ಪ. ಬಂಗಾಳ ಹಿಂಸಾಚಾರ: ಸಿಬಿಐ ತನಿಖೆಗೆ ಆದೇಶಿಸಿದ ಹೈಕೋರ್ಟ್, ಮಮತಾಗೆ ಹಿನ್ನಡೆ!
* ಟಿಎಂಸಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಗೆ ಮೊದಲ ಹಿನ್ನಡೆ
* ಪಶ್ಚಿಮ ಬಂಗಾಳದ ಚುನಾವಣೆ ಹಿಂಸಾಚಾರ ಪ್ರಕರಣ
* ಸಿಬಿಐಗೆ ತನಿಖೆಗೆ ವಹಿಸಿದ ಪಶ್ಚಿಮ ಬಂಗಾಳದ ಹೈಕೋರ್ಟ್
* ಚುನಾವಣೋತ್ತರ ಹಿಂಸಾಚಾರ, ಅತ್ಯಾಚಾರ, ಕೊಲೆ ತನಿಖೆ ನಡೆಸಲು ಸಿಬಿಐಗೆ ಸೂಚನೆ
ಕೊಲ್ಕತ್ತಾ(ಆ.19): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ನಡೆದಿದ್ದ ರಾಜಕೀಯ ಹಿಂಸಾಚಾರದ ಕುಣಿಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲಿಗೆ ಮತ್ತಷ್ಟು ಬಿಗಿಯಾಗಿದೆ. ಹೌದ ಕೊಲ್ಕತ್ತಾ ಹೈಕೋರ್ಟ್, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಿದೆ. ಈ ಮೂಲಕ ಟಿಎಂಸಿ ಸರ್ಕಾರಕ್ಕೆ ಮತ್ತಷ್ಟು ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಮತಾ ಸರ್ಕಾರಕ್ಕೆ ಉದ್ವಿಗ್ನ ಪರಿಸ್ಥಿತಿ
ಬಂಗಾಳ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದಿದ್ದವು. ಆಗಸ್ಟ್ 3 ರಂದು, ಕೊಲ್ಕತ್ತಾ ಹೈಕೋರ್ಟ್‌ನ ಐವರು ಸದಸ್ಯರ ಪೀಠವು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಸೇರಿದಂತೆ ಎಲ್ಲಾ ಐದು ಸದಸ್ಯರ ಪೀಠವು ಈ ಕುರಿತು ಸಿಬಿಐ ತನಿಖೆಗೆ ಆದೇಶಿಸಿದೆ. ಚುನಾವಣೋತ್ತರ ಹಿಂಸಾಚಾರವನ್ನು ಸಿಬಿಐ ತನಿಖೆ ಮಾಡುತ್ತದೆ ಎಂದು ಹೈಕೋರ್ಟ್ ಹೇಳಿದೆ. ಅಸಹಜ ಸಾವು, ಕೊಲೆ ಮತ್ತು ಅತ್ಯಾಚಾರ ಸೇರಿದಂತೆ ಇತರ ದೊಡ್ಡ ಅಪರಾಧಗಳ ಪ್ರಕರಣಗಳನ್ನೂ ಸಿಬಿಐ ನೋಡಿಕೊಳ್ಳುತ್ತದೆ. ಕಡಿಮೆ ಪ್ರಾಮುಖ್ಯತೆಯ ಪ್ರಕರಣವನ್ನು 3 ಸದಸ್ಯರ ಎಸ್‌ಐಟಿ ತನಿಖೆ ನಡೆಸಲಿದೆ. ಎರಡೂ ಸಂಸ್ಥೆಗಳು ತಮ್ಮ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸುತ್ತವೆ. ಇದನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
"
ಜುಲೈನಲ್ಲಿ ಹೈಕೋರ್ಟ್‌ಗೆ ಪ್ರಕರಣದ ವರದಿ ಸಲ್ಲಿಕೆ
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಜುಲೈನಲ್ಲಿ ಈ ಪ್ರಕರಣ ಸಂಬಂಧ ವಿವರವಾದ ವರದಿಯನ್ನು ತಯಾರಿಸಿ ಹೈಕೋರ್ಟ್‌ಗೆ ಸಲ್ಲಿಸಿತ್ತು. ವರದಿಯು ಜಿಲ್ಲಾವಾರು ನಡೆದ ಹಿಂಸಾಚಾರದ ಅಂಕಿ ಅಂಶ ಹಾಗೂ ದೂರುಗಳನ್ನು ಒಳಗೊಂಡಿತ್ತು. ನೀವು ಅಂಕಿಅಂಶಗಳನ್ನು ಗಮನಿಸಿದರೆ, ಕೂಚ್ ಬಿಹಾರ್‌ನಲ್ಲಿ ಚುನಾವಣೆಯ ಬಳಿಕ ಭಾರೀ ಹಿಂಸಾಚಾರ ನಡೆದಿತ್ತು ಹಾಗೂ ಡಾರ್ಜಿಲಿಂಗ್ ಸುರಕ್ಷಿತ ಎಂದು ಸಾಬೀತಾಗಿತ್ತು. ಕೂಚ್ ಬಿಹಾರ ಬಳಿಕ, ಬಿರ್ಭೂಮ್‌ನಲ್ಲೂ ಭಾರೀ ಹಿಂಸಾಚಾರ ನಡೆದಿತ್ತು
ವರದಿಯ ಪ್ರಕಾರ, ಕೂಚ್ ಹಿಹಾರ್‌ನಲ್ಲಿ 322, ಬಿರ್ಭೂಮ್‌ನಲ್ಲಿ 314, ದಕ್ಷಿಣ 24 ಪರಗಣಗಳಲ್ಲಿ 203, ಉತ್ತರ 24 ಪರಗಣಗಳಲ್ಲಿ 198, ಕೋಲ್ಕತ್ತಾದಲ್ಲಿ 182 ಮತ್ತು ಪೂರ್ವ ಬುರ್ದ್ವಾನ್‌ನಲ್ಲಿ 113 ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ.