ನವದೆಹಲಿ(ಡಿ.17): ಸಂಪೂರ್ಣ ಮದ್ಯಪಾನ ನಿಷೇಧವಿರುವ ಬಿಹಾರದಲ್ಲಿ ಮಹಾರಾಷ್ಟ್ರಕ್ಕಿಂತ ಹೆಚ್ಚು ಜನರು ಮದ್ಯ ಸೇವನೆ ಮಾಡುತ್ತಾರೆಂಬ ಅಚ್ಚರಿಯ ಸಂಗತಿ ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯಲ್ಲಿ ಹೊರಬಿದ್ದಿದೆ. ಬಾಲಿವುಡ್‌ ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ದಿಮೆಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಮದ್ಯ ಸೇವನೆಯೂ ಹೆಚ್ಚಿರಬಹುದು ಎಂಬ ಜನಪ್ರಿಯ ನಂಬಿಕೆಯಿದ್ದರೂ, ಮದ್ಯ ನಿಷೇಧವಿರುವ ಬಿಹಾರದಲ್ಲೇ ಮಹಾರಾಷ್ಟ್ರಕ್ಕಿಂತ ಹೆಚ್ಚು ಜನರು ಮದ್ಯ ಸೇವನೆ ಮಾಡುತ್ತಾರೆಂಬ ಸಂಗತಿ ಕುತೂಹಲಕ್ಕೆ ಕಾರಣವಾಗಿದೆ.

ಬಿಹಾರದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧವಿದ್ದರೂ ಅಲ್ಲಿ ಅಕ್ರಮವಾಗಿ ಮದ್ಯ ದೊರಕುತ್ತದೆ. ಹೀಗಾಗಿ ಅಲ್ಲಿನ ಶೇ.15.9ರಷ್ಟುಜನರು ಮದ್ಯ ಸೇವನೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಮದ್ಯ ನಿಷೇಧವಿಲ್ಲ. ಅಲ್ಲಿನ ಶೇ.14.3ರಷ್ಟುಜನರು ಮದ್ಯ ಸೇವನೆ ಮಾಡುತ್ತಾರೆ. ದೇಶದಲ್ಲೇ ಸಿಕ್ಕಿಂನಲ್ಲಿ ಅತಿಹೆಚ್ಚು ಜನರು, ಅಂದರೆ ಶೇ.56ರಷ್ಟುಮಂದಿ ಮದ್ಯಪಾನ ಮಾಡುತ್ತಾರೆ. ದೇಶದಲ್ಲಿ ಅತಿ ಕಡಿಮೆ ಜನರು ಮದ್ಯ ಸೇವನೆ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದ್ದು, ಇಲ್ಲಿ ಶೇ.17.4ರಷ್ಟುಜನರು ಮದ್ಯ ಸೇವನೆ ಮಾಡುತ್ತಾರೆ. ಮಹಿಳೆಯರು ಮದ್ಯಪಾನ ಮಾಡುವ ಪ್ರಮಾಣ ದೇಶಾದ್ಯಂತ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಿದೆ. ಸಿಕ್ಕಿಂನಲ್ಲಿ ದೇಶದಲ್ಲೇ ಅತಿಹೆಚ್ಚು ಶೇ.16.2ರಷ್ಟುಮಹಿಳೆಯರು ಮದ್ಯಪಾನ ಮಾಡುತ್ತಾರೆ.

ದೇಶದಲ್ಲಿ ಅತ್ಯಂತ ಕಡಿಮೆ ಮದ್ಯಪಾನ ಮಾಡುವ ಜನರಿರುವ ರಾಜ್ಯಗಳೆಂದರೆ ಗುಜರಾತ್‌ ಹಾಗೂ ಜಮ್ಮು ಮತ್ತು ಕಾಶ್ಮೀರ. ಗುಜರಾತ್‌ನಲ್ಲಿ ಸಂಪೂರ್ಣ ಪಾನನಿಷೇಧವಿದೆ. ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಂ ಬಾಹುಳ್ಯವಿದ್ದು, ಇಸ್ಲಾಂನಲ್ಲಿ ಮದ್ಯಪಾನ ನಿಷಿದ್ಧವಾಗಿದೆ.

ತಂಬಾಕು ಸೇವನೆಯಲ್ಲಿ ಮಿಜೋರಂ ನಂ.1:

ದೇಶದ ಎಲ್ಲಾ ರಾಜ್ಯಗಳಲ್ಲೂ ಮದ್ಯ ಸೇವನೆ ಮಾಡುವವರಿಗಿಂತ ತಂಬಾಕು ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಈಶಾನ್ಯ ರಾಜ್ಯಗಳಲ್ಲಿ ಅತಿಹೆಚ್ಚು ಜನರು ತಂಬಾಕು ಸೇವನೆ ಮಾಡುತ್ತಾರೆ. ಮಿಜೋರಂನಲ್ಲಿ ದೇಶದಲ್ಲೇ ಅತಿಹೆಚ್ಚು ಜನರು, ಅಂದರೆ ಶೇ.77.8 ಪುರುಷರು ಮತ್ತು ಶೇ.62 ಮಹಿಳೆಯರು ತಂಬಾಕು ಸೇವನೆ ಮಾಡುತ್ತಾರೆ. ಕರ್ನಾಟಕದಲ್ಲಿ ಶೇ.27 ಪುರುಷರು ಹಾಗೂ ಶೇ.8.5 ಮಹಿಳೆಯರು ತಂಬಾಕು ಸೇವನೆ ಮಾಡುತ್ತಾರೆ.

ಎಲ್ಲಿ, ಎಷ್ಟು ಮದ್ಯಪಾನಿಗಳು?

ಸಿಕ್ಕಿಂ ಶೇ.56

ತೆಲಂಗಾಣ ಶೇ.50

ಗೋವಾ ಶೇ.42.4

ಮಣಿಪುರ ಶೇ.38.4

ಕರ್ನಾಟಕ ಶೇ.17.4