ಗೌತಮ್ ಅದಾನಿ ಜೊತೆಗೆ ರಾಬರ್ಟ್ ವಾದ್ರಾ ಸಂಬಂಧವೇನು? ಕಾಂಗ್ರೆಸ್‌ಗೆ ಪ್ರಶ್ನಿಸಿದ ಸ್ಮೃತಿ ಇರಾನಿ
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಚಿತ್ರಗಳನ್ನೇ ಆಧಾರವಾಗಿಟ್ಟುಕೊಂಡು ರಾಹುಲ್ ಗಾಂಧಿ, ಮೋದಿ-ಅದಾನಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದ್ದರು. ಅದಕ್ಕೆ ಬಿಜೆಪಿ ಅದೇ ರೀತಿಯಲ್ಲಿಯೇ ತಿರುಗೇಟು ನೀಡಿದೆ.
ನವದೆಹಲಿ (ಮಾ.28): ಅದಾನಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಬೆನ್ನುಬೆನ್ನಿಗೆ ಆರೋಪಗಳನ್ನು ಮಾಡುತ್ತಿದೆ. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಗೌತಮ್ ಅದಾನಿ ಜೊತೆಗೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದ ಚಿತ್ರವನ್ನು ತೋರಿಸಿದ್ದರು. ಒಂದೇ ಚಿತ್ರದ ಮೂಲಕ ಅದಾನಿ ಹಾಗೂ ಮೋದಿ ನಡುವೆ ಭ್ರಷ್ಟಾಚಾರದ ಆರೋಪ ಮಾಡಲಾಗದು ಎಂದು ಬಿಜೆಪಿ ಹೇಳುತ್ತಿದ್ದರೂ, ಕಾಂಗ್ರೆಸ್ ಮಾತ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿ ವಿರುದ್ಧ ಆರೋಪಗಳನ್ನು ಮುಂದುವರಿಸಿದೆ. ಈಗ ಬಿಜೆಪಿ ಕೂಡ ಕಾಂಗ್ರೆಸ್ ದಾರಿಯಲ್ಲಿಯೇ ಹೋಗಿ ಆರೋಪಗಳಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದೆ. ಕಳೆದ ತಿಂಗಳು ಸೋನಿಯಾ ಗಾಂಧಿ ಅವರ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಪತಿ ರಾಬರ್ಟ್ ವಾದ್ರಾ ಹಾಗೂ ಗೌತಮ್ ಅದಾನಿ ಜೊತೆಯಲ್ಲಿಯೇ ಇರುವ ಚಿತ್ರವನ್ನು ಪ್ರಕಟ ಮಾಡಿತ್ತು. ಈ ಕುರಿತಾಗಿ ಮಂಗಳವಾರ ಪ್ರಶ್ನೆ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಫೋಟೋಗಳನ್ನೇ ಸಾಕ್ಷ್ಯ ಎಂದು ನಂಬುವುದಾದರೆ, ಗೌತಮ್ ಅದಾನಿ ಜೊತೆ ರಾಬರ್ಟ್ ವಾದ್ರಾ ಯಾಕಿದ್ದಾರೆ ಎಂದೂ ಕೇಳಬಹುದಲ್ಲವೇ? ಎಂದು ಕಾಂಗ್ರೆಸ್‌ಅನ್ನು ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿಗೆ ಅದಾನಿ ಜೊತೆ ಸಮಸ್ಯೆ ಇದ್ದರೆ, ರಾಬರ್ಟ್ ವಾದ್ರಾ ಅದಾನಿ ಅವರ ಕೈಗಳನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿರುವ ಹಿಂದಿನ ಕಾರಣವೇನು ಎಂದು ನವದೆಹಲಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ ಮಾಡಿದ್ದಾರೆ. 2009ರಲ್ಲಿ ತೆಗೆದ ಈ ಚಿತ್ರದಲ್ಲಿ ಗೌತಮ್ ಅದಾನಿ ಹಾಗೂ ರಾಬರ್ಟ್ ವಾದ್ರಾ ಜೊತೆಯಲ್ಲಿ ಕಾಣಿಸಿಕೊಂಡಿದ್ದರು.
ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಷೇರು ಬೆಲೆಯನ್ನ ಕೃತಕವಾಗಿ ಏರಿಸಿದ್ದು ಹಾಗೂ ಹಣಕಾಸು ಅವ್ಯವಹಾರದ ಆರೋಪಗಳನ್ನು ಮಾಡಿತ್ತು. ಇದರ ಬೆನ್ನಲ್ಲಿಯೇ ಅದಾನಿ ಗ್ರೂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಇರುವ ಸಂಬಂಧವೇನು ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಟಾರ್ಗೆಟ್ ಮಾಡಿತ್ತ. ಕಾಂಗ್ರೆಸ್ ಮಾತ್ರವಲ್ಲದೆ ಇತರ ವಿರೋಧ ಪಕ್ಷಗಳೂ ಕೂಡ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದವು.
ಅದರಲ್ಲೂ ರಾಹುಲ್ ಗಾಂಧಿ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುತ್ತಿದ್ದರು. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಅದಾನಿ ಸಂಪತ್ತು ಎಷ್ಟು ವೇಗವಾಗಿ ಏರಿಕೆ ಆಗಿದೆ ಎನ್ನುವುದರ ಬಗ್ಗೆ ಪದೇ ಪದೇ ಆರೋಪ ಮಾಡಿದ್ದರು. ವ್ಯಾಪಾರ ಮತ್ತು ರಾಜಕೀಯದ ನಡುವಿನ ಸಂಬಂಧವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಹಾರ್ವರ್ಡ್‌ನಂತಹ ಬ್ಯುಸಿನೆಸ್ ಸ್ಕೂಲ್‌ಗಳಿಂದ ಅದಾನಿ ಕುರಿತು ಅಧ್ಯಯನ ಮಾಡಬೇಕು ಎಂದು ಅವರು ಟೀಕೆ ಮಾಡಿದ್ದರು.
ಅದಾನಿ ಹೆಸರು ಮೋದಿ ಹೂಡಿಕೆ, ತನಿಖೆ ನಡೆಸಿದರೆ ಪ್ರಧಾನಿ ಒಳಗೆ; ಕೇಜ್ರಿವಾಲ್ ಗಂಭೀರ ಆರೋಪ!
ತಮ್ಮ ಹೇಳಿಕೆಯನ್ನು ಸಾಬೀತು ಮಾಡಲು ಅದಾನಿಯೊಂದಿಗೆ ಪ್ರಧಾನಿ ಮೋದಿಯವರ ಚಿತ್ರಗಳನ್ನು ಲೋಕಸಭೆಯಲ್ಲಿ ಪ್ರದರ್ಶನ ಮಾಡಿದ್ದರು. ಶತಕೋಟ್ಯಧಿಪತಿ ಉದ್ಯಮಿಯ ಜೊತೆ ಇರುವ ಸಂಬಂಧದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರು. ಕಳೆದ ವಾರ ಸದನದಲ್ಲಿ ಮತ್ತೊಮ್ಮೆ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರು ಲೋಕಸಭೆಯಲ್ಲಿ ಭಾರೀ ಗದ್ದಲವನ್ನು ಸೃಷ್ಟಿಸಿದ್ದರು.
ಅದಾನಿ ಹಗರಣ ತನಿಖೆ ಏಕಿಲ್ಲ?: ಪ್ರಧಾನಿ ಮೋದಿ ವಿರುದ್ಧ ಮತ್ತೆ ಅದಾನಿ ದಾಳ ಉರುಳಿಸಿದ ರಾಹುಲ್
ಈಗ ಬಿಜೆಪಿ, ಅದಾನಿ ಜೊತೆ ಗಾಂಧಿ ಕುಟುಂಬದ ಅಳಿಯ ರಾಬರ್ಟ್ ವಾದ್ರಾ ಇರುವ ಚಿತ್ರಗಳನ್ನು ಪ್ರಕಟಿಸುವ ಮೂಲಕ ಪಕ್ಷಕ್ಕೆ ತಿರುಗೇಟು ನೀಡಿದೆ.ವಾದ್ರಾ ಭ್ರಷ್ಟಾಚಾರ ಮತ್ತು ಭೂಕಬಳಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರತಿದಾಳಿಗೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಿದೆ.