ನವದೆಹಲಿ(ಜೂ.23): ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ದೇಶವನ್ನು ವಿಭಜಿಸುವ, ಸೈನಿಕರನ್ನು ಹತಾಶೆಗೊಳಿಸುವಂತಹ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆರೋಪಿಸಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡ ಪರಿಣಾಮವೇ ಇದು ಎಂದು ಅವರು ಪ್ರಶ್ನಿಸಿದ್ದಾರೆ.

ಮೊದಲು ಕಾಂಗ್ರೆಸ್ ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿತು. ನಂತರ ಕಾಂಗ್ರೆಸ್‌ ಭೂಭಾಗವನ್ನುಚೀನಾಗೆ ಒಪ್ಪಿಸಿತು. ಡೋಕ್ಲಾಂ ಬಿಕ್ಕಟ್ಟಿನ ಸಂದರ್ಭ ರಾಹುಲ್ ಗಾಂಧಿ ಗುಟ್ಟಾಗಿ ಚೀನಾ ರಾಯಭಾರಿ ಕಚೇರಿಗೆ ಭೇಟಿ ನೀಡಿದರು.

ಸತ್ಯ ಒಪ್ಪಿಕೊಂಡ ಚೀನಾ: ಗಲ್ವಾನ್‌ ಘರ್ಷಣೆಯಲ್ಲಿ ಚೀನಾ ಕಮಾಂಡರ್‌ ಸಾವು

ಇದೀಗ ಇಂತಹ ವಿಷಮ ಸ್ಥಿತಿಯಲ್ಲೂ ದೇಶವನ್ನು ಒಡೆಯುವ, ಸೈನಿಕರನ್ನು ದೃತಿಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಒಪ್ಪಂದದ ಪರಿಣಾಮವೇ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

2008ರಲ್ಲಿ ಒಪ್ಪಂದ ಸಹಿ ಮಾಡಿದ್ದು, ಈ ಮೂಲಕ ಹೈಲೆವೆಲ್ ಎಕ್ಸ್‌ಚೇಂಜ್ ಹಾಗೂ ಪ್ರಮುಖ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಘಟನೆಗಳಲ್ಲಿ ಪರಸ್ಪರ ಚರ್ಚಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಚೀನಾ ಜೊತೆಗಿನ ಕೇಂದ್ರದ ನಿಲುವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದ್ದು, ರಾಹುಲ್ ಗಾಂಧಿ ಟೀಕೆ ಮಾಡುವ ಟ್ವೀಟ್ ಮಾಡುತ್ತಲೇ ಇದ್ದಾರೆ.