ಬಿಪೊರ್‌ಜಾಯ್ ಚಂಡಮಾರುತ ಆತಂಕ ಹೆಚ್ಚಾಗುತ್ತಿದೆ. ಇದರ ಪರಿಣಾಮ ಕರಾವಳಿ ತೀರ ಪ್ರದೇಶದಿಂದ ಸಂಚರಿಸುವ ಹಲವು ರೈಲು ಸಂಚಾರ ರದ್ದಾಗಿದೆ. ಜೂನ್ 14 ಹಾಗೂ 15 ರಂದು ಸಂಚರಿಸಬೇಕಿದ್ದ 20ಕ್ಕೂ ಹೆಚ್ಚು ರೈಲು ಪ್ರಯಾಣವನ್ನು ರದ್ದು ಮಾಡಲಾಗಿದೆ.
ಮುಂಬೈ(ಜೂ.13): ಪ್ರಯಾಣಿಕರೇ ದಯವಿಟ್ಟು ಗಮನಿಸಿ, ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮ ಜೂನ್ 14 ಹಾಗೂ 15 ರಂದುು ಪಶ್ಚಿಮ ರೈಲ್ವೇ 20ಕ್ಕೂ ಹೆಚ್ಚು ರೈಲು ಸಂಚಾರ ರದ್ದಾಗಿದೆ. ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ. ಹೌದು, ಜೂನ್ 14 ರಿಂದ ಬಿಪೊರ್‌ಜಾಯ್ ಚಂಡಮಾರುತ ಭಾರತದ ತೀರ ಪ್ರದೇಶಕ್ಕೆ ಅಪ್ಪಳಿಸಲಿದೆ. ಜೂನ್ 14 ರಿಂದ 16ರ ವರೆಗೆ ಭಾರತದಲ್ಲಿ ಬಿಪೊರ್‌ಜಾಯ್ ಚಂಡಮಾರುತ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಜೂನ್ 14 ಹಾಗೂ 15ರಂದು ಸಂಚರಿಸಬೇಕಿದ್ದ 20ಕ್ಕೂ ಹೆಚ್ಚು ರೈಲು ರದ್ದಾಗಿದೆ. ಗುಜರಾತ್ ಹಾಗೂ ಮುಂಬೈನಿಂದ ಸಂಚರಿಸಬೇಕಿದ್ದ ರೈಲುಗಳನ್ನು ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ರೈಲ್ವೇ ರದ್ದು ಮಾಡಿದೆ.
ದಾದರ್-ಸೂರತ್ ಎಕ್ಸ್‌ಪ್ರೆಸ್, ಮುಂಬೈ-ಅಹಮ್ಮಾದಾಬಾದ್ ಎಕ್ಸ್‌ಪ್ರೆಸ್, ಮುಂಬೈ-ಗಾಂಧಿ ಧಾಮ ಎಕ್ಸ್‌ಪ್ರೆಸ್ ಸೇರಿದಂತೆ 20ಕ್ಕೂ ಹೆಚ್ಚು ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ಸಂಚಾರ ರದ್ದು ಮಾಡಿರುವ ರೈಲುಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿರುವ ಪ್ರಯಾಣಿಕರು ರೈಲ್ವೇ ಕೇಂದ್ರ ಸಂಪರ್ಕಿಸಲು ಕೋರಲಾಗಿದೆ. ಟಿಕೆಟ್ ಮರುಪಾವತಿ ಸೇರಿದಂತೆ, ಬೇರೆ ದಿನಾಂಕದಲ್ಲಿ ಟಿಕೆಟ್ ರಿಸರ್ವೇಶನ್ ಸೇರಿದಂತೆ ಇತರ ಪ್ರಕ್ರಿಯೆಗೆ ರೈಲ್ವೇ ಕೇಂದ್ರ ಸಂಪರ್ಕಿಸಲು ಸೂಚಿಸಲಾಗಿದೆ.
Biporjoy Cyclone:ಗುಜರಾತ್‌ನಲ್ಲಿ ಬಿಪರ್‌ಜಾಯ್ ಅಬ್ಬರ: ಹೈ ಅಲರ್ಟ್ ಘೋಷಣೆ..ಮೂವರು ಬಲಿ
ವರಾವಲ್-ಪೋರಬಂದರ್ ಸೆಕ್ಷನ್, ಒಖಾ-ದ್ವಾರಾಕ ಸೆಕ್ಷನ್ ಹಾಗೂ ಗಾಂಧಿ ಧಾಮ್-ಭುಜ್ ಸೆಕ್ಷನ್ ನಡುವಿನ ರೈಲುಗಳನ್ನು ರದ್ದುಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ರೈಲು ಸೆಕ್ಷನ್ ರೈಲುಗಳನ್ನು ರದ್ದು ಪಡಿಸಲಾಗಿದೆ. ಗುಜರಾತ್ ತೀರ ಪ್ರದೇಶಕ್ಕೆ ಜೂನ್ 14 ಅಥವಾ 15 ಕ್ಕೆ ಅಪ್ಪಳಿಸಲಿದೆ. ಭಾರಿ ಮಳೆ ಹಾಗೂ ಗಾಳಿ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅತಿ ತೀವ್ರ ಸ್ವರೂಪದ ಚಂಡಮಾರುತ’ವಾಗಿ ಪರಿವರ್ತನೆಗೊಂಡಿರುವ ‘ಬಿಪೊರ್ಜೊಯ್’ ಚಂಡಮಾರುತ, ಗುಜರಾತ್ನ ಕಛ್ ಜಿಲ್ಲೆಯ ಜಖಾವು ಬಂದರಿಗೆ ಜೂ.14ರಂದು ಅಪ್ಪಳಿಸುವ ಸಾಧ್ಯತೆ ಇದೆ. ಚಂಡಮಾರುತವು ಗಂಟೆಗೆ 150 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಬೀಸುವ ಸಾಧ್ಯತೆ ಇದ್ದು, ಭಾರಿ ವಿನಾಶ ಸೃಷ್ಟಿಸುವ ಭೀತಿ ಎದುರಾಗಿದೆ.
150 ಕಿ.ಮೀ ವೇಗದಲ್ಲಿ ಬಿಪೊರ್ಜೊಯ್ ದಾಳಿ : ತೈಲ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ 11 ಜನರ ಏರ್‌ಲಿಫ್ಟ್
ಸಂಭಾವ್ಯ ಅನಾಹುತ ತಪ್ಪಿಸುವ ಉದ್ದೇಶದಿಂದ ಕಛ್, ಪೋರಬಂದರ್, ದೇವಭೂಮಿ ದ್ವಾರಕಾ, ಜುನಾಗಢ ಹಾಗೂ ಮೋರ್ಬಿ ಕರಾವಳಿಯಲ್ಲಿ ಅಪಾಯದ ವಲಯದಲ್ಲಿರುವ ಜನರ ತೆರವು ಕಾರ್ಯಾಚರಣೆ ಆರಂಭವಾಗಿದೆ. ಸೋಮವಾರ ಸುಮಾರು 7500 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಸಮುದ್ರದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅಪಾಯದ ವಲಯವನ್ನು ಗುರುತಿಸಲಾಗಿದ್ದು, ಶೀಘ್ರ ಇನ್ನೂ 23 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಪಿಪಾವಾವ್ ಬಂದರಿನ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ದೇಶದ 2 ಮುಖ್ಯ ಬಂದರುಗಳಾದ ಕಾಂಡ್ಲಾ ಹಾಗೂ ಮುಂದ್ರಾ ಬಂದರುಗಳ ಗುಜರಾತ್ ಕರಾವಳಿಯಲ್ಲೇ ಇದ್ದು, ಅಲ್ಲೂ ಮುಂಜಾಗ್ರತೆ ವಹಿಸಲಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ 19 ತಂಡಗಳು (7 ಎನ್ಡಿಆರ್ಎಫ್ ಹಾಗೂ 12 ಎಸ್ಡಿಆರ್ಎಫ್ ತಂಡಗಳು) ಸನ್ನದ್ಧ ಸ್ಥಿತಿಯಲ್ಲಿವೆ. ಸೇನೆ, ನೌಕಾಪಡೆ ಹಾಗೂ ಕರಾವಳಿ ಪಡೆಗಳ ಜತೆಗೂ ಗುಜರಾತ್ ಸರ್ಕಾರ ಸಂಪರ್ಕದಲ್ಲಿದ್ದು, ತೀರಾ ಆಪಾಯದ ಸ್ಥಿತಿ ಸೃಷ್ಟಿಯಾದರೆ ನೆರವಿಗೆ ಬರುವಂತೆ ಕೋರಲಾಗಿದೆ.
