Sports Scam ಬಂಗಾಳದಲ್ಲಿ 1,250 ಕೋಟಿ ಕ್ರೀಡಾ ಹಗರಣ, ಸಿಎಂ ಮಮತಾಗೆ ಸಂಕಷ್ಟ!
- ಮಮತಾ ಸರ್ಕಾರದ ಅತೀ ದೊಡ್ಡ ಕ್ರೀಡಾ ಹಗರಣ ಬೆಳಕಿಗೆ
- 1,250 ಕೋಟಿ ರೂಪಾಯಿ ಹಗರಣದಿಂದ ಸಿಎಂ ಮಮತಾಗೆ ಸಂಕಷ್ಟ
- ಕ್ರೀಡೆ ಹೆಸರು ಹೇಳಿ ರಾಜಕೀಯಕ್ಕೆ ಹಣ ದುರ್ಬಳಕೆ

ಕೋಲ್ಕತಾ(ಜ.12): ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ(Mamata Banerjee) ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ 1,250 ಕೋಟಿ ರೂಪಾಯಿ ಕ್ರೀಡಾ ಹಗರಣವೊಂದು(Sports Scam) ಬೆಳಕಿಗೆ ಬಂದಿದೆ. ಕ್ರೀಡೆಯ ಹೆಸರಲ್ಲಿ ಸರ್ಕಾರದಿಂದ ಹಣ ಮಂಜೂರು ಮಾಡಿ ರಾಜಕೀಯ ರ್ಯಾಲಿ, ರಾಜಕೀಯ ಕಾರ್ಯಕ್ರಮ, ಚುನಾವಣೆಗೆ ಬಳಸಿಕೊಂಡ ಆರೋಪ ಇದೀಗ ಟಿಎಂಸಿ(TMC) ಸರ್ಕಾರದ ಮೇಲೆರಗಿದೆ. ಈ ಕುರಿತು ಸ್ಫೋಟಕ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರೆ ಭಾರತಿ ಘೋಷ್ ಬಹಿರಂಗಪಡಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ 2014ರಿಂದ ಸದ್ದಿಲ್ಲದ ನಡೆಯುತ್ತಿದ್ದ ಕ್ರೀಡಾ ಹಗರಣ ಇದೀಗ ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿನ(West Bengal) ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಹಾಗೂ ಯುವ ಕ್ರೀಡಾಪಟುಗಳಿಗೆ ನೆರವಾಗಲು ಪಶ್ಚಿಮ ಬಂಗಾಳ ಸರ್ಕಾರ 2014ರಲ್ಲಿ ಸ್ಪೋರ್ಟ್ಸ್ ಕ್ಲಬ್‌ಗಳಿಗೆ ಸಹಾಯ ಧನ ಆರಂಭಿಸಿದ್ದಾರೆ. ಪ್ರತಿ ಕ್ಲಬ್‌ಗೆ 5 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ. ಆದರೆ ಈ ಹಣ ಹೆಸರಿಗೆ ಮಾತ್ರ ಕ್ರೀಡಾ ಕ್ಲಬ್‌ಗೆ ನೀಡಲಾಗಿದೆ. ಆದರೆ ಈ ಹಣವನ್ನು ಟಿಎಂಸಿ ತನ್ನ ರಾಜಕೀಯ ಉದ್ದೇಶಕ್ಕೆ ಬಳಸಲಾಗಿದೆ ಎಂದು ಭಾರತೀ ಘೋಷ್(Bharati Gosh) ಆರೋಪಿಸಿದ್ದಾರೆ.
ಈ ಹಣವನ್ನು ರಾಜಕೀಯ ಉದ್ದೇಶಕ್ಕೆ(political program) ಬಳಸಲು ಬರೋಬ್ಬರಿ 25,000 ಬೋಗಸ್ ಸ್ಪೋರ್ಟ್ಸ್ ಕ್ಲಬ್(Bogus Sports Club) ಸೃಷ್ಟಿಸಲಾಗಿದೆ. ಈ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಅಭ್ಯಾಸ ನಡೆಸುವ ಫುಟ್ಬಾಲ್ ಸೇರಿದಂತೆ ಇತರ ಕ್ರೀಡೆಗಳ ಹೆಸರಿನಲ್ಲಿ ಸರ್ಕಾರ ಐದೈದು ಲಕ್ಷ ರೂಪಾಯಿ ಸಂದಾಯ ಮಾಡಿದೆ. 25,000 ಸ್ಪೋರ್ಟ್ಸ್ ಕ್ಲಬ್‌ಗೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 1,250 ಕೋಟಿ ರೂಪಾಯಿಯನ್ನು ಟಿಎಂಸಿ ತನ್ನ ರಾಜಕೀಯ ರ್ಯಾಲಿ ಸೇರಿದಂತೆ ಇತರ ರಾಜಕೀಯ ಚಟುವಟಿಕೆಗೆ ಬಳಸಿಕೊಂಡ ಆರೋಪ ಎದುರಿಸುತ್ತಿದೆ.
ಈ ಆರೋಪ ಕುರಿತು ಸ್ಥಳೀಯ ಮಾಧ್ಯಮಗಳು ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಈ ವೇಳೆ ಸಹಾಯಧನ ಪಡೆಯುತ್ತಿರುವ ಎಲ್ಲಾ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಇದುವರೆಗೆ ಯಾವುದೇ ಕ್ರೀಡಾ ಚಟುವಟಿಕೆ ನಡೆದಿಲ್ಲ. ಕೇವಲ ಸಹಾಯಧನ ಪಡೆಯಲು ಹಾಗೂ ದಾಖಲೆಗೆ ತೋರಿಸಲು ಒಂದೊಂದು ಸ್ಪೋರ್ಟ್ಸ್ ಕ್ಲಬ್ ನಾಮಫಲಕ ಹಾಕಲಾಗಿದೆ. ಆ ಸ್ಪೋರ್ಟ್ಸ್ ಕ್ಲಬ್ ಒಳಗೆಡೆ ಖಾಲಿಯಾದ ಮದ್ಯದ ಬಾಟಲಿ, ಮುರಿದ ಬೆಂಚು, ದೂಳು ಹಿಡಿದ ಕಿತ್ತು ಹೋದ ಚಪ್ಪಲಿಗಳು ಮಾತ್ರ ಕಾಣಸಿಗುತ್ತದೆ. ಹೀಗೆ ಮಮತಾ ಸರ್ಕಾರ ಸೃಷ್ಟಿಸಿದ ಬೋಗಸ್ ಸ್ಪೋರ್ಟ್ಸ್ ಕ್ಲಬ್ ಮಾಹಿತಿ ಇಲ್ಲಿದೆ.
Opposition Meet ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ದೀದಿಗೆ ಶಾಕ್, TMC ಹೊರಗಿಟ್ಟು ವಿರೋಧ ಪಕ್ಷಗಳ ಜೊತೆ ಸೋನಿಯಾ ಸಭೆ!
ಜೋಯ್‌ದೆವ್‌ಪುರ್ ಮಾತ್ರಿಮಂದಿರ್ ಸ್ಪೋರ್ಟ್ಸ್ ಕ್ಲಬ್ ರಿಜಿಸ್ಟ್ರೇಶನ್ ನಂಬರ್ S/69806. ಈ ಸ್ಪೋರ್ಟ್ಸ್ ಕ್ಲಬ್‌ಗೆ ಮಮತಾ ಬ್ಯಾನರ್ಜಿ ಸರ್ಕಾರ 2017ರಿಂದ 2019ರ ವರೆಗೆ ಸಹಾಯಧನ ಮಂಜೂರು ಮಾಡಿದೆ. ಜೋಯ್‌ದೇವ್‌ಪುದ ಡೈಮಂಡ್ ಹಾರ್ಬರ್‌ನಲ್ಲಿ ಈ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಲಾಗಿದೆ. ಮೊದಲ ನೋಟದಲ್ಲೇ ಈ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ವರ್ಷಗಳೇ ಉರುಳಿದಂತಿದೆ. ಈ ಕ್ಲಬ್ ಒಳಗೆ ಕ್ರೀಡಾ ಚಟುವಟಿಕೆಗೆ ಬಳಸುವ ಯಾವುದೇ ಸಲಕರಣೆ ಸಾಧನ ಇಲ್ಲ.
ಮಾತ್ರಿಮಂದಿರ್ ಸ್ಪೋರ್ಟ್ಸ್ ಕ್ಲಬ್‌ನಿಂದ ಎರಡು ಕಿಲೋಮೀಟರ್ ದೂರದಲ್ಲಿ ಯಂಗ್ ಅಥ್ಲೆಟಿಕ್ಸ್ ಕ್ಲಬ್((S/12/18676) ಕತೆ ಭಿನ್ನವಾಗಿ ಇಲ್ಲ. ದಕ್ಷಿಣ್ ಪರುಲಿಯಾ ಗ್ರಾಮದೊಳಗೆ ಇರುವ ಈ ಕ್ಲಬ್ ಮುರಿದು ಬಿದ್ದಿರುವ ಮಂಚ, ದೂಳು ಹಾಗೂ ತುಕ್ಕು ಹಿಡಿದಿರುವ ಒಂದೆರಡು ಪಾತ್ರೆ, ಖಾಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಚೀಲಗಳು ಹಾಗೂ ಮುರಿದಿರುವ ಪೈಪ್‌ಗಳು ಈ ಕ್ಲಬ್‌ನಲ್ಲಿದೆ.
ಪ. ಬಂಗಾಳ ಹಿಂಸಾಚಾರ: ಸಿಬಿಐ ತನಿಖೆಗೆ ಆದೇಶಿಸಿದ ಹೈಕೋರ್ಟ್, ಮಮತಾಗೆ ಹಿನ್ನಡೆ!
ಚಾಲಂತಿಕ ಸ್ಪೋರ್ಟ್ಸ್ ಕ್ಲಬ್((S/97360), ಉದಯನ್ ಪಾಲಿ ದಿಲಿಪ್ ಸ್ಮೃತಿ ಸಂಘ ಕ್ಲಬ್(S/2L/39214), ಮುರ್ಗಿಬಿತಾ ಜಾಗೃತಿ ಸ್ಪೋರ್ಟ್ಸ್ ಸಂಘ(S/2L/ NO-25298) ಸೇರಿದಂತೆ ಸರ್ಕಾರದಿಂದ 5 ಲಕ್ಷ ರೂಪಾಯಿ ಸಹಾಯಧನ ಪಡೆಯುವ ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಇದುವರೆಗೆ ಯಾವುದೇ ಕ್ರೀಡಾ ಚಟುವಟಿಕೆ ನಡೆದಿಲ್ಲ. ಇನ್ನು ಈ ಹಣ ಸ್ಪೋರ್ಟ್ಸ್ ಕ್ಲಬ್‌ಗಳಿಗೂ ಸಂದಾಯವಾಗಿಲ್ಲ. ಕೇವಲ ಸ್ಪೋರ್ಟ್ಸ್ ಕ್ಲಬ್ ಹೆಸರಿನಲ್ಲಿ ಟಿಎಂಸಿ ಈ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿ ಜೇಬಿಗಿಳಿಸಿದೆ. ತನ್ನ ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡು ಅಧಿಕಾರದಲ್ಲಿ ಮುಂದುವರಿದಿದೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಇದೀಗ ಭಾರತಿ ಘೋಷ್ ಈ ಕುರಿತು ಮಾಹಿತಿ ಬಹಿರಂಗ ಪಡಿಸುತ್ತಿದ್ದಂತೆ ಸ್ವತಂತ್ರ ತನಿಖೆಗೆ ಆಗ್ರಹ ಕೇಳಿಬರುತ್ತಿದೆ. ಇದರ ಜೊತೆಗೆ ಮಮತಾ ಬ್ಯಾನರ್ಜಿ ಸರ್ಕಾರದ ಮುಖವಾಡ ಕಳಚಿ ಬಿದ್ದಿದೆ.