ಮಾನ ಮತಯಂತ್ರ ದುರ್ಬಳಕೆಯಾಗಿದೆ. ಹಲವು ಕಡೆ ಇದು ಸಾಬೀತು ಕೂಡ ಆಗಿದೆ. ಎಲ್ಲಾ ಕಡೆಯೂ ಇವಿಎಂ ಮೂಲಕ ಗೆಲ್ಲುತ್ತಿದ್ದರೆ ಅನುಮಾನ ಬರುತ್ತದೆ ಎಂಬ ಕಾರಣಕ್ಕೆ ಕೆಲವು ಕಡೆ ಸೋತಿದ್ದಾರೆ ಅಷ್ಟೇ. ಮೋದಿ ಪ್ರಧಾನಿಯಾಗಿದ್ದು ಇವಿಎಂ ಬಳಸಿಕೊಂಡೇ ಎಂದು ಗಂಭೀರ ಆರೋಪ ಮಾಡಿದರು.

ಸಾಲು ಸಾಲು ಅಕ್ರಮಗಳನ್ನು ಮಾಡಿರುವ ಅವರು ದೇಶದ ಅಭಿವೃದ್ಧಿಗೆ ಏನೂ ಮಾಡಿಲ್ಲ. ನೋಟ್‌ ಬ್ಯಾನ್‌ನಂತಹ ನಿರ್ಣಯಗಳಿಂದ ದೇಶವನ್ನು ಅಧೋಗತಿಗೆ ತಳ್ಳಿದ್ದಾರೆ. ಹೀಗಿದ್ದರೂ ಜನ ಏಕೆ ಮೋದಿಗೆ ಮತ ಹಾಕುತ್ತಾರೆ ಎಂದು ಪ್ರಶ್ನಿಸಿದರು. ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿಲ್ಲ ಎನ್ನುವುದು ಸರಿಯಲ್ಲ. ಹಾಗಾದರೆ, ರಫೇಲ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಒತ್ತಾಯ ಮಾಡಿದರು.