Asianet Suvarna News Asianet Suvarna News

ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಮಣಿಸಲು ಒಂದಾದ ಶತ್ರುಗಳು!

ಬಿಜೆಪಿ-ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಒಂದಾಗಿ ಚುನಾವಣೆ ಎದುರಿಸೋದು ಬಹುತೇಕ ಕನಸಿನ ಮಾತು ಎಂದೇ ಹೇಳಲಾಗಿತ್ತು. ಆದರೆ, ಈ ಕನಸೇ ಇಂದು ಬಂಗಾಳದಲ್ಲಿ ನಿಜವಾಗುವ ಸಾಧ್ಯತೆ ಇದೆ. ಮಮತಾ ಬ್ಯಾನರ್ಜಿ ಅವರ ಗೂಂಡಾ ರಾಜ್ಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮುಂಬರುವ ಬಂಗಾಳ ಪಂಚಾಯತ್‌ ಚುನಾವಣೆಯಲ್ಲಿ ಟಿಎಂಸಿ ವಿರುದ್ಧ ಬಿಜೆಪಿ-ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಜಂಟಿಯಾಗಿ ಹೋರಾಟ ನಡೆಸಲಿದೆ.
 

BJP Congress Left Alliance Vs Mamata Banerjee in  West Bengal Panchayat and Lok Sabha Election san
Author
First Published Mar 3, 2023, 12:17 PM IST

ಕೋಲ್ಕತ್ತಾ (ಮಾ.3): ಅದು 2003ರ ಮಾತು. ಅಂದು ಎನ್‌ಡಿಎಯಲ್ಲಿದ್ದ ಮಮತಾ ಬ್ಯಾನರ್ಜಿ, 'ಆರ್‌ಎಸ್‌ಎಸ್‌ ಬಂಗಾಳದಲ್ಲಿ ಒಂದೇ ಒಂದು ಪರ್ಸಂಟ್‌ ನಮಗೆ ಬೆಂಬಲ ನೀಡಿದರೂ ಸಾಕು, ರೆಡ್‌ ಟೆರರ್‌ (ಎಡಪಕ್ಷಗಳು) ವಿರುದ್ಧ ನಾವು ಹೋರಾಟ ಮಾಡುತ್ತೇವೆ' ಎಂದಿದ್ದರು. ಅಂದು ಮಮತಾ ಬ್ಯಾನರ್ಜಿ ಅವರ ಟಿಎಂಸಿ ಬಂಗಾಳದಲ್ಲಿ ವಿರೋಧ ಪಕ್ಷದಲ್ಲಿತ್ತು. ಏಕಾಂಗಿಯಾಗಿ ಎಡಪಕ್ಷಗಳ ವಿರುದ್ಧ ಹೋರಾಟ ನಡೆಸುತ್ತಿದ್ದರು. ಈ ವೇಳೆ ಆರ್‌ಎಸ್‌ಎಸ್‌ ನಾಯಕ ತರುಣ್‌ ವಿಜಯ್‌, ಮಮತಾ ಬ್ಯಾನರ್ಜಿ ಅವರು ವೇದಿಕೆಯ ಮೇಲೆ ಇದ್ದಾಗಲೇ ಅವರನ್ನು 'ಬಂಗಾಳದ ದುರ್ಗೆ' ಎಂದು ಕರೆದಿದ್ದರು. ಇದರ ಪರಿಣಾಮವೋ ಏನೋ 2011ರಲ್ಲಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ 34 ವರ್ಷದ ಸಿಪಿಎಂ ಅಧಿಪತ್ಯವನ್ನು ಕೊನೆ ಮಾಡಿದ್ದರು. ಅಂದಿನಿಂದ ಇಂದಿನಿವರೆಗೂ ಬಂಗಾಳದಲ್ಲಿ ಟಿಎಂಸಿಯ ಅಧಿಕಾರವಿದೆ. 20 ವರ್ಷಗಳ ಹಿಂದೆ ರೆಡ್‌ ಟೆರರ್‌ ಕೊನೆ ಮಾಡಲು ಆರ್‌ಎಸ್‌ಎಸ್‌ ಸಹಾಯ ಕೇಳಿದ್ದ ಮಮತಾ ಬ್ಯಾನರ್ಜಿಗೆ ಇಂದು ಅದೇ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ದೊಡ್ಡ ಎದುರಾಳಿಯಾಗಿದೆ. ಬೇಕಾದಷ್ಟು ಬೆಂಬಲ ನೀಡ್ತೇವೆ ಮಮತಾ ಬ್ಯಾನರ್ಜಿಯನ್ನು ಬಂಗಾಳದಲ್ಲಿ ಅಧಿಕಾರದಿಂದ ಕೆಳಗಿಳಿಸಿ ಎನ್ನುವುದು ಅಲ್ಲಿನ ಎಡಪಕ್ಷಗಳ ಮಾತೂ ಕೂಡ ಆಗಿದೆ.

ಮುಂದಿನ ಏಪ್ರಿಲ್‌-ಮೇ ತಿಂಗಳಿನಲ್ಲಿ ಬಂಗಾಳದಲ್ಲಿ ಪಂಚಾಯತ್‌ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ವಿಚಾರ ಇನ್ನೂ ಕೋರ್ಟ್‌ನಲ್ಲಿದ್ದು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ. ಯಾವಾಗ ಚುನಾವಣೆ ನಡೆಯಲಿದೆ ಎನ್ನುವುದನ್ನೂ ಕೂಡ ಕೋರ್ಟ್‌ ನಿರ್ಧಾರ ಮಾಡಲಿದೆ. ಆದರೆ, ಟಿಎಂಸಿಯೊಂದಿಗೆ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಸಿಪಿಎಂ ಕೂಡ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸಿದೆ. ಪಂಚಾಯತ್‌ ಚುನಾವಣೆಯ ಫಲಿತಾಂಶ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ಖಂಡಿತವಾಗಿ ಪರಿಣಾಮ ಬೀರಲಿದೆ ಎನ್ನುವುದು ರಾಜಕೀಯ ತಜ್ಞರ ಮಾತು.

ಸ್ಥಳೀಯ ಮಟ್ಟದಲ್ಲಿ ಮೈತ್ರಿ ಎಂದ ಬಿಜೆಪಿ: ಸತತ ಮೂರು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಸಿಪಿಎಂ, ಮುಂದಿನ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಟಿಎಂಸಿಯನ್ನು ಸೋಲಿಸುವ ಇರಾದೆಯಲ್ಲಿದೆ. ಇನ್ನು ಬಿಜೆಪಿ ಕೂಡ ಟಿಎಂಸಿಯನ್ನು ಸೋಲಿಸುವ ಏಕಮೇವ ಉದ್ದೇಶಕ್ಕಾಗಿ ಎಡಪಕ್ಷಗಳ ಬೆಂಬಲ ಪಡೆಯಲು ಹಿಂಜರಿಯುತ್ತಿಲ್ಲ. ಕಮ್ಯುನಿಸ್ಟ್‌ ಮತ್ತು ಬಿಜೆಪಿ ಮಾತ್ರವಲ್ಲ, ಕೆಲವು ಪ್ರದೇಶಗಳಲ್ಲಿ ಕಾಂಗ್ರೆಸ್‌ ಕೂಡ ಟಿಎಂಸಿಯನ್ನು ಸೋಲಿಸಲು ಈ ಮೈತ್ರಿಕೂಟವನ್ನು ಬೆಂಬಲಿಸಿದೆ.

ಮಮತಾ ಬ್ಯಾನರ್ಜಿಗೆ ಪ್ರಧಾನಿಯಾಗುವ ಸಾಮರ್ಥ್ಯವಿದೆ: ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್

'ಸ್ಥಳೀಯ ಮಟ್ಟದಲ್ಲಿ ಇಂಥದ್ದೊಂದು ವ್ಯವಸ್ಥೆ ಹಾಗೂ ಮೈತ್ರಿ ಮಾಡಿಕೊಳ್ಳಲಿದ್ದೇವೆ' ಎಂದು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್‌ ಮಜುಂದಾರ್‌ ಕೂಡ ತಿಳಿಸಿದ್ದಾರೆ. ಯಾರು ಗೆಲುವು ಸಾಧಿಸಬೇಕು ಎನ್ನುವುದುನ್ನು ಸ್ಥಳೀಯ ನಾಯಕರೇ ನಿರ್ಧಾರ ಮಾಡಲಿದ್ದಾರೆ.  ಟಿಎಂಸಿಯ ಗೂಂಡಾಗಿರಿ ಬಂಗಾಳದ ಹಲವು ಭಾಗಗಳಲ್ಲಿ ಹೆಚ್ಚಾಗಿದೆ. ಆ ಕಾರಣಕ್ಕಾಗಿ ಒಪ್ಪಂದದ ಚುನಾವಣೆ ಎದುರಿಸಲಿದ್ದೇವೆ ಎಂದಿದ್ದಾರೆ. ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕೂಡ ಇದೇ ಮಾತನ್ನು ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಇಂತಹ ಮೈತ್ರಿ ಇರಬಹುದು ಎಂದು ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ನಮಗೆ ನಿಯಂತ್ರಣವಿಲ್ಲ. ಜನರು ಪರಸ್ಪರ ಮಾತನಾಡಿ ನಿರ್ಧಾರ ಮಾಡುತ್ತಾರೆ. ಬಂಗಾಳದಲ್ಲಿ ಸರ್ವಾಧಿಕಾರ ಎಷ್ಟು ಹೆಚ್ಚಿದೆ ಎಂದರೆ ಜನರು ಟಿಎಂಸಿಯನ್ನು ತೆಗೆದುಹಾಕಲು ಯಾವುದೇ ಮೈತ್ರಿಯನ್ನು ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.

ನಿಮ್ಮ ತಾಯಿ ನಮ್ಮ ತಾಯಿ ಇದ್ದಂತೆ: ಮೋದಿಗೆ ಮಮತಾ ಬ್ಯಾನರ್ಜಿ ಸಾಂತ್ವನ

ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ ಎಂದ ಟಿಎಂಸಿ: ಬಿಜೆಪಿ-ಎಡಪಕ್ಷ ಹಾಗೂ ಕಾಂಗ್ರೆಸ್‌ ಮೈತ್ರಿಕೂಟ  ಪಂಚಾಯತ್‌ ಚುನಾವಣೆಯಲ್ಲಿ ಒಟ್ಟಾಗಿ ಟಿಎಂಸಿಯನ್ನು ಎದುರಿಸಲಿದೆ ಎನ್ನುವ ಸೂಚನೆಯ ಬೆನ್ನಲ್ಲಿಯೇ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ದೊಡ್ಡ ನಿರ್ಧಾರ ಮಾಡಿದ್ದು, 2024ರ ಲೋಕಚಭೆ ಚುನಾವಣೆಯಲ್ಲಿ ತಾವು ಏಕಾಂಗಿಯಾಗೊ ಸ್ಪರ್ಧೆ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ಹೋರಾಡುವ ಜಂಟಿ ವಿರೋಧ ಪಕ್ಷಕ್ಕೆ ಮಮತಾ ಬ್ಯಾನರ್ಜಿ ಅವರೇ ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, 2024 ರ ಚುನಾವಣೆಯಲ್ಲಿ ತಮ್ಮ ಪಕ್ಷವು "ಸಾಮಾನ್ಯ ಜನರ ಬೆಂಬಲದೊಂದಿಗೆ" ಏಕಾಂಗಿಯಾಗಿ ಹೋರಾಟ ಮಾಡಲಿದೆ ಎಂದು ಹೇಳಿದರು. "2024 ರ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ನಾವು ಜನರ ಬೆಂಬಲದೊಂದಿಗೆ ಹೋರಾಡುತ್ತೇವೆ. ಬಿಜೆಪಿಯನ್ನು ಸೋಲಿಸಲು ಬಯಸುವವರು ಖಂಡಿತವಾಗಿಯೂ ಟಿಎಂಸಿಗೆ ಮತ ಹಾಕುತ್ತಾರೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು.

Follow Us:
Download App:
  • android
  • ios