ಸಿಎಂ ಗಾದಿ ಉಳಿಸಲು ಚುನಾವಣಾ ಕಣಕ್ಕೆ ದೀದೀ: ಬಿಜೆಪಿಯಿಂದ ಪ್ರಬಲ ಸ್ಪರ್ಧಿ!
* ದೀದಿ ವಿರುದ್ಧ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಕಣಕ್ಕೆ
* ವಕೀಲೆ ಪ್ರಿಯಾಂಕಾ ತಿಬ್ರೆವಾಲ್ ಎಂಬುವರೇ ಬಿಜೆಪಿ ಅಭ್ಯರ್ಥಿ
ನವದೆಹಲಿ(ಸೆ.10): ಮುಖ್ಯಮಂತ್ರಿ ಗಾದಿಯನ್ನು ಉಳಿಸಿಕೊಳ್ಳಲು ತಮ್ಮ ತವರು ಭವಾನಿಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೆಣೆಯಲು ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ಸಲ್ಲಿಸಿರುವ ಬಾಬುಲ್ ಸುಪ್ರಿಯೋ ಅವರ ಕಾನೂನು ಸಲಹೆಗಾರ್ತಿ ಆಗಿದ್ದ ವಕೀಲೆ ಪ್ರಿಯಾಂಕಾ ತಿಬ್ರೆವಾಲ್ ಅವರನ್ನು ದೀದಿ ವಿರುದ್ಧ ಅಖಾಡಕ್ಕಿಳಿಯಲಿದ್ದಾರೆ
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ತಿಬ್ರೆವಾಲ್, ‘ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ನನ್ನ ಪಕ್ಷ ಟಿಕೆಟ್ ನೀಡಿದ್ದೇ ಆದಲ್ಲಿ, ಗೆಲ್ಲುವ ನಿಟ್ಟಿನಲ್ಲಿ ನನಗೆ ಸಾಧ್ಯವಾದಷ್ಟು ಮಟ್ಟಿಗೆ ಹೋರಾಡುತ್ತೇನೆ. ಜೊತೆಗೆ ಅನ್ಯಾಯದ ವಿರುದ್ಧದ ಈ ಹೋರಾಟದಲ್ಲಿ ನನ್ನನ್ನೇ ಬೆಂಬಲಿಸಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಈ ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧರಿಸಿದ್ದು, ಇನ್ನು ಎಡಪಂಥೀಯ ಸಿಪಿಎಂ ವಕೀಲರೊಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಈ ಪ್ರತಿಷ್ಠಿತ ಕ್ಷೇತ್ರದ ಮತದಾನವು ಸೆ.30ರಂದು ನಡೆಯಲಿದ್ದು, ಅಕ್ಟೋಬರ್ 3ಕ್ಕೆ ಫಲಿತಾಂಶ ಹೊರಬೀಳಲಿದೆ.